ಮಧುರೈ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ಎಸ್) ದ ಕಾರ್ಯಕರ್ತರೊಬ್ಬರ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಎಂ.ಎಸ್ ಕೃಷ್ಣನ್ ಎಂಬವರ ಮನೆಯ ಮೇಲೆ ನಡೆದ ಈ ದಾಳಿಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೈಯಲ್ಲಿ ಮೂರು ಬಾಟಲಿಗಳ ಪೆಟ್ರೋಲ್ ಬಾಂಬ್ ಗಳನ್ನು ಹಿಡಿದುಕೊಂಡು ಮನೆಯ ಮುಖ್ಯ ಗೇಟ್ ನತ್ತ ಓಡುತ್ತಿರುವ ವ್ಯಕ್ತಿಯು ಅವುಗಳನ್ನು ಸತತವಾಗಿ ಮನೆಯತ್ತ ಎಸೆಯುವುದನ್ನು ಸಿಸಿಟಿವಿ ದೃಶ್ಯಗಳಲ್ಲಿ ಕಾಣಬಹುದಾಗಿದೆ.
ಪೆಟ್ರೋಲ್ ಬಾಂಬ್ ಗಳನ್ನು ಎಸೆದ ಬಳಿಕ ಆ ವ್ಯಕ್ತಿಯು ಓಡಿ ಬಂದು ತನಗಾಗಿ ಕಾಯುತ್ತಿದ್ದ ಬೈಕ್ ನ ಹಿಂಬದಿಯಲ್ಲಿ ಕುಳಿತು ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಭಾರತವು ಶಾಂತಿಯ ಪರವಾಗಿದೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಸಚಿವ ಜೈಶಂಕರ್
ಶನಿವಾರ (ಸೆ.24) ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಅಪರಿಚಿತ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ.
“ಮೂರು ಪೆಟ್ರೋಲ್ ಬಾಂಬ್ ಗಳನ್ನು ಎಸೆಯಲಾಗಿದ್ದು, ಇದರ ಬಗ್ಗೆ ನಾವು ತನಿಖೆ ಆರಂಭಿಸಿದ್ದೇವೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ಯಾವುದೇ ಹಾನಿ ಸಂಭವಿಸಿಲ್ಲ” ಎಂದು ಸಹಾಯಕ ಆಯುಕ್ತ ಶಣ್ಮುಗಂ ಹೇಳಿದ್ದಾರೆ.
ಘಟನೆಯ ಬಳಿಕ ಮಾತನಾಡಿದ ಆರ್ ಎಸ್ಎಸ್ ಕಾರ್ಯಕರ್ತ ಎಂಎಸ್ ಕೃಷ್ಣನ್, “ಕಳೆದ 45 ವರ್ಷಗಳಿಂದ ನಾನು ಆರ್ ಎಸ್ಎಸ್ ನಲ್ಲಿದ್ದೇನೆ. ಸಂಜೆ 7 ಗಂಟೆ ಸುಮಾರಿಗೆ ಹೊರಗೆ ಶಬ್ದ ಕೇಳಿಸಿತು. ಎಸೆದ ಪೆಟ್ರೋಲ್ ಬಾಂಬ್ ಗಳಿಂದ ನನ್ನ ಕಾರಿಗೆ ಬೆಂಕಿ ಹಿಡಿದಿದೆ. ತಮಿಳುನಾಡಿನೊಂದರಲ್ಲೇ ನನ್ನಂತೆ 20ಕ್ಕೂ ಹೆಚ್ಚು ಆರ್ ಎಸ್ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ದೂರು ದಾಖಲಿಸಿದ್ದೇವೆ” ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಆರ್ ಎಸ್ಎಸ್ ಕಾರ್ಯಕರ್ತರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ ಎಂದು ಉಲ್ಲೇಖಿಸಿ ತಮಿಳುನಾಡು ಬಿಜೆಪಿ ಘಟಕವು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದೆ.