ಗದಗ: ಈಗಾಗಲೇ ಸ್ವದೇಶಿ ನಿರ್ಮಿತ ಟ್ರ್ಯೂ ಲ್ಯಾಬ್ ಯಂತ್ರಗಳ ಮೂಲಕ ಮಹಾಮಾರಿ ಕೋವಿಡ್ ವೈರಾಣುಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಇದೀಗ ಆರ್‌ಟಿಪಿಸಿಆರ್ ಯಂತ್ರ ಕಾರ್ಯ ನಿರ್ವಹಣೆ ಪ್ರಾರಂಭಿಸಿದ್ದು, ದಿನಕ್ಕೆ ಸುಮಾರು 200 ಮಾದರಿಗಳನ್ನು ಪರೀಕ್ಷಿಸುವಷ್ಟು ಸಾಮರ್ಥ್ಯ ಹೆಚ್ಚಿಸಿಕೊಂಡಿದೆ.
ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸೆಯಲ್ಲಿ ಹೆಸರಾದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಇದೀಗ ಕೋವಿಡ್ ಟೆಸ್ಟ್ ಲ್ಯಾಬ್ ಆರಂಭಿಸಿದೆ. ಏಪ್ರಿಲ್ ತಿಂಗಳ ಅಂತ್ಯದಲ್ಲಿ ಕ್ಷಯರೋಗ ಪತ್ತೆಗೆ ಬಳಸುವ ಟ್ರ್ಯೂ ನೆಟ್ ಪಿಸಿಆರ್ ಯಂತ್ರದಲ್ಲಿ ಸಾಕಷ್ಟು ಸುಧಾರಣೆ ತಂದು, ಕೋವಿಡ್ ಪತ್ತೆಗೆ ಅಣಿಗೊಳಿಸುವ ಮೂಲಕ ವೈದ್ಯಕೀಯ ಲೋಕವನ್ನು ಅಚ್ಚರಿ ಮೂಡಿಸಿತ್ತು. ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೋವಿಡ್-19 ಪರೀಕ್ಷೆಗೆ ಟ್ರ್ಯೂ ನೆಟ್ ಹಾಗೂ ಸಿಬಿ ನೆಟ್ ಯಂತ್ರ ಬಳಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸರಕಾರ ಪೂರೈಸಿದ ಆರ್‌ಟಿಪಿಸಿಆರ್ ಯಂತ್ರ ಗುರುವಾರ ಸಂಜೆಯಿಂದ ಕಾರ್ಯನಿರ್ವಹಣೆ ಆರಂಭಿಸಿದೆ. ಆರ್‌ಟಿಪಿಸಿಆರ್ ಯಂತ್ರದಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗುವ ಮಾದರಿಗಳ ಫಲಿತಾಂಶ ಅತ್ಯಂತ ನಿಖರವಾಗಿರಲಿವೆ ಎನ್ನುತ್ತಾರೆ ಜಿಮ್ಸ್ ವೈದ್ಯರು.
ಜಿಮ್ಸ್ ಬಲ ಹೆಚ್ಚಿಸಿದ ಆರ್‌ಟಿಪಿಸಿಆರ್: ಜಿಮ್ಸ್‌ನಲ್ಲಿ ಏಪ್ರಿಲ್ ಅಂತ್ಯದಿಂದ ಎರಡು ಟ್ರ್ಯೂ ನೆಟ್ ಲ್ಯಾಬ್ ಕಾರ್ಯನಿರ್ವಹಣೆ ಆರಂಭಿಸಿದ್ದವು. ಇದರಲ್ಲಿ ಪ್ರತಿ ಗಂಟೆಗೆ ಒಂದರಂತೆ ದಿನಕ್ಕೆ 20 ಮಾದರಿಗಳನ್ನು ಮಾತ್ರ ಪರೀಕ್ಷೆ ಮಾಡಲಾಗುತ್ತಿತ್ತು. ಈ ಪರೀಕ್ಷೆಯಲ್ಲಿ ವರದಿ ನಕಾರಾತ್ಮಕವಾಗಿ ಕಂಡು ಬಂದಲ್ಲಿ ಅದನ್ನು ನಕಾರಾತ್ಮಕ ಫಲಿತಾಂಶ ಎಂದು ದೃಢೀಕರಿಸಲಾಗುತ್ತದೆ. ಆದರೆ, ಫಲಿತಾಂಶ ಸಕಾರಾತ್ಮಕ (ಪಾಸಿಟಿವ್) ಕಂಡು ಬಂದರೆ, ಅದನ್ನು ಮರು ಪರಿಶೀಲನೆಗಾಗಿ ಮುಂದಿನ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಈ ನಡುವೆ ಜೆನೆ ಎಕ್ಸ್‌ಪರ್ಟ್ ಎಂಬ ಯಂತ್ರವೂ ಲಭ್ಯವಾಗಿದೆ. ಇದು ಟ್ರ್ಯೂ ನೆಟ್‌ಗಿಂತ ಫಲಿತಾಂಶದಲ್ಲಿ ಹೆಚ್ಚಿನ ನಿಖರತೆಯನ್ನು ಹೊಂದಿರುತ್ತದೆ. ಇನ್ನುಳಿದಂತೆ ಗುರುವಾರ ಸಂಜೆಯಿಂದ ಕಾರ್ಯಾಚರಣೆ ಆರಂಭಿಸಿರುವ ಆರ್‌ಟಿಪಿಸಿಆರ್ ಯಂತ್ರ ಕೋವಿಡ್-19 ಹೋರಾಟದಲ್ಲಿ ಜಿಮ್ಸ್ ಬಲ ಹೆಚ್ಚಿಸಿದೆ. ಜಿಮ್ಸ್‌ನಲ್ಲಿ ಸದ್ಯ ಒಂದು ಆರ್‌ಟಿಪಿಸಿಆರ್ ಯಂತ್ರದಲ್ಲಿ ಪ್ರಯೋಗ ಶುರುವಾಗಿದೆ. ಒಂದು ಸುತ್ತಿನ ಪರೀಕ್ಷೆಗೆ 5 ಗಂಟೆಗಳ ಸಮಯ ತೆಗೆದುಕೊಳ್ಳಲಿದ್ದು, ಪ್ರತಿ ಸುತ್ತಿನಲ್ಲಿ ಒಟ್ಟು 62 ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಬಹುದಾಗಿದೆ ಎನ್ನುತ್ತಾರೆ ತಜ್ಞರು.
ನಿಖರ ಫಲಿತಾಂಶ: ಟ್ರ್ಯೂ ನೆಟ್ ಹಾಗೂ ಜೆನೆ ಎಕ್ಸ್‌ಪರ್ಟ್ ಗಳಿಗಿಂತ ಆರ್‌ಟಿಪಿಸಿಆರ್ ಲ್ಯಾಬ್‌ನಿಂದ ಬರುವ ಫಲಿತಾಂಶ ಅತ್ಯಂತ ನಿಖರವಾಗಿರುತ್ತದೆ. ಇದರಿಂದ ಬರುವ ಫಲಿತಾಂಶವನ್ನು ಮರು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ. ಹೀಗಾಗಿ ಯಥಾವತ್ತಾಗಿ ಪ್ರಕಟಿಸಿ, ಚಿಕಿತ್ಸೆ ಆರಂಭಿಸಲಾಗುತ್ತದೆ ಎನ್ನುತ್ತಾರೆ ಜಿಮ್ಸ್ ನಿರ್ದೇಶಕ ಡಾ| ಪಿ.ಎಸ್.ಭೂಸರಡಿ
ಕೋವಿಡ್-19 ವಿರುದ್ಧದ ಸಮರದಲ್ಲಿ ಗಂಟಲಿನ ದ್ರಾವಣ ಪರೀಕ್ಷಿಸುವ ಆರ್‌ಟಿಪಿಸಿಆರ್ ಲ್ಯಾಬ್ ಆರಂಭಗೊಂಡಿದ್ದರಿಂದ ಜಿಮ್ಸ್‌ಗೆ ಆನೆ ಬಲ ಬಂದಂತಾಗಿದೆ. ಕೆಲ ದಿನಗಳ ಹಿಂದೆಯೇ ಯಂತ್ರ ಬಂದಿದ್ದು, ತಜ್ಞರ ಕೊರತೆ ಹಾಗೂ ಸ್ಥಳೀಯ ಸಿಬ್ಬಂದಿಗೆ ಮಾರ್ಗದರ್ಶನಕ್ಕಾಗಿ ಕಾರ್ಯಾರಂಭಿಸುವುದು ತಡವಾಗಿದೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಣೆಗೆ 9 ಜನ ನುರಿತ ತಂತ್ರಜ್ಞರ ಅಗತ್ಯವಿದ್ದು, ಸದ್ಯ ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ಜಿಲ್ಲಾಧಿಕಾರಿಗಳು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದಾರೆ.
-ಡಾ| ಪಿ.ಎಸ್.ಭೂಸರಡ್ಡಿ ಜಿಮ್ಸ್ ನಿರ್ದೇಶಕ.
-ವಿಶೇಷ ವರದಿ