ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ 2019-20ನೇ ಸಾಲಿಗೆ ಪ್ರವೇಶ ಪಕ್ರಿಯೆ ವೇಳಾಪಟ್ಟಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೆಲವು ಬದಲಾವಣೆ ಮಾಡಿದ್ದು, ಮೇ 6ಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಸಲಿದೆ.
ಆರ್‌ಟಿಇ ಕಾಯ್ದೆಯ ಸೆಕ್ಷನ್ 12(1)(ಬಿ) ಮತ್ತು ಸೆಕ್ಷನ್ 12(1)(ಸಿ) ತಿದ್ದುಪಡಿ ಮಾಡಿರುವುದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇಲ್ಲದ ಕಡೆಗಳಲ್ಲಿ ಮಾತ್ರ ಖಾಸಗಿ ಶಾಲೆಗೆ ಆರ್‌ಟಿಇ ಅಡಿ ಮಕ್ಕಳನ್ನು ಸೇರಿಸಲು ಸಾಧ್ಯ.
ಆನ್‌ಲೈನ್ ಮೂಲಕ ಮೇ 6ರಂದು ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಮೇ 8ರಿಂದ 15ವರೆಗೆ ಸೀಟು ಪಡೆದ ಮಕ್ಕಳ ದಾಖಲಾತಿ ಇರುತ್ತದೆ. ಇದೇ ಸಂದರ್ಭದಲ್ಲಿ ಶಾಲೆಗಳಲ್ಲೂ ದಾಖಲಾತಿ ಪಡೆದ ಮಕ್ಕಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ಮೇ 25ಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ನಡೆಯಲಿದೆ. ಮೇ 27ರಿಂದ ಮೇ 30ರವರೆಗೆ ಎರಡನೇ ಸುತ್ತಿನಲ್ಲಿ ಸೀಟು ಪಡೆದ ಮಕ್ಕಳ ದಾಖಲಾತಿ ಹಾಗೂ ಮಾಹಿತಿ ಅಪ್‌ಲೋಡ್ ಕಾರ್ಯ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.
2019-20ನೇ ಸಾಲಿಗೆ ಮಕ್ಕಳನ್ನು ಆರ್‌ಟಿಇ ಅಡಿ ಸೇರಿಸಲು ಅರ್ಜಿ ಸಲ್ಲಿಸಿದ ಪಾಲಕ ಪೋಷಕರ ಆಧಾರ್ ಕಾರ್ಡ್‌ಗಳ ಸಂಖ್ಯೆಯನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.