Advertisement

ಪಹಣಿ ತಿದ್ದುಪಡಿ ಅಧಿಕಾರ ಮತ್ತೆ ತಹಶೀಲ್ದಾರ್‌ಗೆ

10:41 PM Apr 04, 2022 | Team Udayavani |

ದಾವಣಗೆರೆ: ಕಂದಾಯ ಅದಾಲತ್‌ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಮಾಡಲು ತಹಶೀಲ್ದಾರ್‌ಗೆ ಇರುವ ಅಧಿಕಾರವನ್ನು ಕಂದಾಯ ಇಲಾಖೆ ಮುಂದಿನ ಈ ವರ್ಷದ ಡಿಸೆಂಬರ್‌ 31ರ ವರೆಗೆ ವಿಸ್ತರಿಸಿದೆ.

Advertisement

ಪಹಣಿಗಳಲ್ಲಿನ ಲೋಪಗಳನ್ನು ತ್ವರಿತವಾಗಿ ಸರಿಪಡಿಸಿಕೊಳ್ಳಲು ಕಂದಾಯ ಅದಾಲತ್‌ ಕಾರ್ಯಕ್ರಮ ಹೆಚ್ಚು ಅನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ, ಈ ವರ್ಷವೂ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರ್‌ಗೆ ನೀಡಿದೆ.

ಕಂದಾಯ ಅದಾಲತ್‌ ಮೂಲಕ ಪಹಣಿ ತಿದ್ದುಪಡಿ ಮಾಡುವ ಅಧಿಕಾರವನ್ನು ಸಹಾಯ ಆಯುಕ್ತರಿಂದ ತಹಶೀಲ್ದಾರ್‌ಗೆ ನೀಡಲಾಗಿದೆ. ಈ ಅಧಿಕಾರವನ್ನು ಆಗಾಗ ವಿಸ್ತರಿಸುತ್ತ ಬರಲಾಗಿದೆ. 31-12-2021ಕ್ಕೆ ಅಧಿಕಾರ ಕೊನೆಗೊಂಡು, ಪಹಣಿ ತಿದ್ದುಪಡಿ ಅಧಿಕಾರ ಮೂರು (ಜನವರಿ, ಫೆಬ್ರವರಿ ಮತ್ತು ಮಾರ್ಚ್‌) ತಿಂಗಳು ಮರಳಿ ಸಹಾಯಕ ಆಯುಕ್ತರ ಕೈಗೆ ಹೋಗಿತ್ತು. ತಹಶೀಲ್ದಾರ್‌ಗೆ ನೀಡಿರುವ ಈ ವಿಶೇಷ ಅಧಿಕಾರವನ್ನು ಈಗ ಡಿಸೆಂಬರ್‌ ಅಂತ್ಯದವರೆಗೆ ವಿಸ್ತರಿಸಿದ್ದು, ಪ್ರಸಕ್ತ ಎಪ್ರಿಲ್‌ ತಿಂಗಳಿನಿಂದಲೇ ತಹಶೀಲ್ದಾರರು ಕಂದಾಯ ಅದಾಲತ್‌ ಮೂಲಕ ಪಹಣಿ ತಿದ್ದುಪಡಿ ಕಾರ್ಯ ಮುಂದುವರಿಸಲಿದ್ದಾರೆ.

ರಾಜ್ಯದಲ್ಲಿರುವ ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳನ್ನು
ಹೊರತುಪಡಿಸಿ ರಾಜ್ಯಾದ್ಯಂತ ಎಲ್ಲ ತಾಲೂಕು ಗಳ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ ಮಟ್ಟದಲ್ಲಿ ಕಂದಾಯ ಅದಾಲತ್‌ಗಳನ್ನು ನಡೆಸಿ ಪಹಣಿಗಳಲ್ಲಿನ ಲೋಪಗಳನ್ನು ಸರಿಪಡಿಸಲು ಈ ಕಾರ್ಯಕ್ರಮದ ಮೂಲಕ ಅವಕಾಶ ನೀಡಲಾಗಿದೆ. ಕಂದಾಯ ಅದಾಲತ್‌ ಕಾರ್ಯ ಕ್ರಮದಡಿ ಬಾಕಿ ಇರುವ ಹಾಗೂ ಸ್ವೀಕೃತವಾಗುವ ಅರ್ಜಿಗಳನ್ನು 2022ರ ಡಿಸೆಂಬರ್‌ ಅಂತ್ಯಕ್ಕೆ ತಿದ್ದುಪಡಿ ಮಾಡಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಯಾವ ಕಾರಣಕ್ಕೂ ಮುಂದೆ ಕಂದಾಯ ಅದಾಲತ್‌ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದಿಲ್ಲ ಎಂಬ ಎಚ್ಚರಿಕೆಯನ್ನು ಇಲಾಖೆ ಅಧಿಕಾರಿಗಳಿಗೆ ನೀಡಿದೆ.

ಹೆಚ್ಚುವರಿ ಸಿಬಂದಿ ಇಲ್ಲ
ಕಂದಾಯ ಅದಾಲತ್‌ ಕಾರ್ಯಕ್ರಮ ಆರಂಭದಲ್ಲಿ (2014ರಲ್ಲಿ ) ಹೆಚ್ಚಿನ ಅರ್ಜಿಗಳು ಸ್ವೀಕೃತವಾಗುತ್ತಿದ್ದವು. ಆದ್ದರಿಂದ ಆಗ ಕಂದಾಯ ಅದಾಲತ್‌ ನಡೆಸಲು ಅನುಕೂಲವಾಗುವಂತೆ ಪ್ರತಿ ತಾಲೂಕಿಗೆ ಇಬ್ಬರು ನಿವೃತ್ತ ಕಂದಾಯ ಇಲಾಖಾ ನೌಕರರ ಸೇವೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ 2021ರ ಅಂತ್ಯಕ್ಕೆ ಬಾಕಿ ಇರುವ ಅರ್ಜಿಗಳ ಸಂಖ್ಯೆ ಅದಾಲತ್‌ ಆರಂಭವಾದಾಗ ಇದ್ದಷ್ಟು ಇಲ್ಲ. ಆದ್ದರಿಂದ ಈ ಕಾರ್ಯಕ್ಕಾಗಿ ಹೆಚ್ಚುವರಿ ಸಿಬಂದಿ ನೇಮಿಸಿಕೊಳ್ಳುವ ಅಗತ್ಯವಿಲ್ಲ. ಅರ್ಜಿಗಳನ್ನು ವಿಲೇವಾರಿ ಮಾಡಲು ಆಯಾ ಕಚೇರಿಯ ಸಿಬಂದಿಯನ್ನೇ ನಿಯೋಜಿಸಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

Advertisement

ಜಿಲ್ಲಾಧಿಕಾರಿಗಳು ತಪ್ಪದೇ ಪ್ರತಿ ವಾರ ಕಂದಾಯ ಅದಾಲತ್‌ಗೆ ಸಂಬಂಧಿಸಿ ಪ್ರತಿ ತಾಲೂಕಿನ ತಹಶೀಲ್ದಾರರ ಪ್ರಗತಿ ಪರಿಶೀಲಿಸಿ ಅತಿ ಹೆಚ್ಚು ಪಹಣಿ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು. ಅದಾಲತ್‌ ಕಾರ್ಯಕ್ರಮದ ಮೇಲುಸ್ತುವಾರಿ ಜವಾಬ್ದಾರಿ ಭೂಮಾಪನ ಇಲಾಖೆ ಆಯುಕ್ತರು, ಕಂದಾಯ ಇಲಾಖೆ ನಿರ್ದೇಶಕರದ್ದಾಗಿದ್ದು (ಭೂಮಿ ವಿಭಾಗ) ಅನುಷ್ಠಾನದ ಪ್ರಗತಿ ವಿವರವನ್ನು ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಪರಿಶೀಲಿಸಬೇಕು ಎಂದು ಇಲಾಖೆ ನಿರ್ದೇಶಕರು ನಿರ್ದೇಶನ ನೀಡಿದ್ದಾರೆ.

ತಿದ್ದುಪಡಿ ಮುಖ್ಯ ಅಂಶಗಳು
ಡಾಟಾ ಎಂಟ್ರಿಗೆ ಬಳಸಲಾದ ಕೈಬರಹದ ಪಹಣಿ ಮತ್ತು ಭೂಮಿ ಡಾಟಾ ಬೇಸ್‌ನಲ್ಲಿರುವ ಪಹಣಿಗಳನ್ನು ಹೋಲಿಸಿದಾಗ ಕಂಡು ಬರುವ ವ್ಯತ್ಯಾಸಗಳು, ಡಾಟಾ ಎಂಟ್ರಿಗೆ ಬಳಸಲಾದ ಕೈಬರಹ ಪಹಣಿಯಲ್ಲಿ ಗಣಕೀಕರಣದ ಪೂರ್ವದಲ್ಲೇ ಇದ್ದ ಮ್ಯುಟೇಶನ್‌ ಪ್ರಕಾರ ಪಹಣಿ ಕಾಲೋಚಿತಗೊಳಿಸದಿರುವುದು ಅಥವಾ ತಪ್ಪಾಗಿ ಕಾಲೋಚಿತಗೊಳಿಸಿರುವುದು, ಯಾವುದೇ ಮ್ಯುಟೇಶನ್‌ ಇಲ್ಲದೆ ಪಹಣಿಯಿಂದ ನಮೂದನ್ನು ತೆಗೆದು ಹಾಕಿರುವುದು ಅಥವಾ ಹೊಸದಾಗಿ ನಮೂದಿಸಿರುವುದು ಈ ಪಹಣಿ ತಿದ್ದುಪಡಿಯಲ್ಲಿ ಕಂಡು ಬರುವ ಮುಖ್ಯ ಅಂಶಗಳಾಗಿವೆ.

– ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next