Advertisement
ಭಾಷಾ ಅಲ್ಪಸಂಖ್ಯಾತ ಮಾನ್ಯತೆಯ ಪ್ರಮಾಣ ಪತ್ರ ಪಡೆಯದೆಯೇ ತಮ್ಮದು ಭಾಷಾ ಅಲ್ಪಸಂಖ್ಯಾತ ಶಾಲೆಯೆಂದು ಆರ್‌ಟಿಇ ಪ್ರವೇಶ ನಿರಾಕರಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದವು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ 2016ರ ಅ.17ರಂದು ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. 2017ರ ಜ.16ರಂದು ಪ್ರಕರಣ ಇತ್ಯರ್ಥ ಪಡಿಸಿ ತಡೆಯಾಜ್ಞೆ ತೆರವುಗೊಳಿಸಿದ್ದ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯಪೀಠ ಭಾಷಾ ಅಲ್ಪಸಂಖ್ಯಾತ ಮಾನ್ಯತೆ ಸಿಗುವವರೆಗೂ ಆರ್‌ಟಿಇಯಡಿ ಶೇ.25ರಷ್ಟು ಸೀಟುಗಳ ಪ್ರವೇಶ ನೀಡಬೇಕು, ಜತೆಗೆ ಶೇ.10ರಷ್ಟು ಇತರೆ ಸೀಟುಗಳನ್ನು ಬ್ಯಾಕ್‌ಲಾಗ್ ಆಧಾರದಲ್ಲಿ ಆರ್‌ಟಿಇಯಡಿ ಪ್ರವೇಶಕ್ಕೆ ನೀಡಬೇಕು ಎಂದು ಆದೇಶಿಸಿತ್ತು.
ಹೈಕೋರ್ಟ್ ಆದೇಶಾನುಸಾರ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಭಾಷಾ ಅಲ್ಪಸಂಖ್ಯಾತ ಶಾಲೆ ಎಂದು ಆರ್‌ಟಿಇ ಪ್ರವೇಶದಿಂದ ವಿನಾಯಿತಿ ಪಡೆದಿದ್ದ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 37 ಶಾಲೆಗಳಿಂದ ಈ ಬಾರಿ ಶೇ.25ರಷ್ಟು ಆರ್‌ಟಿಇ ಸೀಟುಗಳ ಜತೆಗೆ ಹೆಚ್ಚುವರಿಯಾಗಿ ಶೇ.10ರಷ್ಟು ಇತರೆ ಸೀಟುಗಳನ್ನೂ ಪಡೆಯಲು ಕ್ರಮ
ಕೈಗೊಂಡಿದೆ.
Related Articles
Advertisement
ನ್ಯಾಯಾಲಯದ ಆದೇಶ ಆಗಿರುವ ಶಾಲೆಗಳ ಜತೆಗೆ ಇದೇ ರೀತಿ ಪ್ರಮಾಣ ಪತ್ರ ಇಲ್ಲದಿದ್ದರೂ ಭಾಷಾ ಅಲ್ಪಸಂಖ್ಯಾತ ಹೆಸರಲ್ಲಿ ಈ ಹಿಂದೆ ಯಾವ್ಯಾವ ಶಾಲೆಗಳು ಆರ್‌ಟಿಇ ಪ್ರವೇಶ ವಿನಾಯಿತಿ ಪಡೆದಿದ್ದವೋ ಆ ಎಲ್ಲಾ ಪ್ರಕರಣಗಳಿಗೂ ಇದೇ ರೀತಿಯಲ್ಲಿ ಶೇ.10ರಷ್ಟು ಹೆಚ್ಚುವರಿ ಸೀಟುಗಳನ್ನು ಆರ್‌ಟಿಇಯಡಿ ಪಡೆಯಲು ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಡಿಡಿಪಿಐ, ಬಿಇಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಏನಿದು ಪ್ರಕರಣ?
ಭಾಷಾ ಅಲ್ಪಸಂಖ್ಯಾತ ಶಾಲೆಗಳು ಆರ್‌ಟಿಇ ವ್ಯಾಪ್ತಿಗೆ ಬರುವುದಿಲ್ಲ. ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಆಯೋಗದಿಂದ ಮಾನ್ಯತೆ ಪಡೆದು ಸಂಬಂಧಿಸಿದ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದರೆ ಆ ಶಾಲೆಗಳು ಆರ್‌ಟಿಇ ಕಾಯ್ದೆಯಿಂದ ವಿನಾಯಿತಿ ಪಡೆಯಬಹುದು. ಆದರೆ, ರಾಜ್ಯದ 35ಕ್ಕೂ ಹೆಚ್ಚು ಭಾಷಾ ಅಲ್ಪಸಂಖ್ಯಾತ ಎಂದು ಹೇಳಿಕೊಳ್ಳುವ ಶಾಲೆಗಳು ಸರ್ಕಾರಕ್ಕೆ ಪೂರಕ ಪ್ರಮಾಣ ಪತ್ರವನ್ನು ಮಾತ್ರ ಸಲ್ಲಿಸಿರಲಿಲ್ಲ. ಹೀಗಾಗಿ,ಸರ್ಕಾರ ಈ ಶಾಲೆಗಳಲ್ಲಿನ ಶೇ.25ರಷ್ಟು ಸೀಟುಗಳನ್ನು ಆರ್‌ಟಿಯಡಿ ಪ್ರವೇಶಕ್ಕೆ ನೀಡುವಂತೆ 2014ರ ಜೂನ್‌ನಲ್ಲಿ ಆದೇಶ ನೀಡಿತ್ತು. ಕೆಲ ಖಾಸಗಿ ಶಾಲಾ ಸಂಘಟನೆಗಳು ಪ್ರತ್ಯೇಕವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಭಾಷಾ ಅಲ್ಪಸಂಖ್ಯಾತ ಮಾನ್ಯತೆ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ, ಅದು ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು, ಅಲ್ಲದೆ ನಾವು ಭಾಷಾ ಅಲ್ಪಸಂಖ್ಯಾತ ಮಾನ್ಯತೆ ಕೋರಿ ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಆದರೆ ಈ ವರೆಗೂ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ನಮಗೆ ಆರ್‌ಟಿಇ ಕಾಯ್ದೆಯಿಂದ
ವಿನಾಯಿತಿ ನೀಡುವಂತೆ ಕೋರಿದ್ದವು. – ಲಿಂಗರಾಜು ಕೋರಾ