Advertisement

ಬಿಜೆಪಿ ನಾಯಕರಿಗೆ ಆರೆಸ್ಸೆಸ್ ರಾಷ್ಟ್ರಭಾವ ಪಾಠ

11:06 PM Jun 18, 2019 | Team Udayavani |

ಬೆಂಗಳೂರು: “ದೇಶದಲ್ಲಿ ರಾಷ್ಟ್ರ ಭಾವ ಜಾಗೃತಿ ಮತ್ತೆ ಮೂಡಿದ್ದು, ಅದನ್ನು ನಿರಂತರವಾಗಿಟ್ಟುಕೊಂಡು ದೇಶದ ಒಳತಿಗಾಗುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ.

Advertisement

ನಗರದ ಕೇಶವ ಕೃಪಾದಲ್ಲಿ ಮಂಗಳವಾರ ಇಡೀ ದಿನ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಮುಕುಂದ್‌, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಎನ್‌.ರವಿಕುಮಾರ್‌, ಅರವಿಂದ ಲಿಂಬಾವಳಿ ಇತರರು ಪಾಲ್ಗೊಂಡಿದ್ದರು.

ಆರು ತಿಂಗಳಿಗೊಮ್ಮೆ ನಡೆಯುವ ಸಭೆಯಲ್ಲಿ ರಾಜ್ಯ ಹಾಗೂ ರಾಷ್ಟ್ರದ ವಿಚಾರಗಳು, ಕಳೆದ ಲೋಕಸಭಾ ಚುನಾವಣೆ, ಫ‌ಲಿತಾಂಶದ ನಂತರದ ನಡೆ ಕುರಿತೂ ಚರ್ಚೆಯಾಗಿದೆ. ಪ್ರಮುಖವಾಗಿ ಜನರನ್ನು ತೀವ್ರ ಕಾಡುತ್ತಿರುವ ಜಲಕ್ಷಾಮ, ಪರಿಸರ ಮಾಲಿನ್ಯ ಹಾಗೂ ಪ್ರಕೃತಿ ವಿಕೋಪಗಳ ನಿಯಂತ್ರಣ, ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಪಟ್ಟಂತೆ ವೈಯಕ್ತಿಕ ನೆಲೆಗಟ್ಟಿನ ಪರಿಹಾರದ ಜತೆಗೆ ಸಂಘಟನೆ, ಸಮಾಜ ಜಾಗೃತಿ, ಸರ್ಕಾರದ ಪಾತ್ರದ ಬಗ್ಗೆ ಚರ್ಚೆಯಾಯಿತು. ಹಾಗೆಯೇ 1947ರಲ್ಲಿದ್ದ ರಾಷ್ಟ್ರಭಾವ ಜಾಗೃತಿ ಈ ಬಾರಿ ಮತ್ತೆ ಮೂಡಿದೆ.

ಇದನ್ನು ನಿರಂತರವಾಗಿಟ್ಟುಕೊಳ್ಳಬೇಕಿದೆ ಎಂಬುದಾಗಿ ಸಂಘ ಪರಿವಾರದ ಪ್ರಮುಖರು ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ. ಬರ, ಪ್ಲಾಸ್ಟಿಕ್‌ ಹಾವಳಿ, ಕೆರೆ, ನದಿ ಬತ್ತುತ್ತಿರುವುದು, ಪ್ರಕೃತಿ ವಿಕೋಪದ ಬಗ್ಗೆಯೂ ಗಂಭೀರ ಚರ್ಚೆ ನಡೆದಿದ್ದು, ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಗಿಡ ನೆಡುವುದು, ಇಂಗು ಗುಂಡಿ ನಿರ್ಮಾಣ ಸೇರಿದಂತೆ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂಬ ಬಗ್ಗೆಯೂ ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದಸ್ಯತ್ವಕ್ಕೆ ಒತ್ತು: ಕಳೆದ ಲೋಕಸಭಾ ಚುನಾವಣೆಯಲ್ಲಿ 17 ರಾಜ್ಯಗಳಲ್ಲಿ ಬಿಜೆಪಿ ಶೇ.50ಕ್ಕೂ ಹೆಚ್ಚು ಮತ ಪಡೆದಿದೆ. ಸಂಭ್ರಮದ ಗುಂಗಿನಲ್ಲೇ ಇರದೆ ಸದಸ್ಯತ್ವ ನೋಂದಣಿಗೆ ವಿಶೇಷ ಒತ್ತು ನೀಡಬೇಕು. ಬೂತ್‌ಮಟ್ಟದಲ್ಲಿ ಪಕ್ಷದ ಬಲವರ್ಧನೆ, ಕಾರ್ಯಕರ್ತರನ್ನು ಉತ್ತೇಜಿಸಿ ಸಂಘಟನೆಗೆ ಆದ್ಯತೆ ನೀಡಬೇಕು. ಹೊಸ ಕಾರ್ಯಕರ್ತರು, ಸದಸ್ಯರನ್ನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವತ್ತ ಗಮನ ಹರಿಸಬೇಕು. ಸಂಸದರ ಹೆಸರು ಮುಂದಿನ ಬಾರಿ ಗೆಲುವಿನಲ್ಲಿ ಪ್ರಮುಖ ಪಾತ್ರವಾಗಿರುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು ಎಂದು ಮೂಲಗಳು ಹೇಳಿವೆ.

Advertisement

ಮಹದಾಯಿ ವಿಚಾರ – ನಿಯೋಗ ಬಗ್ಗೆ ಚರ್ಚೆ: ನೀರಿನ ಸಮಸ್ಯೆ, ಜಲವಿವಾದಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಮಹದಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಹಾಗೂ ಗೋವಾ ಮುಖ್ಯಮಂತ್ರಿಗಳ ಭೇಟಿಗೆ ನಿಯೋಗ ಕೊಂಡೊಯ್ಯುವ ಬಗ್ಗೆಯೂ ಪರಿವಾರದ ಪ್ರಮುಖರು ಸಲಹೆ ನೀಡಿದ್ದು, ಈ ಬಗ್ಗೆ ಪಕ್ಷದ ಹಿರಿಯರು ತೀರ್ಮಾನ ಕೈಗೊಳ್ಳಬೇಕಿದೆ ಎಂದು ತಿಳಿಸಿದರು ಎಂದು ತಿಳಿದು ಬಂದಿದೆ.

ಸಭೆ ಬಳಿಕ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಬರಗಾಲ, ಕುಡಿಯುವ ನೀರಿನ ಸಮಸ್ಯೆ ಕುರಿತ ಪರಿಹಾರ ಕ್ರಮಗಳಿಗೆ ಸಮಾಜ, ಸರ್ಕಾರ ಹೇಗೆ ಸ್ಪಂದಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಸಮಾಜ ಅದಕ್ಕೆ ಪೂರಕವಾಗಿ ಸ್ಪಂದಿಸುವುದು ಮುಖ್ಯ. ಆ ನಿಟ್ಟಿನಲ್ಲಿ ಸಮಾಜವನ್ನು ಸಜ್ಜುಗೊಳಿಸುವ ಬಗ್ಗೆ ಸಭೆಯಲ್ಲಿ ಚಿಂತನೆ, ಚರ್ಚೆ ನಡೆಯಿತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next