Advertisement

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

01:52 AM Jun 24, 2024 | Team Udayavani |

ದಾವಣಗೆರೆ: ರಾಜ್ಯದಲ್ಲಿ ಲಕ್ಷಾಂತರ ಪಹಣಿಗಳು ಮರಣ ಹೊಂದಿದ ರೈತರ ಹೆಸರಿನಲ್ಲಿಯೇ ಇನ್ನೂ ಚಾಲ್ತಿಯಲ್ಲಿರುವುದು ಬೆಳಕಿಗೆ ಬಂದಿದೆ. ಅಕ್ರಮ ಆಸ್ತಿ ನೋಂದಣಿ ತಡೆಯಲು ರಾಜ್ಯ ಸರಕಾರ ರಾಜ್ಯಾ ದ್ಯಂತ ಆರಂಭಿಸಿರುವ “ನನ್ನ ಆಧಾರ್‌ನೊಂದಿಗೆ ನನ್ನ ಆಸ್ತಿ ಸುಭದ್ರ’ ಆಂದೋಲನದ ವೇಳೆ ಈ ಅಂಶ ಬಹಿರಂಗಗೊಂಡಿದೆ.ರಾಜ್ಯದಲ್ಲಿ ಒಟ್ಟು 4.03 ಕೋಟಿ ಪಹಣಿಗಳಿವೆ.

Advertisement

ಈ ಪೈಕಿ ಜೂ. 20ರ ವರೆಗೆ 1.12 ಕೋಟಿ ಪಹಣಿಗಳಿಗೆ ಆಧಾರ್‌ ಜೋಡಣೆ ಮಾಡಲಾಗಿದೆ. ಈ ವೇಳೆ 23,40,469 ಪಹಣಿಗಳಲ್ಲಿ ಹೆಸರಿರುವ ರೈತರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪಹಣಿಯಲ್ಲಿರುವ ಹೆಸರಿನ ರೈತರು ಮೃತಪಟ್ಟಿರುವ ಬಗ್ಗೆ ಆಯಾ ಗ್ರಾಮ ಲೆಕ್ಕಾಧಿಕಾರಿಗಳು ರಾಜ್ಯ ಸರಕಾರಕ್ಕೆ ವರದಿ ನೀಡಿದ್ದಾರೆ.

ಸಾಮಾನ್ಯವಾಗಿ ಪಹಣಿಯಲ್ಲಿ ಹೆಸರಿರುವ ಭೂಮಿಯ ಮಾಲಕರು ಮರಣ ಹೊಂದಿದ ಬಳಿಕ ವಾರಸುದಾರರು ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ಲಕ್ಷಾಂತರ ಪಹಣಿಗಳಲ್ಲಿ ಇರುವ ಮಾಲಕರ ಮರಣಾನಂತರ ವಾರಸುದಾರರ ಹೆಸರು ಬದಲಾಯಿಸಿಲ್ಲ. ಹೀಗಾಗಿ ರಾಜ್ಯದಲ್ಲಿ ಬರೋಬ್ಬರಿ 23,40,469 ಪಹಣಿಗಳು ಸತ್ತವರ ಹೆಸರಲ್ಲೇ ಮುಂದುವರಿದಿರುವುದು ಪತ್ತೆಯಾಗಿದೆ.

ತುಮಕೂರಿನಲ್ಲಿ ಅತೀ ಹೆಚ್ಚು
ತುಮಕೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 2,96,162 ಪಹಣಿಗಳು ಮೃತಪಟ್ಟ ರೈತರ ಹೆಸರಲ್ಲಿವೆ. ಕೋಲಾರ ಜಿಲ್ಲೆ 2,25,812 ಪಹಣಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,56,720, ಕೊಡಗು ಜಿಲ್ಲೆಯಲ್ಲಿ 1,30,367, ಮೈಸೂರು 1,15,120, ಮಂಡ್ಯ ಜಿಲ್ಲೆಯಲ್ಲಿ 1,04,622 ಪಹಣಿಗಳು ಸತ್ತವರ ಹೆಸರಲ್ಲಿವೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಇಂತಹ ಪಹಣಿಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆ ಇದ್ದು, ವಿಜಯಪುರ ಜಿಲ್ಲೆಯಲ್ಲಿ ಅತೀ ಕಡಿಮೆ ಎಂದರೆ 16,826 ಪಹಣಿಗಳು ಮೃತಪಟ್ಟವರ ಹೆಸರಿನಲ್ಲಿವೆ.

ಭೂಪರಿವರ್ತಿತ ಪಹಣಿಯಲ್ಲೂ ಸತ್ತವರ ಹೆಸರು
ಕೃಷಿ ಜಮೀನುಗಳನ್ನು ಇತರ ಉದ್ದೇಶಗಳಿಗಾಗಿ ಪರಿವರ್ತನೆ ಮಾಡಿಕೊಂಡಿರುವ ಒಟ್ಟು 20,969 ಪಹಣಿಗಳಲ್ಲಿಯೂ ಮೃತಪಟ್ಟಿರುವವರ ಹೆಸರೇ ಇರುವುದು ಕೂಡ ಬೆಳಕಿಗೆ ಬಂದಿದೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 2,150 ಪಹಣಿಗಳು ಮೃತಪಟ್ಟವರ ಹೆಸರಲ್ಲಿವೆ. ಬಾಗಲಕೋಟೆ ಜಿಲ್ಲೆಯಲ್ಲಿ 1,838, ಬೀದರ್‌ ಜಿಲ್ಲೆಯಲ್ಲಿ 1,384, ಹಾಸನ ಜಿಲ್ಲೆಯಲ್ಲಿ 1,311, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,141 ಪಹಣಿಗಳಲ್ಲಿ ಸತ್ತವರ ಹೆಸರಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಸತ್ತವರ ಹೆಸರಲ್ಲಿರುವ ಪಹಣಿಗಳ ಸಂಖ್ಯೆ ಒಂದು ಸಾವಿರದೊಳಗಿದೆ. ಇದರಿಂದಾಗಿ ಲಕ್ಷಾಂತರ ರೈತರು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

Advertisement

ಸತ್ತವರನ್ನು ಬದುಕಿಸಿದ ವ್ಯಾಜ್ಯ!
ಪಹಣಿಯಲ್ಲಿರುವ ಹೆಸರಿನ ಮಾಲಕರ ಮರಣಾನಂತರ ಎದುರಾಗುವ ವಾರಸುದಾರರ ನಡುವಣ ಜಮೀನು ಹಂಚಿಕೆ ವಿವಾದ-ಗೊಂದಲ, ನ್ಯಾಯಾಲಯದ ಮೆಟ್ಟಿಲೇರಿದ ವ್ಯಾಜ್ಯ, ಹೆಸರು ಬದಲಾವಣೆಗೆ ಕಚೇರಿ ಅಲೆದಾಟ ಸಮಸ್ಯೆ ಮತ್ತಿತರ ಹಲವು ಸಮಸ್ಯೆಗಳು ಪಹಣಿಯಲ್ಲಿ ಮೃತಪಟ್ಟವರ ಹೆಸರು ಮುಂದುವರಿಯಲು ಕಾರಣವಾಗಿವೆ.

ಕೆಲವು ಮೂಲ ಮಾಲಕರು ಮರಣ ಹೊಂದಿದ್ದು, ಅವರ ಹೆಸರಿನಲ್ಲಿಯೇ ಪಹಣಿ ಚಾಲ್ತಿಯಲ್ಲಿವೆ. ಮುಂದಿನ ದಿನಗಳಲ್ಲಿ ಪೌತಿ ಖಾತೆ ಆಂದೋಲನ ಕೈಗೊಳ್ಳುವ ಮೂಲಕ ಖಾತೆ ಬದಲಾವಣೆ ಮಾಡಿ ಪಹಣಿಗೆ ಆಧಾರ್‌ ಜೋಡಣೆ ಕೈಗೆತ್ತಿಕೊಳ್ಳಲಾಗುವುದು. –ಡಾ| ವೆಂಕಟೇಶ್‌ ಎಂ.ವಿ., ದಾವಣಗೆರೆ ಜಿಲ್ಲಾಧಿಕಾರಿ

* ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next