Advertisement

ಹಳ್ಳ ಹಿಡಿದಿರುವ ಆರ್‌ಟಿಇ ಯೋಜನೆ

10:40 AM May 31, 2019 | Team Udayavani |

ಚನ್ನಪಟ್ಟಣ: ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ದಾಖಲಾಗಿರುವ ಮಕ್ಕಳಿಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಒಂದೆಡೆಯಾ ದರೆ, ನಕಲಿ ದಾಖಲೆ ಸೃಷ್ಟಿಸಿ, ಕೆಲ ಪ್ರಭಾವಿಗಳು ಆರ್‌ಟಿಇ ಅಡಿ ತಮ್ಮ ಮಕ್ಕಳಿಗೆ ದಾಖಲಾತಿ ಪಡೆಯುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರಚಿ ದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಪ್ರತಿ ಮಗುವಿಗೂ ಕಡ್ಡಾಯ ಹಾಗೂ ಗುಣ ಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಶಯ ದೊಂದಿಗೆ ಸರ್ಕಾರ ಆರ್‌ಟಿಇ ಮೂಲಕ ಬಡ ಮಕ್ಕಳಿಗೆ ವಾಸವಿರುವ ನೆರೆಹೊರೆಯ ಖಾಸಗಿ ಶಾಲೆಗಳಲ್ಲಿ ಹಣ ಪಾವತಿಸಿ, ಉಚಿತ ಕಲಿಕೆಗೆ ಅವಕಾಶಮಾಡಿಕೊಟ್ಟಿದೆ. ಆದರೆ ಕೆಲವರು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸರ್ಕಾರದ ಮೂಲ ಆಶಯಕ್ಕೆ ಧಕ್ಕೆ ತಂದಿದ್ದಾರೆ.

Advertisement

ನಕಲಿ ದಾಖಲೆ ಸೃಷ್ಟಿಸಿ ಪ್ರವೇಶಾತಿ: ಗ್ರಾಮೀಣ ಭಾಗದಲ್ಲಿ ವಾಸವಿರುವ ಕೆಲ ಸ್ಥಿತಿವಂತರು, ತಾವು ಪಟ್ಟಣ ಪ್ರದೇಶದಲ್ಲಿ ವಾಸಿಸುತ್ತಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರ್‌ಟಿಇ ಅಡಿಯಲ್ಲಿ ತಮ್ಮ ಮಕ್ಕಳಿಗೆ ಪ್ರವೇಶಾತಿ ಪಡೆದಿದ್ದಾರೆ‌. ತಾವು ದಾಖಲು ಮಾಡಬೇಕು ಎಂದುಕೊಂಡಿರುವ ಶಾಲೆಗಳ ಅಕ್ಕ ಪಕ್ಕದಲ್ಲಿಯೇ ವಾಸವಿರುವ ಬಗ್ಗೆ ನಗರಸಭೆಯಲ್ಲಿ ನಕಲಿ ವಾಸಸ್ಥಳ ದೃಢೀಕರಣ ಪಡೆದುಕೊಂಡು ದಾಖಲಾತಿ ವೇಳೆ ಅರ್ಜಿಯೊಂದಿಗೆ ಸಲ್ಲಿಸಿ ಸೀಟು ಪಡೆದು ಸರ್ಕಾರಕ್ಕೆ ವಂಚನೆ ಯೆಸಗಿದ್ದಾರೆ. ಆದರೆ ಮಕ್ಕಳ ಹಾಗೂ ವಾಸಸ್ಥಳದ ದಾಖಲೆ ಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿಯೇ ಸರ್ಕಾರದ ಉದ್ದೇಶ ಹಳ್ಳಹಿಡಿದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪೋಷಕರ ವಾಸಸ್ಥಳ ದಿಢೀರ್‌ ಸ್ಥಳಾಂತರ: ಪೋಷಕರು ತಮ್ಮ ಮಕ್ಕಳಿಗಾಗಿ ಆರ್‌ಟಿಇ ಅಡಿಯಲ್ಲಿ ಅರ್ಜಿ ಸಲ್ಲಿಸುವಾಗ ತಮ್ಮ ಮೂಲ ವಾಸಸ್ಥಳವನ್ನು ಗ್ರಾಮೀಣ ಪ್ರದೇಶದಲ್ಲಿದೆ ಎಂದು ದಾಖಲಿಸಿದ್ದಾರೆ.

ಆದರೆ ತಮ್ಮ ಮಗುವನ್ನು ದಾಖಲಿಸಬೇಕೆಂದಿರುವ ಖಾಸಗಿ ಶಾಲೆಗೆ ತಮ್ಮ ವಾಸಸ್ಥಳ 5 ಕಿಮೀ ಒಳಗೆ ಇದೇ ಎಂದು ದಾಖಲಾತಿಗಳನ್ನು ಪ್ರಭಾವಿಗಳು ಲಗತ್ತಿಸಿದ್ದಾರೆ. ಆದರೆ ದಾಖಲಾತಿ ಸಮಯದಲ್ಲಿ ಅವರ ವಾಸಸ್ಥಳ ಮಾತ್ರ ತಾವು ದಾಖಲಿಸಬೇಕಾದ ಶಾಲೆಯ ಸನಿಹದಲ್ಲೇ ಇದೆ. ದಾಖಲಾತಿಗಾಗಿ ಅವರು ಮನೆ ತೊರೆದು ಶಾಲೆಯ ಸನಿಹಕ್ಕೆ ಬಂದಿದ್ದಾರೋ ಅಥವಾ ಇಲ್ಲವೋ ಎಂಬುದು ಮಾತ್ರ ತಿಳಿಯುತ್ತಿಲ್ಲ. ದಾಖಲಾತಿ ಆದ ನಂತರ ದಿಢೀರನೆ ಅವರ ವಾಸ ಖಾಸಗಿ ಶಾಲೆಯ ಹತ್ತಿರದಿಂದ, ಗ್ರಾಮೀಣ ಭಾಗದ ಮೂಲಸ್ಥಾನಕ್ಕೆ ಸ್ಥಳಾಂತರವಾಗಿರುವುದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಗ್ರಾಮೀಣ ಖಾಸಗಿ ಶಾಲೆಗಳು ಬೇಡ: ಪಟ್ಟಣ ವ್ಯಾಪ್ತಿಯ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪಡೆದುಕೊಂಡಿರುವ ಪ್ರಭಾವಿಗಳಿಗೆ ತಮ್ಮ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿರುವ ಖಾಸಗಿ ಶಾಲೆಗಳು ಕಂಡಿಲ್ಲ. ಬದಲಾಗಿ ಅವರಿಗೆ ಪ್ರತಿಷ್ಠಿತ ಶಾಲೆಗಳೇ ಆಯ್ಕೆಯಾಗಿದ್ದವು. ಅದೇನೇ ಆಗಲಿ ದಾಖಲೆಗಳನ್ನು ತಿರುಚಿಯಾದರೂ ಸರಿ, ದಾಖಲಾತಿ ಪಡೆಯಲೇಬೇಕೆಂಬ ಜಿದ್ದಿಗೆ ಬಿದ್ದು ನಗರಸಭೆ ಅಧಿಕಾರಿಗಳ ಮೂಲಕ ನಕಲಿ ವಾಸಸ್ಥಳ ದೃಢೀಕರಣ ಪಡೆದು ತಮ್ಮ ಮಕ್ಕಳನ್ನು ದಾಖಲು ಮಾಡಿದ್ದಾರೆ.

ಶಾಲಾ ವಾಹನ ವ್ಯವಸ್ಥೆಯನ್ನೂ ಕೇಳ್ತಾರೆ: ಹೇಳಿಕೇಳಿ ಆರ್‌ಟಿಇ ಕಾಯ್ದೆಯಡಿ ದಾಖಲಾಗಿರುವ ವಿದ್ಯಾರ್ಥಿಗಳು ನೆರೆಹೊರೆ ಯವರಾಗಿರಬೇಕು ಎನ್ನುವ ನಿಯಮವಿದೆ. ಪಟ್ಟಣದ ಬಾಲು ಪಬ್ಲಿಕ್‌ ಶಾಲೆಯಲ್ಲಿ ಗುರುವಾರ ನಡೆದ ಆರ್‌ಟಿಇ ಪೋಷಕರ ಸಭೆಯಲ್ಲಿ ಪೋಷಕರೊಬ್ಬರು ವಾಹನ ವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಗಮನ ಸೆಳೆದರು. ಪಟ್ಟಣದಲ್ಲಿ ವಾಸವಿದ್ದೇವೆಂದು ನಕಲಿ ದಾಖಲೆ ನೀಡಿ, ದಾಖಲು ಮಾಡಿದ್ದೂ ಅಲ್ಲದೆ ಶಾಲೆಗಳ ಆಡಳಿತ ಮಂಡಳಿಗಳಿಗೆ ವಾಹನಗಳ ವ್ಯವಸ್ಥೆಯನ್ನೂ ಉಚಿತವಾಗಿ ನೀಡಬೇಕೆನ್ನುವ ಹಕ್ಕನ್ನು ಕೆಲ ಪೋಷಕರು ಪ್ರತಿಪಾದಿಸುತ್ತಿರುವುದು ಇಡೀ ಯೋಜನೆ ಹಳಿತಪ್ಪಿದೆ ಎಂಬುದಕ್ಕೆ ನಿದರ್ಶನವಾಗಿದೆ. ಪ್ರತಿಷ್ಠಿತ ಶಾಲೆಗಳಲ್ಲಿ ನಕಲಿ ದಾಖಲೆ ನೀಡಿ ದಾಖಲಾತಿ ಪಡೆದುಕೊಂಡು, ಸರ್ಕಾರದ ಆಶಯಕ್ಕೆ ಧಕ್ಕೆ ತಂದಿರುವ ಬಗ್ಗೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು, ದಾಖಲಾತಿಗಳನ್ನು ಪರಿಶೀಲಿಸಿ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

Advertisement

ಸಿರಿವಂತರಿಗೂ ಸೀಟು: ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣದ ಜತೆಗೆ ಗುಣ ಮಟ್ಟದ ಶಿಕ್ಷಣ ಸಿಗಬೇಕೆಂಬುದು ಆರ್‌ಟಿಇ ಯೋಜನೆ ಆಶಯವಾಗಿದೆ. ಆದರೆ ಅದು ಬಡಮಕ್ಕಳಿಗೆ ಮಾತ್ರವಲ್ಲ, ಸ್ಥಿತಿವಂತರಿಗೂ ಲಭ್ಯವಾಗಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಪ್ರಸಿದ್ಧಿ ಪಡೆದಿರುವ ಖಾಸಗಿ ಶಾಲೆಗಳಲ್ಲಿ ಸೀಟು ಸಿಕ್ಕಿಲ್ಲ. ಬದಲಾಗಿ ಬಡತನರೇಖೆಗಿಂತ ಮೇಲಿರುವ ವರೂ ತಮ್ಮ ಪ್ರಭಾವ ಬಳಸಿ ದಾಖಲಾತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಆರ್‌ಟಿಇ ಅಡಿ ದಾಖಲಾತಿಗೆ ಆನ್‌ಲೈನ್‌ ವ್ಯವಸ್ಥೆ ಇರಲಿಲ್ಲ. ಬದಲಾಗಿ ಆಯಾ ಖಾಸಗಿ ಶಾಲೆಗಳೇ ಅರ್ಜಿಯೊಂದಿಗೆ ದಾಖಲಾತಿಗಳನ್ನು ಪಡೆದು, ಶಿಕ್ಷಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡುತ್ತಿದ್ದವು. ಅರ್ಜಿದಾರರು ಶಾಲೆಯ ನೆರೆ ಹೊರೆಯವರಾಗಿದ್ದಾರೆಯೋ ಇಲ್ಲವೋ ಎಂಬ ಬಗ್ಗೆ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕಿತ್ತು. ಆದರೆ ಆ ಕೆಲಸ ಆಗದಿರುವುದೇ ಬಡ ಮಕ್ಕಳು ಮಹತ್ವಾಕಾಂಕ್ಷಿ ಯೋಜನೆಯಿಂದ ವಂಚಿತರಾಗುವಂತಾಗಿದೆ.

●ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next