ಅಹಮದಾಬಾದ್: “ಮುಸ್ಲಿಮರು ಕೂಡ ನಮ್ಮವರೇ. ಅವರು ನಮ್ಮಿಂದ ಪ್ರತ್ಯೇಕವಾಗಿಲ್ಲ. ಅವರ ಆರಾಧನಾ ವಿಧಾನ ಮಾತ್ರ ಬದಲಾಗಿದೆ. ಈ ದೇಶ ಅವರಿಗೂ ಸೇರಿದೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸಭೆಯೊಂದರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಸಭೆಯಲ್ಲಿ ಪ್ರಮುಖ ಮುಸ್ಲಿಂ ಮುಖಂಡರು ಕೂಡ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾಗವತ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಚುನಾವಣೆ ದೃಷ್ಟಿಯಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಮುಸ್ಲಿಮರ ವಿಶ್ವಾಸಕ್ಕೆ ಪಾತ್ರವಾಗಲು ಮುಂದಾಗಿದೆ ಎನ್ನಲಾಗಿದೆ.
“ಆರ್‌ಎಸ್‌ಎಸ್ ಇಡೀ ಸಮಾಜವನ್ನು ಒಗ್ಗೂಡಿಸಲು ಬಯಸಿದೆ. ಸಂಘವನ್ನು ವಿರೋಧಿಸುವವರನ್ನೂ ಜತೆಯಲ್ಲಿಯೇ ಕರೆದುಕೊಂಡು ಹೋಗಬೇಕು. ನಾವು ಬಾಂಗ್ಲಾದೇಶಕ್ಕೆ ಸಹಾಯ ಮಾಡಿದ ರೀತಿಯಲ್ಲೇ, ಪಾಕಿಸ್ತಾನವನ್ನು ವಿರೋಧಿಸುವ ದೇಶಗಳಿಗೆ ಸಹಾಯಹಸ್ತ ಚಾಚಬೇಕಿದೆ’ ಎಂದು ಭಾಗವತ್ ಪ್ರತಿಪಾದಿಸಿದ್ದಾರೆ.
“ಸನಾತನ ಧರ್ಮವನ್ನು ಟೀಕಿಸುವವರಿಗೆ ವಾಸ್ತವವಾಗಿ ಅದರ ಬಗ್ಗೆ ತಿಳಿದಿಲ್ಲ. ಟೀಕಿಸುವ ಜನರು ಅದರ ಬಗ್ಗೆ ತಿಳಿದ ನಂತರ ಅದನ್ನು ಮೆಚ್ಚಿದ ಹಲವು ಉದಾಹರಣೆಗಳಿವೆ,’ ಎಂದು ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ಸೆ.29ರಿಂದ ಅ.1ರವರೆಗೆ ಆರ್‌ಎಸ್‌ಎಸ್ ಪದಾಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗವತ್ ಸೇರಿದಂತೆ ಸಂಘದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.