Advertisement
ಜಿಲ್ಲೆಯಲ್ಲಿ ಮಾ. 19ರಿಂದ ವಾಹನ ನೋಂದಣಿಯನ್ನೇ ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು, ಮಾ. 26ರೊಳಗೆ ಸಾಫ್ಟ್‌ವೇರ್ ಅಪ್‌ಡೇಟ್ ಪೂರ್ಣಗೊಳಿಸಿ, ಮಾ. 27ರಿಂದ ಹೊಸ ವಾಹನಗಳ ನೋಂದಣಿ ಪ್ರಾರಂಭಿಸಲಾಗುವುದು ಎಂದು R.T.O. ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ‘ವಾಹನ-4’ ಸಾಫ್ಟ್ ವೇರ್ ಅಪ್‌ಡೇಟ್ ಕಾರ್ಯ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಕಳೆದ ಒಂದು ವಾರದಿಂದ ಸ್ಥಗಿತವಾಗಿದ್ದ ವಾಹನಗಳ ನೋಂದಣಿ ಕಾರ್ಯ ಮತ್ತಷ್ಟು ವಿಳಂಬವಾಗಲಿದೆ. ಜಿಲ್ಲೆಯಲ್ಲಿರುವ ಹೊಸ ವಾಹನ ಮಾರಾಟ ಡೀಲರ್‌ಗಳು ನೋಂದಣಿ ಪ್ರಕ್ರಿಯೆ ಸಾಧ್ಯವಾಗದ ಹಿನ್ನೆಲೆಯಲ್ಲಿ ವಹಿವಾಟಿನಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದು ಸಹಜವಾಗಿ ವಾಹನ ಉದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡುತ್ತಿದೆ.
Related Articles
Advertisement
ನೋಂದಣಿ ನವೀಕರಣಕ್ಕೂ ಆತಂಕನೋಂದಣಿ ನವೀಕರಣ ಪ್ರಕ್ರಿಯೆಯನ್ನು ಸಕಾಲದಲ್ಲಿ ಮಾಡಿಸದಿದ್ದರೆ ಸಾರಿಗೆ ವಾಹನಗಳಿಗೆ ದಿನಕ್ಕೆ 50 ರೂ. ನಂತೆ ಮತ್ತು ಸಾರಿಗೇತರ ವಾಹನಗಳಾದ ಕಾರುಗಳಿಗೆ ದಿನಕ್ಕೆ 500 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ ದಿನಕ್ಕೆ 300 ರೂ.ಗಳಂತೆ ಸಾರಿಗೆ ಇಲಾಖೆ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡುತ್ತಿದೆ. ಆದರೆ ಈಗ ಇಲಾಖೆಯೇ ನೋಂದಣಿ ನವೀಕರಣವನ್ನು ತಡೆ ಹಿಡಿದಿದೆ. ಮಾ. 19ರಿಂದ 26ರ ತನಕ ಲೈಸೆನ್ಸ್ ನವೀಕರಣ ಮಾಡಿಲ್ಲ. ಮಾ. 31ರ ತನಕ ನೋಂದಣಿ ಅನುಮಾನ. ಈ ಅವಧಿಯಲ್ಲಿ ಬಹಳಷ್ಟು ಮಂದಿಯ ಲೈಸೆನ್ಸ್ ನವೀಕರಣ ಮಾಡಲೇಬೇಕಾದ ಅನಿವಾರ್ಯತೆ ಇರಬಹುದಾಗಿದ್ದು, ಅವರೆಲ್ಲರೂ ಇಲಾಖೆಯ ಎಡವಟ್ಟಿನಿಂದಾಗಿ ದಂಡ ಪಾವತಿಸಬೇಕಾಗಬಹುದು ಎಂಬ ಆತಂಕದಲ್ಲಿದ್ದಾರೆ. ವಾಹನ 4 ಸಾಫ್ಟ್‌ವೇರ್
ರಾಷ್ಟ್ರಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಒಂದೇ ತಂತ್ರಾಂಶದಡಿ ತರುವ ಉದ್ದೇಶದೊಂದಿಗೆ ವಾಹನ್ 4 ವ್ಯವಸ್ಥೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ದ.ಕ. ಜಿಲ್ಲೆಯ ಮಂಗಳೂರು ಹಾಗೂ ಬಂಟ್ವಾಳ ವಿಭಾಗದಲ್ಲಿ ಇದನ್ನು ಅನುಷ್ಠಾನಿಸುವ ಸಂಬಂಧ ಸಾಫ್ಟ್ವೇರ್ ಅಳವಡಿಕೆ ಕಾರ್ಯ ಕಳೆದ ಒಂದು ವಾರದಿಂದ ನಡೆಯುತ್ತಿದೆ. ಕೇಂದ್ರದ ಎನ್‌ಐಸಿ (ನ್ಯಾಷನಲ್ ಇನ್ಫ್ಯಾರ್ಮೆಟಿಕ್ಸ್ ಸೆಂಟರ್) ಈ ಸಾಫ್ಟ್ವೇರನ್ನು ಅಭಿವೃದ್ಧಿಪಡಿಸುತ್ತಿದೆ. ಸಾಫ್ಟ್‌ವೇರ್ ಅಳವಡಿಕೆ ಪೂರ್ಣವಾಗಿಲ್ಲ
‘ವಾಹನ-4’ ಸಾಫ್ಟ್ವೇರ್ ಅನುಷ್ಠಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಡಿಎಲ್ ಹಾಗೂ ಎಲ್‌ಎಲ್‌ಆರ್ ಹೊರತುಪಡಿಸಿ ವಾಹನ ನೋಂದಣಿಯನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯ ಸೂಚನೆಯ ಮೇರೆಗೆ ನೋಂದಣಿ ನಡೆಸುತ್ತಿಲ್ಲ. ಮಾ. 27ರಿಂದ ಆರ್‌ಟಿಒ ಕಚೇರಿಯಲ್ಲಿ ವಾಹನ-4 ಸಾಫ್ಟ್‌ವೇರ್‌ನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವ ಬಗ್ಗೆ ತಿಳಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಗೆ ಇನ್ನೂ ಒಂದೆರಡು ದಿನ ತಗಲುವ ನಿರೀಕ್ಷೆ ಇದೆ.
– ಜಿ.ಎಸ್. ಹೆಗಡೆ, ಪ್ರಾದೇಶಿಕ ಸಾರಿಗೆ ಆಯುಕ್ತರು (ಪ್ರಭಾರ), ಮಂಗಳೂರು.
ಅಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಹೊಡೆತ
“ವಾಹನ-4′ ಸಾಫ್ಟ್ವೇರ್ ಅನುಷ್ಠಾನ ಸ್ವಾಗತಾರ್ಹ. ಆದರೆ ಈ ನೆಪದಿಂದ ಆರ್ಥಿಕ ವರ್ಷದ ಕೊನೆಯಲ್ಲಿ ವಾಹನ ನೋಂದಣಿಯನ್ನೇ ಸ್ಥಗಿತಗೊಳಿಸಿರುವುದರಿಂದ ಆಟೋ ಮೊಬೈಲ್ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ. ಹೊಸ ವ್ಯವಸ್ಥೆಯಿಂದ ಉಪಕಾರ ಆಗುವುದಾದರೂ ಒಂದು ವಾರ ನೋಂದಣಿಯೇ ಆಗದಿರುವುದರಿಂದ ಆಟೋಮೊಬೈಲ್ ಕ್ಷೇತ್ರದಲ್ಲಿ ಬಹಳಷ್ಟು ಕೆಟ್ಟ ಪರಿಣಾಮವನ್ನು ನಾವು ಎದುರಿಸುವಂತಾಗಿದೆ.
– ವತಿಕಾ ಪೈ, ಅಧ್ಯಕ್ಷರು, ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ