Advertisement

ಆರ್‌ಟಿಇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ವಿಳಂಬ

03:45 AM Jan 16, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ 2017-18ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯ ಮೀಸಲಾತಿ ಸೀಟುಗಳ ಪ್ರವೇಶ ಪ್ರಕ್ರಿಯೆಗೆ ಸಾಫ್ಟ್ವೇರ್‌ ಅನುಮೋದನೆ (ಕ್ಲಿಯರೆನ್ಸ್‌) ಇನ್ನೂ ಸಿಗದ ಕಾರಣ ಜ.15ರಿಂದ ಆರಂಭವಾಗಬೇಕಿದ್ದ ಆರ್‌ಟಿಇ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

Advertisement

ಆರ್‌ಟಿಇ ಪ್ರವೇಶ ಪ್ರಕ್ರಿಯೆಗೆ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಆದರೆ, ಪ್ರವೇಶ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುವುದರಿಂದ ಅಗತ್ಯ ಸಾಫ್ಟ್ವೇರ್‌ನ ಸಿದ್ಧತೆ ಪೂರ್ಣಗೊಳ್ಳಬೇಕಿದೆ. ಅದು ಅಂತಿಮ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಸಾಫ್ಟ್ವೇರ್‌ ವಿಭಾಗದಿಂದ ಅನುಮೋದನೆ ದೊರೆಯಲಿದೆ. ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕ ಕೆ.ಆನಂದ್‌ ಉದಯವಾಣಿಗೆ ತಿಳಿಸಿದ್ದಾರೆ. 

ಇತ್ತೀಚೆಗೆ ಇಲಾಖೆಯು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಖಾಸಗಿ ಶಾಲೆಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿತ್ತು. ಆ ವೇಳೆ ಆರ್‌ಟಿಇ ಪ್ರವೇಶಕ್ಕೆ ಸಂಬಂಧಿಸಿದಂತೆ ಅಹವಾಲುಗಳನ್ನು ಆಲಿಸಿತ್ತು. ಸಭೆಯಲ್ಲಿ ಬಂದ ಸಲಹೆಗಳನ್ನು ಅನುಸರಿಸಿ ಅಗತ್ಯವೆನಿಸಿದ ಕೆಲ ಮಾರ್ಪಾಡುಗಳನ್ನು ಮಾಡುವ ಪ್ರಯತ್ನ ನಡೆಸಿದೆ. ಇದೂ ಕೂಡ ಪ್ರಕ್ರಿಯೆ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ಬಾರಿಯಿಂದ ಆರ್‌ಟಿಇ ಪ್ರವೇಶಕ್ಕೆ ಪೋಷಕರು ಮತ್ತು ಮಗುವಿಗೆ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಿ ಅಧಿಸೂಚನೆ ಹೊರಡಿಸಿದ್ದ ಸರ್ಕಾರ ಜ. 15ರಿಂದ ಫೆ.15ರವರೆಗೆ ಶಿಕ್ಷಣ ಇಲಾಖೆಯ ವೆಬ್‌ ಪೋರ್ಟಲ್‌ ಮೂಲಕ ಆರ್‌ಟಿಇ ಪ್ರವೇಶಕ್ಕೆ ಅರ್ಜಿ ಸ್ವೀಕರಿಸಲಾಗುವುದು ಎಂದು ಪ್ರಕಟಿಸಿತ್ತು. ಆದರೆ, ಇದೀಗ ಪ್ರಕ್ರಿಯೆ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next