ಬೆಂಗಳೂರು: ಕೆಲವು ಮಾಹಿತಿ ಹಕ್ಕು ಕಾರ್ಯಕರ್ತರ ಕಿರುಕುಳ, ಸುಲಿಗೆ, ಬೆದರಿಕೆಗಳಿಗೆ ಬೇಸತ್ತು ರಾಜ್ಯದ ದೇವಾಲಯಗಳ ಅರ್ಚಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದೇವಾಲಯಗಳು ಸಾರ್ವಜನಿಕ ಸಂಸ್ಥೆಗಳಲ್ಲ. ಮಾಹಿತಿ ಹಕ್ಕು ಕಾರ್ಯಕರ್ತರ ಕಿರುಕುಳದಿಂದ ಮುಕ್ತಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆ-2005ರ ಸೆಕ್ಷನ್ 2 (ಎಚ್)ರ ಅನ್ವಯ ದೇವಸ್ಥಾನಗಳು ಸಾರ್ವಜನಿಕ ಸಂಸ್ಥೆಗಳು ಅಲ್ಲ ಎಂದು ಘೋಷಿಸುವಂತೆ ಕೋರಿ ಅಖೀಲ ಕರ್ನಾಟಕ ಹಿಂದೂ ದೇವಸ್ಥಾನಗಳ ಪುರೋಹಿತರು, ಆಗಮಿಕರು ಹಾಗೂ ಅರ್ಚಕರ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಸಂಘದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ| ಎನ್.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು. ಸ್ವಲ್ಪ ಹೊತ್ತು ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಜೂನ್ 11ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಎನ್.ಆರ್. ನಾಗರಾಜ್ ವಾದ ಮಂಡಿಸಿದರು.
ದೇವಾಲಯಗಳು ಸಾರ್ವಜನಿಕ ಸಂಸ್ಥೆಗಳಲ್ಲ ಎಂದು ದೇಶದ ಹಲವು ಹೈಕೋರ್ಟ್‌ಗಳು ಹೇಳಿದ್ದರೂ, ತಯಾರಿಸುವ ಪ್ರಸಾದದಲ್ಲಿ ಎಷ್ಟು ಸಕ್ಕರೆ, ಅಕ್ಕಿ, ಉಪ್ಪು-ಖಾರ ಬಳಸಲಾಗುತ್ತದೆ? ಪ್ರತಿದಿನ ಪೂಜೆ-ಅರ್ಚನೆಗಳಿಂದ ಎಷ್ಟು ಹಣ ಸಿಗುತ್ತದೆ? ಅದೆನ್ನು ಯಾವುದಕ್ಕೆ ಖರ್ಚು ಮಾಡಲಾಗುತ್ತದೆ ಮುಂತಾದ ಮಾಹಿತಿಗಳನ್ನು ಕೇಳಲಾಗುತ್ತದೆ. ಕೇಳಿದ ಮಾಹಿತಿ ಕೊಡದಿದ್ದರೆ ನಾನಾ ರೀತಿ ಕಿರುಕುಳ, ಬೆದರಿಕೆ ಹಾಕಲಾಗುತ್ತದೆ ಎಂದು ಕೋರ್ಟ್ ಗಮನಕ್ಕೆ ತರಲಾಗಿದೆ.
ಬೇಡಿಕೆ ಏನು?
ಇದರಿಂದ ಅರ್ಚಕರ ಕಾರ್ಯ ನಿರ್ವಹಣೆಗೆ ತೊಂದರೆಯಾಗುತ್ತಿದ್ದು, ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯ್ದೆಯಿಂದ ಹೊರಗಿಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.