ಪುಷ್ಕರ್:ರಾಜಸ್ಥಾನದ ಪುಷ್ಕರ್‌ನಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಹಾಗೂ ಅಂಗ ಸಂಸ್ಥೆಗಳ ಸಭೆಯಲ್ಲಿ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರು ರವಿವಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್, ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತಿತರ ವಿಚಾರಗಳ ಕುರಿತು ವಿಸ್ತೃತವಾಗಿ ವಿವರ ನೀಡಿದ್ದಾರೆ.
ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಇದೇ ವೇಳೆ ಸಂಘದ ನಾಯಕರು ಹಾಗೂ ಅಂಗ ಸಂಸ್ಥೆಗಳು ಐತಿಹಾಸಿಕ ಎಂದು ಬಣ್ಣಿಸಿ ಶ್ಲಾಘಿಸಿದ್ದಾರೆ. ಇದೇ ವೇಳೆ, ಕಣಿವೆ ರಾಜ್ಯದ ಒಟ್ಟಾರೆ ಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಕ್ರಮಗಳ ಬಗ್ಗೆಯೂ ನಡ್ಡಾ ವಿವರಿಸಿದ್ದಾರೆ.
ಇನ್ನೊಂದೆಡೆ, ಪಕ್ಷದ ನಾಯಕ ರಾಮ್‌ಮಾಧವ್ ಅವರು ಎನ್‌ಆರ್‌ಸಿ ಕುರಿತು ಮಾಹಿತಿ ನೀಡಿದ್ದು, ಅನೇಕ ನಾಗರಿಕರ ಹೆಸರು ಅಂತಿಮ ಪಟ್ಟಿಯಲ್ಲಿ ಇಲ್ಲದ ಕುರಿತು ಕೇಳಲಾದ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.
ಮಿಂಚಿದ ಅಂಬೇಡ್ಕರ್, ನಾನಕ್: ಆರೆಸ್ಸೆಸ್ ಸಭೆಯ ವೇಳೆ ಆಯೋಜಿಸಲಾಗಿರುವ ವಸ್ತು ಪ್ರದರ್ಶನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್, ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ ಅವರೇ ಮಿಂಚಿದ್ದು ಕಂಡುಬಂತು. ಅಂಬೇಡ್ಕರ್, ನಾನಕ್ ಅವರ ಬೃಹತ್ ಹೋರ್ಡಿಂಗ್‌ಗಳು ಎಲ್ಲರ ಗಮನ ಸೆಳೆದವು. ಇದರ ಜತೆಗೆ ಸಂಘದ ಸ್ಥಾಪಕ ಕೆ.ಬಿ. ಹೆಡಗೇವಾರ್ ಮತ್ತು ಎಂ.ಎಸ್.ಗೋಳ್ವಾಳ್ಕರ್ ಅವರ ಬೃಹತ್ ಕಟೌಟ್‌ಗಳು ಕೂಡ ಇದ್ದವು. ವಿವಿಧ ಬುಡಕಟ್ಟು ಜನಾಂಗಗಳ ನಾಯಕರ ಸಂಕ್ಷಿಪ್ತ ಜೀವನ ಚರಿತ್ರೆಗಳ ಪುಸ್ತಕಗಳನ್ನೂ ಪ್ರದರ್ಶನಕ್ಕಿಡಲಾಗಿತ್ತು. ಇವು ಸಂಘದ ಸಾಮಾಜಿಕ ಸಾಮರಸ್ಯದ ಧ್ಯೇಯವನ್ನು ಸಾರುತ್ತಿವೆ ಎಂದು ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.