Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ಅವಕಾಶ: ಆರ್ ಟಿಇ ಶುಲ್ಕ ಮರುಪಾವತಿ ನಿಯಮ ಸಡಿಲಿಕೆಗೆ ಸಚಿವರ ಸೂಚನೆ

04:53 PM Feb 22, 2021 | Team Udayavani |

ಬೆಂಗಳೂರು: ಕೋವಿಡ್-19 ಸೋಂಕು ಪ್ರಸರಣ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಹಾಜರಾತಿ ಮತ್ತು ದಾಖಲಾತಿ ಕಡಿಮೆಯಾಗಿರುವುದರಿಂದ ಪ್ರಸ್ತುತ ವರ್ಷಕ್ಕೆ ಸೀಮಿತಗೊಳಿಸಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮತ್ತು ಆರ್ಟಿಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತ  ನಿಯಮಗಳಲ್ಲಿ ವಿನಾಯತಿ ನೀಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

Advertisement

ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದು ಮತ್ತು ಮಕ್ಕಳ ಶಾಲಾ ಹಾಜರಾತಿಯನ್ನು ಪೋಷಕರು ಮತ್ತು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟು ಪ್ರಸ್ತುತ ವರ್ಷ ಹಾಜರಾತಿ ಕಡ್ಡಾಯವಲ್ಲವೆಂದು ಶಿಕ್ಷಣ ಇಲಾಖೆಯೇ ಆದೇಶಿಸಿರುವ ಹಿನ್ನೆಲೆಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳ ಹಿತದೃಷ್ಟಿಯಿಂದ  ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ಮತ್ತು ಆರ್.ಟಿ.ಇ. ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತು ನಿಯಮದಲ್ಲಿ ಸಡಿಲಿಕೆ ಮಾಡಿ ವಿನಾಯತಿ ನೀಡಬೇಕೆಂದು ಸಚಿವರು ಸೂಚಿಸಿದ್ದಾರೆ.

ಇದನ್ನೂ ಓದಿ:ಪಕ್ಷೇತರ ಸಂಸದ ಮೋಹನ್ ದೇಲ್ಕರ್ ಮುಂಬೈ ಹೊಟೇಲ್ ವೊಂದರಲ್ಲಿ ಶವವಾಗಿ ಪತ್ತೆ ..!

ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದಾಖಲಾತಿ ಮತ್ತು ಹಾಜರಾತಿಗಳ ಆಧಾರದಲ್ಲಿ ಶಾಲೆಗಳ ಮಾನ್ಯತೆ ನವೀಕರಿಸುವ ಮೂಲಕ ವಿದ್ಯಾರ್ಥಿಗಳ ಆರ್ಟಿಇ ಶುಲ್ಕ ಮರುಪಾವತಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಬರೆಯಲು ಅವಕಾಶಗಳನ್ನು ಕಲ್ಪಿಸುವ ಪ್ರಕ್ರಿಯೆಗಳು ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಸಾಮಾನ್ಯ ಪ್ರಕ್ರಿಯೆಗಳಾಗಿವೆ. ಆದರೆ ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ  ದಾಖಲಾತಿ ಕಡಿಮೆ ಇದೆ. ಹಾಗೆಯೇ ಹಾಜರಾತಿಯೂ ಕಡಿಮೆ ಇದೆ. ಅಲ್ಲದೇ ಇಲಾಖೆಯೇ ಹಾಜರಾತಿಗೆ ವಿನಾಯತಿ ಸಹ ನೀಡಿದೆ. ಹೀಗಿರುವಾಗ ಖಾಸಗಿ ಅನುದಾನ ರಹಿತ ಶಾಲೆಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಶೈಕ್ಞಣಿಕ ವರ್ಷಕ್ಕೆ ಸೀಮಿತಗೊಳಿಸಿ ಈ ನಿಟ್ಟಿನಲ್ಲಿ ವಿನಾಯತಿ ನೀಡುವುದು ಮತ್ತು ಉಳಿದ ಷರತ್ತುಗಳನ್ನು ಖಚಿತಪಡಿಸಿಕೊಂಡು ಕ್ರಮ ವಹಿಸಬೇಕೆಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಚಿವರು ಟಿಪ್ಟಣಿಯಲ್ಲಿ ಸೂಚಿಸಿದ್ದಾರೆ.

ಸರ್ಕಾರದ ಈ ಕ್ರಮದಿಂದಾಗಿ ಖಾಸಗಿ ಶಾಲೆಗಳಿಗೆ ಆರ್ ಟಿ ಇ ಶುಲ್ಕ ಮತ್ತು ಎಸ್ಎಸ್ಎಲ್ ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರಾತಿಗೆ ಇದ್ದ ಹಾಜರಾತಿ/ದಾಖಲಾತಿ ಸಂಖ್ಯೆ ಕುರಿತ ನಿಯಮ ಸಡಿಲಿಕೆಯಿಂದ ಪ್ರಸ್ತುತ ವರ್ಷಕ್ಕೆ ಸಂಬಂಧಿಸಿದಂತೆ ನಿರಾಳತೆ ಬಂದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next