Advertisement

ಆರ್‌ಟಿಇ “ಗಡಿ’ತಾರತಮ್ಯ ಸಲ್ಲ

06:18 PM Mar 16, 2018 | Team Udayavani |

ಶಿರಸಿ: ಸರ್ವರಿಗೂ ಗುಣಮಟ್ಟದ ಶಿಕ್ಷಣ, ಅನುಕೂಲ ಇರದವರಿಗೂ ಖಾಸಗಿ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ಅನುಷ್ಠಾನಕ್ಕೆ ತರಲಾದ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ, ಈ ಬಾರಿಯಿಂದ ಆರ್‌ಟಿಇ ಕಾಯಿದೆಯಲ್ಲಿ ಪೇಟೆಗೊಂದು ಹಳ್ಳಿಗೊಂದು ನೀತಿ ಅನುಷ್ಠಾನಕ್ಕೆ ತಂದು ಗೊಂದಲ, ಅಸಮಾಧಾನ ಸೃಷ್ಟಿಸಿದೆ. ಆರ್‌ಟಿಇ ಮೂಲಕ ಪ್ರವೇಶ ಪಡೆದು ಪೇಟೆ ಮಕ್ಕಳು ಇನ್ನಷ್ಟು ಗುಣಮಟ್ಟದ ಶಾಲೆಗೆ ಹೋಗಬಹುದು. ಆದರೆ, ಹಳ್ಳಿ ಮಕ್ಕಳಿಗೆ ಪಕ್ಕದಲ್ಲೇ ಮನೆಯ ಸಮೀಪವೇ ಖಾಸಗಿ ಶಾಲೆ ಇದ್ದರೂ ಅವಕಾಶ ವಂಚಿತರಾಗುವಂತೆ ಆಗಿದೆ. ಸರಕಾರವೇ ದ್ವಂದ್ವ ನೀತಿಯ ಮೂಲಕ ಆರ್‌ಟಿಇ ಕಾಯಿದೆಯ ಮೂಲ ಆಶಯಕ್ಕೇ ಕೊಡಲಿ ಏಟು ನೀಡುವಂತೆ ಮಾಡಿದೆ. 

Advertisement

ಏನಿದು ಗಡಿ ವಿವಾದ?
ಸಾರ್ವಜನಿಕ ಶಿಕ್ಷಣ ಇಲಾಖೆ ಕಾಯಿದೆ ಅನುಷ್ಠಾನ ಇನ್ನಷ್ಟು ಬಲಗೊಳಿಸಲು ಮಾರ್ಗಸೂಚಿ ಹೊರಡಿಸಿ ಇಲಾಖೆ ಆಯುಕ್ತರು ಆದೇಶ ಮಾಡಿದ್ದಾರೆ. ಕಳೆದ ಜನವರಿ 23ಕ್ಕೆ ರಕಾರವು ಇಡೀ 36 ಪಿಜಿಸಿ 2018 ಆದೇಶ ಮಾಡಿ ಹೊಸ ಸುತ್ತೋಲೆ ಹೊರಡಿಸಿದೆ. ಯಾವ ಶಾಲೆಗಳಿಗೆ ಮಕ್ಕಳನ್ನು ಆರ್‌ಟಿಇ ಶಿಕ್ಷಣದ ಮೂಲಕ ಸೇರ್ಪಡೆ ಮಾಡಬೇಕು ಎಂಬುದಕ್ಕೆ “ಗಡಿ’ ನಿರ್ಧರಿಸಿದೆ. ನಗರ ವ್ಯಾಪ್ತಿಯಲ್ಲಿ ಪಟ್ಟಣ ಗಡಿಯಾದರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾರ್ಡ್‌ ಗಡಿಯಾಗಿದೆ. ಪ್ರಥಮ, ದ್ವಿತೀಯ, ತೃತೀಯ ಅಂತ ಆಯ್ಕೆ
ಮಾಡಿ ಆರ್‌ಟಿಇ ಮೂಲಕ ಶೇ.25 ಸಿಟು ಕಾಯ್ದಿರಿಸುವಲ್ಲಿ ಅರ್ಜಿ ಹಾಕಿಕೊಳ್ಳಬಹುದು.

ಹಳ್ಳಿಗೆ ಅನ್ಯಾಯ: ಆದರೆ, ಅನ್ಯಾಯ ಆಗುತ್ತಿರುವ ಗ್ರಾಮೀಣ ಭಾಗಕ್ಕೆ. ನಿಜಕ್ಕೂ ಶೈಕ್ಷಣಿಕ ಗುಣಮಟ್ಟದ ಕೊರತೆ
ಅನುಭವಿಸುತ್ತಿರುವ, ಕಿ.ಮೀ. ದೂರ ನಡೆದು ಓದು ಮಾಡಬೇಕಾದ ಹಳ್ಳಿ ಮಕ್ಕಳಿಗೆ ಶಿಕ್ಷಣ ಇಲಾಖೆ ನಿಗದಿಪಡಿಸಿದ ಗಡಿ ಬಿಸಿ ಮುಟ್ಟಿಸಿದೆ. ಈ ಮೊದಲಿದ್ದ 3 ಕಿಮೀ ಗಡಿಯ ವ್ಯಾಪ್ತಿಯನ್ನು ಸಡಿಲಿಸಿ, ಮಗು ಇದ್ದಲ್ಲೇ ಶಿಕ್ಷಣ ಎಂಬ ಹೊಸ ಆದೇಶ ಮಾಡಿದೆ. ಸರಕಾರದ ಈ ಆದೇಶದ ಪ್ರಕಾರ ಹಳ್ಳಿ ಶಾಲೆ ಮಕ್ಕಳಿಗೆ ಆರ್‌ಟಿಇ ಅರ್ಜಿಗೆ ಕಂದಾಯ ಗ್ರಾಮ ಗಡಿ ನಿಗದಿಯಾಗಿದೆ. ಒಂದು ಗ್ರಾಮದ ವ್ಯಾಪ್ತಿಯಲ್ಲಿ ಇದ್ದ ಗಡಿ ಮೀರಿ ಮನೆಯ ಪಕ್ಕವೇ ಇನ್ನೊಂದು ಕಂದಾಯ ಗ್ರಾಮದಲ್ಲಿ ಗುಣಮಟ್ಟದ ಶಿಕ್ಷಣ ಕೊಡುವ ಖಾಸಗಿ ಶಾಲೆ ಇದ್ದರೆ ಅಲ್ಲಿ ಅರ್ಜಿ ಹಾಕುವಂತಿಲ್ಲ. ಅರ್ಜಿ ಹಾಕಿದರೂ ಕಂಪ್ಯೂಟರ್‌ ಒಪ್ಪಿಗೆ ಕೊಡಲ್ಲ. ಇದನ್ನು ಈ ಬಾರಿಯಿಂದ ಕಡ್ಡಾಯವಾಗಿ ಕೊಡಬೇಕಾದ ಮಗುವಿನ ಆಧಾರ ಕಾರ್ಡ್‌ ಸಲ್ಲಿಕೆ ಮೂಲಕ ಗುರುತು ಮಾಡಲಾಗುತ್ತದೆ. ಮಗು ವಾಸಿಸುವ ಕಂದಾಯ
ಗ್ರಾಮದಲ್ಲಿ ಖಾಸಗಿ ಶಾಲೆ ಇರದೇ ಇದ್ದರೆ ಸರಕಾರಿ ಶಾಲೆಗೆ ಬನ್ನಿ ಇಲ್ಲೇ ಗುಣಮಟ್ಟದ ಶಿಕ್ಷಣ ಕೊಡುತ್ತೇವೆ ಎನ್ನುತ್ತದೆ ಸರಕಾರ.

ಸರಕಾರ ಹೋಬಳಿ ಅಥವಾ ಗ್ರಾಮ ಪಂಚಾಯ್ತಿ ಮಟ್ಟಕ್ಕಾದರೂ ಗಡಿ ನಿಗದಿ ಮಾಡಬೇಕು. ಅಥವಾ ಮೊದಲಿದ್ದ 3 ಕಿಮೀಯೇ ಉಳಿಯಲಿ.
ಚಂದ್ರ ಎಸಳೆ, ತಾಪಂ ಉಪಾಧ್ಯಕ್ಷ, ಶಿರಸಿ

ಆಧಾರ್‌ ಕಾರ್ಡ್‌ನಲ್ಲಿ ಇರುವ ವಿಳಾಸ ಹಾಗೂ ಆ ಕಂದಾಯ ಗ್ರಾಮವೇ ಆರ್‌ಟಿಇ ಅರ್ಜಿ ಸಲ್ಲಿಸಲು ಗಡಿ ಎಂದು ಸರಕಾರ ಆದೇಶ
ಮಾಡಿದೆ. ಇದರಿಂದ ಕೆಲವು ಕಡೆ ಸಮಸ್ಯೆ ಆಗಿದ್ದು ನಮ್ಮ ಗಮನಕ್ಕೂ ಬಂದಿದೆ. ಸರಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ಇದೆ. ಅಲ್ಲೇ ಬರ್ಲಿ ಮಗು. 

 ಹೆಸರು ಹೇಳದ ಅಧಿಕಾರಿ, ಶಿಕ್ಷಣ ಇಲಾಖೆ

Advertisement

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next