ಸಿಂಧನೂರು: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 96 ವರ್ಷಗಳ ಇತಿಹಾಸವಿದೆ. ನಾಗ್ಪುರದಲ್ಲಿ ಮೊದಲ ಪಥ ಸಂಚಲನದೊಂದಿಗೆ ಆರಂಭವಾದ ಸಂಘಟನೆ ಇಂದು ದೇಶದಲ್ಲೇ ಬಲಿಷ್ಠವಾಗಿದೆ ಎಂದು ಉತ್ತರ ಪ್ರಾಂತ ಧರ್ಮ ಜಾಗರಣಾ ಮುಖ್ಯಸ್ಥ ದಿಲೀಪ್ ವರ್ಣೇಕರ್ ಹೇಳಿದರು.
ನಗರದಲ್ಲಿ ವಿಜಯದಶಮಿ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪಥಸಂಚಲನದ ಬಳಿಕ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾಗ್ಪುರದಲ್ಲಿ ಆರಂಭವಾದ ಮೊದಲ ಕಾರ್ಯಕ್ರಮದಲ್ಲಿ ಬರೀ 33 ಸ್ವಯಂಸೇವಕರು ಪಾಲ್ಗೊಂಡಿದ್ದರು. ಅಲ್ಲಿಂದ ಆರಂಭವಾಗಿ ಬೃಹತ್ ಪ್ರಮಾಣದಲ್ಲಿ ವ್ಯಾಪಿಸಿದೆ. ಹಿಂದೂ ಧರ್ಮ, ಭಾರತ ರಾಷ್ಟ್ರ ಜಗತ್ತಿನ ಗಮನ ಸೆಳೆಯುವುದರಲ್ಲಿ ಆರೆಸ್ಸೆಸ್ ಪಾತ್ರವಾಗಿದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ದೇಶಕ್ಕಾಗಿ ಸಹಸ್ರಾರು ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಮಾತೃ ಸ್ಥಾನ
ತಾಯಿಗೆ ಮಾತೆ ಸ್ಥಾನ ನೀಡಿದ ದೇಶ ಭಾರತ. ಉಪಕಾರ ಪಡೆಯುವ ಗಂಗಾ, ಗೋಮಾತೆ ಕೂಡ ನಾವು ಪೂಜಿಸುತ್ತೇವೆ. ಆದರೆ, ಇತ್ತೀಚೆಗೆ ತಾಲಿಬಾನ್‌ನಲ್ಲಿ ಹೆಣ್ಮಕ್ಕಳ ಪರಿಸ್ಥಿತಿ ನರಕವಾಗಿದ್ದನ್ನು ನೋಡಿದ್ದೇವೆ. ನಮ್ಮ ದೇಶದಲ್ಲಿ ಸುಭಿಕ್ಷತೆ ಇದೆ. ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಹಲವಾರು ಮಹಾನ್ ವ್ಯಕ್ತಿಗಳ ತ್ಯಾಗ-ಬಲಿದಾನ, ಗಲ್ಲು ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಇದರಲ್ಲಿ ಗಾಂಧಿ ಮನೆತನದವರ ಕೊಡುಗೆ ಇಲ್ಲ. ಅವರಲ್ಲಿ ಯಾರೊಬ್ಬರೂ ಬ್ರಿಟಿಷರು, ಮೊಘಲರ ವಿರುದ್ಧ ಹೋರಾಟ ನಡೆಸಿ, ಶಿಕ್ಷೆಗೆ ಗುರಿಯಾಗಿಲ್ಲ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಬೆನ್ನೂರು ವೇದಿಕೆಯಲ್ಲಿದ್ದರು.
ಆಕರ್ಷಕ ಪಥ ಸಂಚಲನ
ನಗರದ ಮಹಾತ್ಮ ಗಾಂಧಿ ವೃತ್ತ, ಪ್ರಶಾಂತ ನಗರ, ಮಹೆಬೂಬಿಯಾ ಕಾಲೋನಿ, ಮಹಾತ್ಮ ಗಾಂಧಿ ಸರ್ಕಲ್, ಬಸವ ಸರ್ಕಲ್, ಚನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಆರೆಸ್ಸೆಸ್‌ನಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬಹಿರಂಗ ಸಮಾವೇಶದಲ್ಲಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೊಲ್ಲಾ ಶೇಷಗಿರಿರಾವ್, ಹನುಮೇಶ ಸಾಲಗುಂದಾ, ಈರೇಶ ಇಲ್ಲೂರು, ಪ್ರಹ್ಲಾದ್ ಕೆಂಗಲ್, ಬಸವರಾಜ ಬಂಗಾರಶೆಟ್ಟರ್, ಯಲ್ಲೂಸಾ ಬದಿ, ಮಂಜುನಾಥ ಅರಸೂರು ಸೇರಿದಂತೆ ಇತರರಿದ್ದರು.