Advertisement

ಆರ್‌ಟಿಇ ಸೀಟು ಲಕ್ಷದಿಂದ 2,400ಕ್ಕೆ ಇಳಿಕೆ!

12:30 AM Mar 20, 2019 | |

 ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯ(ಆರ್‌ಟಿಇ)ನಿಯಮಗಳ ಅನುಸಾರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆಗಳಲ್ಲಿ ಲಭ್ಯವಾಗುವ ಸೀಟುಗಳು ಕೇವಲ 2300 ರಿಂದ 2400 ಮಾತ್ರ! ನೆರೆಹೊರೆಯಲ್ಲಿ ಸರ್ಕಾರಿ ಶಾಲೆಗಳಿದ್ದರೆ ಖಾಸಗಿ ಶಾಲೆಗಳಿಗೆ ಆರ್‌ಟಿಇ ಅರ್ಜಿ ಸಲ್ಲಿಸಲು ಅವಕಾಶ ನಿರಾಕರಿಸಿ, ರಾಜ್ಯ ಸರ್ಕಾರ ನಿಯಮಾವಳಿಗಳಿಗೆ ತಿದ್ದುಪಡಿ ತಂದಿರುವುದರಿಂದ 2019-20ನೇ ಸಾಲಿಗೆ ಬೆರಳೆಣಿಕೆಯಷ್ಟು ಮಾತ್ರ ಸೀಟು ಲಭ್ಯವಾಗಲಿವೆ. ಮಾ.20ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ವಿಶೇಷವೆಂದರೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 500 ಸೀಟು ಕೂಡ ಲಭ್ಯವಾಗುವುದಿಲ್ಲ. ಸರ್ಕಾರ ಆದೇಶದಂತೆ ಆರ್‌ಟಿಇ ಅರ್ಜಿ ಯನ್ನು ಆನ್‌ಲೈನ್‌ ಮೂಲಕ ಆಹ್ವಾನಿಸಿದ್ದೇವೆ. ಮಾ.20ರಿಂದ ಪ್ರಕ್ರಿಯೆ ಆರಂಭವಾಗಲಿದೆ. //www.schooleducation.kar.nic.in/ ನಲ್ಲಿ ಆರ್‌ಟಿಇ ಸಂಬಂಧಿಸಿದ ಎಲ್ಲ ಮಾಹಿತಿ ಇದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ನಿಯಮಗಳಿಗೆ ತಿದ್ದುಪಡಿ 2012-13ರಲ್ಲಿ ರಾಜ್ಯದಲ್ಲಿ ಆರ್‌ಟಿಇ ಅನುಷ್ಠಾನ ಮಾಡಲಾಯಿತು. ಈಗ ರಾಜ್ಯ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯ ನಿಮಯಕ್ಕೆ ಕೆಲವೊಂದು ಬದಲಾವಣೆ ತಂದು 2019-20ನೇ ಸಾಲಿಗೆ ಆರ್‌ಟಿಇ ಸೆಕ್ಷನ್‌ 12(1) (ಬಿ) ಮತ್ತು 12(1)(ಸಿ) ಅಡಿಯಲ್ಲಿ ಮಾತ್ರ ಪ್ರವೇಶ ಕಲ್ಪಿಸಿದೆ. ಇದರನ್ವಯ ನಗರ ಪ್ರದೇಶದಲ್ಲಿ ವಾರ್ಡ್‌ ಅಥವಾ ಗ್ರಾಮೀಣ ಭಾಗದ ಕಂದಾಯ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದಲ್ಲಿ ಖಾಸಗಿ ಶಾಲೆಗೆ ಆರ್‌ಟಿಇ ಅಡಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಆರ್‌ಟಿಇ-2019ರ ಸಾಫ್ಟ್ವೇರ್‌ನಲ್ಲಿ ನೆರೆಹೊರೆ ಶಾಲೆಗಳ ಪಟ್ಟಿಯನ್ನುಪ್ರಕಟಿಸಲಾಗಿದೆ. ಆದರೆ, ಎಷ್ಟು ಜಿಲ್ಲೆಗಳಲ್ಲಿ ಆರ್‌ಇಟಿ ಸೀಟು ಖಾಸಗಿ ಶಾಲೆಗಳಲ್ಲಿ ಲಭ್ಯವಿದೆ ಎಂಬುದು ಅದರಲ್ಲಿಲ್ಲ.

2012-13ರಲ್ಲಿ 49,282 ಮಕ್ಕಳು, 2013-14ರಲ್ಲಿ 73,108 ಮಕ್ಕಳು, 2014-15 93,690 ಮಕ್ಕಳು, 2015-16ರಲ್ಲಿ 1 ಲಕ್ಷ ಮಕ್ಕಳು, 2016-17ರಲ್ಲಿ 97,971 ಮಕ್ಕಳು, 2017-18ರಲ್ಲಿ 1.08 ಲಕ್ಷ ಹಾಗೂ 2018-19ರಲ್ಲಿ 1.11 ಲಕ್ಷ ಮಕ್ಕಳು ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ಸೀಟು ಪಡೆದಿದ್ದರು. 2012-13ರಿಂದ ಈಚೆಗೆ ಸುಮಾರು 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯದಡಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಈವರ್ಷ ನಿಯಮಕ್ಕೆ ತಿದ್ದುಪಡಿ ತಂದಿದ್ದರಿಂದ ಸೀಟಿನ ಪ್ರಮಾಣ ಲಕ್ಷದಿಂದ ಸಾವಿರಕ್ಕೆ ಇಳಿದಿದೆ. ಅದು ಕೂಡ ಭರ್ತಿಯಾಗುವುದು ಡೌಟ್‌ ಫ‌ುಲ್‌. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾದ ನಂತರ ಆರ್‌ಟಿಇ ಸಹಾಯವಾಗಿ ನೂರಾರು ಕಡೆಗಳಿಂದ ಕರೆ ಬರೆಲು ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next