ಪಯ್ಯನ್ನೂರು: ರಾಜಕೀಯ ದ್ವೇಷದಿಂದ ನಡೆದ ಕೊಲೆ ಪ್ರಕರಣಗಳ ವಾರ್ಷಿಕ ದಿನವಾದ ಮಂಗಳವಾರ ಪಯ್ಯನ್ನೂರಿನಲ್ಲಿ ವ್ಯಾಪಕವಾಗಿ ಘರ್ಷಣೆಗಳು ಸಂಭವಿಸಿವೆ.ಆರ್‌ಎಸ್‌ಎಸ್ ಕಾರ್ಯಾಲಯಗೆ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಸಿಪಿಎಂ ಕಾರ್ಯಕರ್ತರ ಮೇಲೆ ಹಾಗೂ ಅವರ ಮನೆಗಳ ಮೇಲೆ ಬಾಂಬೆಸೆಯಲಾಗಿದೆ. ಹಲವು ಮನೆಗಳು ಬೆಂಕಿಗಾಹುತಿಯಾಗಿವೆ. ಮಂಗಳವಾರ ರತ್ರಿ ಹಾಗೂ ಬುಧವಾರ ಮುಂಜಾನೆ ವ್ಯಾಪಕ ಹಿಂಸೆ ಗಳು ನಡೆದವು.
ಕಳೆದ ವರ್ಷ ಜು. 11ರಂದು ಕೊಲೆಗೀಡಾದ ಸಿಪಿಎಂ ಕಾರ್ಯಕರ್ತ ರಾಮಂತಳಿ ಕುನ್ನುರು ತರಂದಾಟ್‌ನ ಸಿ.ವಿ.ಧನರಾಜ್ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಿಪಿಎಂ ಕಾರ್ಯಕರ್ತರ ಮೇಲೆ ರಾಮಂತಳಿ ಕಕ್ಕಂಪಾರೆಯಲ್ಲಿ ತಂಡವೊಂದು ಬಾಂಬೆಸೆದಿದೆ. ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರು ಈ ಕೃತ್ಯ ನಡೆಸಿದ್ದಾರೆಂದು ಸಿಪಿಎಂ ಆರೋಪಿಸಿದೆ. ಈ ಘಟನೆಯ ಬೆನ್ನಲ್ಲೇ ಪಯ್ಯನ್ನೂರು ಪೇಟೆಯಲ್ಲಿರುವ ಆರ್‌ಎಸ್‌ಎಸ್ ಕಾರ್ಯಾಲಯಕ್ಕೆ ಬೆಂಕಿ ಹಚ್ಚಲಾಗಿದೆ. ಸಮೀಪದಲ್ಲಿರುವ ಬಿಜೆಪಿ ಕಚೇರಿಯನ್ನೂ ಹಾನಿಗೊಳಿಸಲಾಗಿದೆ.
ಬಿಜೆಪಿ ಪಯ್ಯನ್ನೂರು ಮಂಡಲ ಕಾರ್ಯದರ್ಶಿ ಕೋರೋತ್ ಪನಕಿಲ್ ಬಾಲಕೃಷ್ಣನ್ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮನೆ ಪೂರ್ಣ ನಾಶಗೊಂಡಿದೆ. ಬೆಂಕಿ ಆರಿಸಲು ಬರುತ್ತಿದ್ದ ಅಗ್ನಿಶಾಮಕ ದಳವನ್ನು ತಂಡವೊಂದು ದಾರಿ ಮಧ್ಯೆ ತಡೆಯೊಡ್ಡಿ ಹಿಂದೆ ಕಳುಹಿಸಿತು. ಮನೆ ಮುಂದೆ ನಿಲ್ಲಿಸಿದ್ದ ಆಟೋ ರಿಕ್ಷಾ, ಸ್ಕೂಟರ್‌ಗೆ ಕಿಚ್ಚಿಟ್ಟು ನಾಶಗೊಳಿಸಲಾಗಿದೆ. ಪಯ್ಯನ್ನೂರು ಕಾರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಅವರ ಮನೆಗೆ ಕಿಚ್ಚಿಡಲಾಗಿದೆ. ರಾಜೇಶ್ ಅವರ ಬಸ್ಸನ್ನು ಬೆಂಕಿ ಹಚ್ಚಿ ಹಾನಿಗೊಳಿಸಲಾಗಿದೆ. ಯುವಮೋರ್ಚಾ ಜಿಲ್ಲಾಧ್ಯಕ್ಷ ಅನ್ನೂರು ಕಾರಮೇಲ್‌ನ ಅರುಣ್ ಅವರ ಮನೆ, ಬಿಜೆಪಿ ಕಾರ್ಯಕರ್ತ ಆಟೋ ಚಾಲಕ ಅನ್ನೂರಿನ ಗಣೇಶನ್, ಕಾರಮೇಲ್‌ನ ಎ.ಕೆ.ಉಣ್ಣಿಕೃಷ್ಣನ್ ಅವರ ಮನೆಗಳನ್ನು ಹಾನಿಗೊಳಿಸಲಾಗಿದೆ. ಬಿಜೆಪಿ ಕಾರ್ಯಕರ್ತ ಅನ್ನೂರು ಪಡಿಂಞರ ಕರೆಯ ಪೂತ್ತಲಾತ್ ಕುಮಾರನ್ ಅವರ ಮನೆಗೆ ಬಾಂಬೆಸೆಯಲಾಗಿದೆ. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಗಂಗನ್ ತಾಯಿನೇರಿ ಅವರ ಅಂಗಡಿಗೆ ಬಾಂಬೆಸೆದು ಹಾನಿಗೊಳಿಸಲಾಗಿದೆ.
ಬಿಜೆಪಿ ಕಾರ್ಯಕರ್ತ ಕವ್ವಾಯಿಯ ಶ್ಯಾಮ್ ಅವರ ಬೈಕ್‌ಗೆ ಕಿಚ್ಚಿಡಲಾಗಿದೆ. ಬಿಜೆಪಿ ಪಯ್ಯನ್ನೂರು ಮಂಡಲ ಕಾರ್ಯದರ್ಶಿ ಸಿ.ಕೆ.ರಮೇಶನ್ ಮಾಸ್ತರ್, ರಾಜ್ಯ ಕೌನ್ಸಿಲ್ ಸದಸ್ಯ ಎ.ಕೆ.ರಾಜಗೋಪಾಲನ್ ಮಾಸ್ತರ್ ಅವರ ಮನೆಗಳಿಗೂ ಹಾನಿಗೈಯ್ಯಲಗಿದೆ.
ಬಾಂಬೆಸತದಲ್ಲಿ ಸಿಪಿಎಂ ಕಾರ್ಯಕರ್ತರಾದ ರಾಮಂತಳಿ ಮೊಟ್ಟಂಕುನ್ನು ನಿವಾಸಿಗಳಾದ ಮೊಹಮ್ಮದ್(19), ಅದೀಪ್(22), ಅನ್ಸಾರ್(21), ಅಶ್ಪಾಕ್(19), ನಜೀಬ್(18) ಮತ್ತು ಸುಬೈರ್(22) ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಕಕ್ಕಂಪಾರದ ಸಿ.ಪಿ.ಜನಾರ್ದನ ಅವರ ಮನೆಯನ್ನು ಹಾನಿಗೊಳಿಸಲಾಗಿದೆ. ಸಿಪಿಎಂ ಕಾರ್ಯಕರ್ತ ಶ್ಯಾಮ್ ಕುಟ್ಟನ್ ಅವರ ಮನೆಗೆ ಬಾಂಬೆಸದು ಹಾನಿಗೊಳಿಸಲಾಗಿದೆ. ಪಿ.ವಿ.ಭರತನ್, ಪಿ.ಪಿ.ಕುಂಞಿಕಣ್ಣನ್ ಅವರ ಮನೆಗೂ ಹಾನಿಗೊಳಿಸಲಾಗಿದೆ.ಕಳೆದ ವರ್ಷ ಜು.11 ರಂದು ಬಿಎಂಎಸ್ ಕಾರ್ಯಕರ್ತ ಅನ್ನೂರು ಸಿ.ಕೆ.ರಾಮಚಂದ್ರನ್ ಅವರನ್ನು ಕೊಲೆ ಮಾಡಲಾಗಿತ್ತು.