Advertisement

ಸಮಷ್ಟಿ ಪ್ರಜ್ಞೆಯ ಲಾಭ-ಲೆಕ್ಕಾಚಾರ!

11:06 AM Sep 21, 2018 | Team Udayavani |

ಇನ್ನೇನು ವರ್ಷ ಕಳೆಯುವುದರಲ್ಲಿ ಲೋಕಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುತ್ತದೆ. 2019ರ ಲೋಕಸಭೆ ಚುನಾವಣೆ 2014ರಂತಿರುವುದಿಲ್ಲ ಎಂಬುದು ಬಿಜೆಪಿಗೂ ಗೊತ್ತಿದೆ, ಹಾಗೆಯೇ ಕಾಂಗ್ರೆಸ್‌ ತಾನು ಸೋತದ್ದೇಕೆ ಎಂಬ ತಲಾಶೆಯಲ್ಲಿ ಹಿಂದುತ್ವದ ಉತ್ತರವನ್ನು ಕಂಡುಕೊಂಡಿದೆ. ಹೀಗಾಗಿ 2019ರ ಲೋಕಸಭೆ ಚುನಾವಣೆ ಬಿಜೆಪಿಯ ಹಿಂದುತ್ವ ಮತ್ತು ಕಾಂಗ್ರೆಸ್‌ನ ಮೃದು ಹಿಂದುತ್ವದ ನಡುವೆಯೇ ನಡೆಯಲಿದೆ ಎಂದೇ ಭಾವಿಸಲಾಗಿತ್ತು. ಇದೀಗ ದಿಢೀರನೇ ತಮ್ಮ ಸ್ಟ್ರಾಟೆಜಿ ಬದಲಾವಣೆ ಮಾಡಿಕೊಂಡಿರುವ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯು ಕಾಂಗ್ರೆಸ್‌ನ ಮೃದು ಹಿಂದುತ್ವಕ್ಕೆ ಬಲವಾದ ಪೆಟ್ಟನ್ನೇ ನೀಡಲು ಹೊರಟಂತಿದೆ. 
ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೆ ಹಿಂದುಳಿದವರು, ದಲಿತರು ಮತ್ತು ಮುಸ್ಲಿಮರನ್ನು ತನ್ನ ಭದ್ರ ಮತಕೋಟೆ ಎಂದೇ ಭಾವಿಸಿಕೊಂಡಿದ್ದ ಕಾಂಗ್ರೆಸ್‌ಗೆ ಮೊದಲ ಪೆಟ್ಟು ಕೊಟ್ಟಿದ್ದು ಹಿಂದುಳಿದವರು. ನಿಧಾನಗತಿಯಲ್ಲಿ ಬಿಜೆಪಿಯೆಡೆಗೆ ಸಾಗಿರುವ ಈ ಸಮುದಾಯಗಳು, ತಮ್ಮ ರಾಜಕೀಯ ನೆಲೆ ಕಂಡುಕೊಳ್ಳುವಲ್ಲಿ ಒಂದು ರೀತಿಯ ಯಶಸ್ಸನ್ನೂ ಗಳಿಸಿಕೊಂಡಿವೆ. ಆದರೆ, ದಲಿತ ಮತ್ತು ಮುಸ್ಲಿಂ ಮತಗಳು ಇಂದಿಗೂ ಕಾಂಗ್ರೆಸ್‌ ಬಿಟ್ಟಿಲ್ಲ. ಇಲ್ಲಿ ಈ ಎರಡೂ ಸಮುದಾಯಗಳು ಸಂಪೂರ್ಣವಾಗಿ  ಕಾಂಗ್ರೆಸ್‌ ಜತೆಯಲ್ಲೇ ಇವೆಯೇ ಎಂಬ ಪ್ರಶ್ನೆಗೂ ಉತ್ತರ ಸಿಗಲಿಕ್ಕಿಲ್ಲ. ಇದಕ್ಕೆ ಕಾರಣ, ಈ ಸಮುದಾಯಗಳು ಆಯಾ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳ ಜತೆಗೆ ಗುರುತಿಸಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ಭಾರೀ ಲಾಭವೇನೂ ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಅತ್ತ ಹಿಂದೂ ಮತ, ಹಿಂದುಳಿದ ಸಮುದಾಯಗಳ ಮತ, ದಲಿತ ಮತ್ತು ಮುಸ್ಲಿಮರ ಮತಗಳು ಸಿಗುತ್ತಿಲ್ಲ. ಇದು ಈ ಪಕ್ಷಕ್ಕೆ ದೊಡ್ಡ ಪೆಟ್ಟನ್ನೇ ಕೊಟ್ಟಿದೆ ಎಂಬುದು 2014ರ ಲೋಕಸಭೆ ಚುನಾವಣೆ ನಂತರ ಪರಾಮರ್ಶೆಗಾಗಿ ನೇಮಕ ಮಾಡಿದ್ದ ಎ.ಕೆ.ಆ್ಯಂಟನಿ ಸಮಿತಿಯ ವರದಿ. ಇದೀಗ ಈ ಸಮಿತಿಯ ವರದಿಯನ್ನೇ ಆಧರಿಸಿ ಚುನಾವಣಾ ತಂತ್ರ ಹೆಣೆಯಲು ಹೊರಟಿರುವ ಕಾಂಗ್ರೆಸ್‌, ಮೃದು ಹಿಂದುತ್ವಕ್ಕೆ ಕೈ ಹಾಕಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ “ಜನಿವಾರಧಾರಿ ಶಿವಭಕ್ತರಾಗಿ’ ಮಾರ್ಪಟ್ಟಿದ್ದಾರೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ.

Advertisement

ಆರ್‌ಎಸ್‌ಎಸ್‌ ಪ್ರತಿತಂತ್ರ
ಕಾಂಗ್ರೆಸ್‌ ಪಕ್ಷದ ಮೃದು ಹಿಂದುತ್ವವನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎರಡು ವೇದಿಕೆಗಳನ್ನು ಬಳಸಿಕೊಂಡಿದೆ. ಒಂದು, ಅಮೆರಿಕದಲ್ಲಿ ನಡೆದ ವಿಶ್ವ ಹಿಂದೂ ಕಾಂಗ್ರೆಸ್‌. ಸ್ವಾಮಿ ವಿವೇಕಾನಂದರ ಷಿಕಾಗೋ ಭಾಷಣಕ್ಕೆ 125 ವರ್ಷ ಸಂದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಮಾರಂಭದಲ್ಲಿ ಆರ್‌ಎಸ್‌ಎಸ್‌ ಸರಸಂಘಸಂಚಾಲಕ ಮೋಹನ್‌ ಭಾಗವತ್‌ ಅವರು ಹಿಂದುತ್ವ ಮತ್ತು ಅದಕ್ಕಿರುವ ಆತಂಕಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಎಚ್ಚೆತ್ತುಕೊಳ್ಳುವುದಕ್ಕೂ ಕರೆ ನೀಡಿದ್ದರು. ಇದು ಖಂಡಿತವಾಗಿ ದೇಶದಿಂದ ಹೊರಗಿರುವ ಹಿಂದೂಗಳ ಕ್ರೋಢೀಕರಣ ಎಂಬುದರಲ್ಲಿ ಎರಡು ಮಾತಿಲ್ಲ. 2014ರಲ್ಲಿ ಬಿಜೆಪಿ ಗೆಲುವಿಗೆ ಅನಿವಾಸಿ ಭಾರತೀಯರ ಕೊಡುಗೆ ಬಹಳಷ್ಟಿತ್ತು. ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರು ಮಾಡಿದ್ದ ಭಾಷಣಗಳ ಪ್ರಭಾವದಿಂದಲೇ ಭಾರತದಲ್ಲಿರುವ ತಮ್ಮವರ ಮತಗಳನ್ನು ಬಿಜೆಪಿಗೆ ತಿರುಗಿಸುವಲ್ಲಿಯೂ ಯಶಸ್ವಿಯಾಗಿದ್ದರು. ಹೀಗಾಗಿ ಆಗಿನ ಸಮ್ಮೇಳನ ಮತ್ತು ಅದರಲ್ಲಿ ಮಾತನಾಡಿದ್ದವರೆಲ್ಲರ 
ಉದ್ದೇಶ “ನಿಜವಾದ ಹಿಂದೂ ಸಂರಕ್ಷಕರು’ ಮತ್ತು ಈಗ ಹುಟ್ಟಿಕೊಂಡಿರುವವರ ನಡುವಿನ ವ್ಯತ್ಯಾಸದ ಎಳೆಯನ್ನು ವಿವರಿಸುವುದೇ ಆಗಿತ್ತು. ಅಲ್ಲದೆ, ಸಿಂಹ ಏಕಾಂಗಿಯಾಗಿದ್ದರೆ ಕಾಡು ನಾಯಿಗಳಿಗೆ ಬಲಿಯಾಗಬಹುದು ಎಂದು ಹೇಳುವ ಮೂಲಕ ಹಿಂದೂಗಳು ಒಗ್ಗಟ್ಟಾಗಬೇಕು ಎಂದೂ ಹೇಳಿದ್ದರು. ಒಂದು ಲೆಕ್ಕಾಚಾರದಲ್ಲಿ ಇದು ಹಿಂದೂಗಳನ್ನು ಒಗ್ಗೂಡಿಸುವ ಕೆಲಸವೇ ಆಗಿತ್ತು. 

ಎರಡು, ದೆಹಲಿಯ ವಿಜ್ಞಾನ ಭವನದಲ್ಲಿ ಆರ್‌ಎಸ್‌ಎಸ್‌ ನಡೆಸಿದ ಮೂರು ದಿನಗಳ ವಿಚಾರ ಸಂಕಿರಣ. ಮುಂದಿನ ಲೋಕಸಭೆ ಚುನಾವಣೆ ಮತ್ತು ಈ ವರ್ಷಾಂತ್ಯಕ್ಕೆ ನಡೆಯಲಿರುವ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸಜ್ಜುಗೊಳಿಸುವ ಸಂಬಂಧ ಈ ವಿಚಾರ ಸಂಕಿರಣ ಮಹತ್ವದ್ದಾಗಿತ್ತು. ಬುಧವಾರವಷ್ಟೇ ಮುಗಿದ ಈ ವಿಚಾರ ಸಂಕಿರಣದಲ್ಲಿ ಆರ್‌ಎಸ್‌ಎಸ್‌ ತನ್ನ ಬದಲಾದ ಚಹರೆಯನ್ನು ತೋರಿಸುವ ಪ್ರಯತ್ನ ಮಾಡಿದೆ. ಮೊದಲ ದಿನದಲ್ಲಿ ಕಾಂಗ್ರೆಸ್‌ನ ಹೊಗಳಿಕೆ ಮತ್ತು ಆ ಪಕ್ಷದಿಂದ ಉದ್ಭವಿಸಿದ ನಾಯಕರ ತ್ಯಾಗ, ಎರಡನೇ ದಿನದಲ್ಲಿ ಮುಸ್ಲಿಮರಿಲ್ಲದೇ ಹಿಂದುತ್ವವಾಗದು ಎಂಬ ನುಡಿ ಹಾಗೂ ಮೂರನೇ ದಿನದಲ್ಲಿ ಎಲ್ಲರನ್ನೊಳಗೊಂಡ ಅಭಿವೃದ್ಧಿಯ ಮಾತುಗಳು ಈ ಬದಲಾವಣೆಯ ಗಾಳಿಯನ್ನು ತೋರಿಸಿದವು. 

ಈ ಮೂರೂ ದಿನದಲ್ಲಿ ಆರ್‌ಎಸ್‌ಎಸ್‌ ಭಾಷಣಗಳಿಗೆ ಪ್ರೇಕ್ಷಕರಾಗಿದ್ದುದು ಆರ್‌ಎಸ್‌ಎಸ್‌ ಕಾರ್ಯಕರ್ತರಲ್ಲ, ಬದಲಾಗಿ, ಸಮಾಜದ ವಿವಿಧ ಸ್ತರಗಳಲ್ಲಿನ ಗಣ್ಯರು, ಆಹ್ವಾನಿತರು. ಈ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮೋಹನ್‌ ಭಾಗವತ್‌ ಅವರು ಆರ್‌ಎಸ್‌ಎಸ್‌ ಅನ್ನು ಒಳಗೊಂಡ ಭವಿಷ್ಯ ಭಾರತದ ರೂಪುರೇಷೆ ಕಟ್ಟಿಕೊಟ್ಟರು. ಸದ್ಯ ಆರ್‌ಎಸ್‌ಎಸ್‌ ಅನ್ನು ಹೊರಗಿಟ್ಟು ಭಾರತ ನಿರ್ಮಾಣದ ಕನಸು ಕಾಣುತ್ತಿರುವ 
ಕಾಂಗ್ರೆಸ್‌ ಮತ್ತು ಎಡಪಕ್ಷಗಳಿಗೆ ಈ ಮೂಲಕ ಸಡ್ಡು ಹೊಡೆದರು. 

ಎಲ್ಲಿ ಆರ್‌ಎಸ್‌ಎಸ್‌ ಅನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಿರೋಧಿಗಳಿಗೆ ಅನ್ನಿಸಿದೆಯೋ ಆ ಎಲ್ಲ ಕ್ಷೇತ್ರಗಳ ಬಗ್ಗೆಯೂ ಈ ಮೂರು ದಿನದ ವಿಚಾರ ಸಂಕಿರಣದಲ್ಲಿ ಚರ್ಚೆಯಾಗಿದೆ. ಇದಕ್ಕೆ ಆರ್‌ಎಸ್‌ಎಸ್‌ ನಾಯಕರು ಉತ್ತರ ಕೊಟ್ಟಿದ್ದಾರೆ. ಇದನ್ನು ಬಿಡಿಬಿಡಿಯಾಗಿ ನೋಡುವುದಾದರೆ,  ಮೋಹನ್‌ ಭಾಗವತ್‌ ಅವರು ಕಾಂಗ್ರೆಸ್‌ ಅನ್ನು ಒಪ್ಪಿಕೊಂಡ ಬಗೆ. ಇಡೀ ಜಗತ್ತಿಗೆ ಗೊತ್ತಿರುವ ಸತ್ಯವೆಂದರೆ, ಕಾಂಗ್ರೆಸ್‌ ಮತ್ತು ಆರ್‌ಎಸ್‌ಎಸ್‌ ನಡುವೆ ಭಾರೀ ವಿಚಾರ ದ್ವೇಷವಿದೆ. ರಾಹುಲ್‌ ಗಾಂಧಿಯವರ ಪ್ರತಿ ಭಾಷಣದಲ್ಲೂ ಆರ್‌ಎಸ್‌ಎಸ್‌ ಕುರಿತ ನಖಶಿಖಾಂತ ವಿರೋಧ ಇದ್ದೇ ಇರುತ್ತದೆ. ಇತ್ತೀಚೆಗೆ ರಾಹುಲ್‌ ಗಾಂಧಿಯವರ ಲಂಡನ್‌ ಸೇರಿದಂತೆ ವಿದೇಶ ಪ್ರವಾಸಗಳಲ್ಲಿ ಆರ್‌ಎಸ್‌ಎಸ್‌ 
ಕುರಿತ ಬ್ರದರ್‌ಹುಡ್‌ ಹೇಳಿಕೆ ಮತ್ತು ಆರ್‌ಎಸ್‌ಎಸ್‌ ಅನ್ನು ಏಕೆ ವಿರೋಧಿಸಬೇಕು ಎಂಬ ಮಾತುಗಳು ಅವರ ಕೋಪವನ್ನು ಹೊರಹಾಕಿದ್ದವು. ಈ ನಿಟ್ಟಿನಲ್ಲಿಯೇ ಯಾರನ್ನೂ ದ್ವೇಷಿಸಬಾರದು ಎಂಬ ವಿಚಾರ ಹೇಳುವ ಸಲುವಾಗಿಯೇ ಮೋಹನ್‌ ಭಾಗವತ್‌ ಅವರು ವಿಚಾರ ಸಂಕಿರಣದ ಮೊದಲ ದಿನವೇ ಕಾಂಗ್ರೆಸ್‌ ಅನ್ನು ಹೊಗಳಿ, ಈ ಪಕ್ಷದಿಂದ ಹೊರಬಂದ ಸ್ವಾತಂತ್ರ್ಯ ಪೂರ್ವ ನಾಯಕರ ಗುಣಗಾನ ಮಾಡಿದರು. ನೀವು ಎಷ್ಟೇ ತೆಗಳಿ, ಆದರೆ ನಾವು ನಿಮ್ಮ ಪಕ್ಷವನ್ನು ಗೌರವಿಸುತ್ತೇವೆ ಎಂದು ಕಾಂಗ್ರೆಸ್‌ಗೆ ಸೂಚ್ಯವಾಗಿ ಹೇಳುವ ಅಂಶವೂ ಇದರಲ್ಲಿ ಅಡಕವಾಗಿತ್ತು. 

Advertisement

ಇನ್ನು ಎರಡನೇ ದಿನದಲ್ಲಿ ಮೋಹನ್‌ ಭಾಗವತ್‌ ಅವರ ಭಾಷಣ ಮುಸ್ಲಿಮರನ್ನು ಒಪ್ಪಿಕೊಳ್ಳುವ ಅನಿವಾರ್ಯತೆಯನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರಿಗೆ ಹೇಳುವುದಾಗಿತ್ತು. ಅಲ್ಲದೆ ಆರ್‌ಎಸ್‌ಎಸ್‌ ಕಡೆಯಿಂದ ಇದು ತೀರಾ ಅನಿರೀಕ್ಷಿತ ಮತ್ತು ಅಚ್ಚರಿಯ ಬೆಳವಣಿಗೆ ಕೂಡ. ಮಾಧವ್‌ ಸದಾಶಿವ ಗೋಳ್ವಲ್ಕರ್‌(ಶ್ರೀ ಗುರೂಜಿ) ಅವರ “ಬಂಚ್‌ ಆಫ್ ಥಾಟ್ಸ್‌’ನಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಶತ್ರುಗಳು ಎಂಬ ಅಂಶವನ್ನೇ ಬದಿಗಿರಿಸಿ, ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ರಾಷ್ಟ್ರೀಯವಾಗಿ ಗುರುತಿಸಿಕೊಳ್ಳುವುದೇ ಹಿಂದುವಾಗಿ ಎಂದ 
ಅವರು, ಹಿಂದೂ ರಾಷ್ಟ್ರವೆಂದಲ್ಲಿ ಅಲ್ಲಿ ಮುಸ್ಲಿಮರಿಗೆ ಜಾಗವಿಲ್ಲ ಎಂದರ್ಥವಲ್ಲ. ಹಿಂದುತ್ವದ ಅರ್ಥವೇ ಎಲ್ಲರನ್ನೂ ಒಳ ಗೊಳ್ಳುವಂಥದ್ದು ಎಂದರು. ಎಲ್ಲರೂ ನಮ್ಮವರೇ, ನಮ್ಮ ಸಂಪ್ರದಾಯವೇ ಒಗ್ಗಟ್ಟಿನದ್ದು, ವಸುದೈವ ಕುಟುಂಬಕಂ ಅಡಿಯಲ್ಲಿ ಜೀವನ ಮಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಮುಸ್ಲಿಮರನ್ನು ಸ್ವಾಗತಿಸುವ ಮನಸ್ಸು ಆರ್‌ಎಸ್‌ಎಸ್‌ನಲ್ಲಿದೆ ಎಂಬುದನ್ನು ಬಹಿರಂಗ ಮಾಡಿದರು. 

2019ರ ಲೋಕಸಭೆ ಚುನಾವಣೆಗಾಗಿ ಮೋಹನ್‌ ಭಾಗವತ್‌ ಅವರ ಈ ಮಾತು ತೀರಾ ಪ್ರಮುಖವಾದವು. ಮೃದು ಮತ್ತು ಕಠೊರ ಹಿಂದುತ್ವ ಮತ್ತು ಮತಗಳ ಧ್ರುವೀಕರಣ ವಿಚಾರದಲ್ಲಿ ನಡೆಯುತ್ತಿರುವ ರಾಜಕಾರಣವನ್ನೇ ಸೋಲಿಸುವ ಇರಾದೆ ಈ ಮಾತುಗಳಲ್ಲಿದೆ. ಹಿಂದುತ್ವ ಎಂಬ ವಿಚಾರಕ್ಕೆ ಬಂದಾಗ, ಮೃದು ಮತ್ತು ಕಠೊರ ಏಕೆ? ಹಿಂದಿನಿಂದಲೂ ಅದನ್ನೇ ಪ್ರತಿ ಪಾದಿಸಿಕೊಂಡು ಬರುತ್ತಿರುವ ನಾವಿಲ್ಲವೇ ಎಂದು ಹೇಳುವುದು ಮತ್ತು ಕಾಂಗ್ರೆಸ್‌ ಜತೆಯಲ್ಲೇ ಇದ್ದ ಮುಸ್ಲಿಂ ಮತಗಳನ್ನು ತಮ್ಮ ಕಡೆಗೆ ಸೆಳೆಯುವ ತಂತ್ರಗಾರಿಕೆ ಇಲ್ಲಿದೆ. ಮೃದು ಹಿಂದುತ್ವ
ವೆಂಬುದು ಇಲ್ಲವೇ ಇಲ್ಲ ಎಂಬ ಮಾತುಗಳ ಮೂಲಕವೇ ಕಾಂಗ್ರೆಸ್‌ನ ಹಿಂದೂ ಮತ್ತು ಮುಸ್ಲಿಂ ಮತಗಳ ನಡುವೆ ಮಾಡುತ್ತಿರುವ “ಬ್ಯಾಲೆನ್ಸ್‌’ ಅನ್ನು ತಪ್ಪಿಸುವ ತಂತ್ರವಿದೆ. ಸದ್ಯ ರಾಹುಲ್‌ ಗಾಂಧಿಯವರ ಶಿವಭಕ್ತ ಮತ್ತು ಜನಿವಾರಧಾರಿ ಎಂಬ ಹೇಳಿಕೆಗಳ ಹಿಂದಿನ ಸತ್ಯವನ್ನು ಹೇಳುವ ಮೂಲಕ, ಕಾಂಗ್ರೆಸ್‌ ನಿಮ್ಮನ್ನು ಇಷ್ಟು ವರ್ಷ ಬಳಸಿಕೊಂಡು ಅನ್ಯಾಯ ಮಾಡಿದೆ, 

ನಾವು ನಿಮ್ಮನ್ನು ಎಲ್ಲರಂತೆಯೇ ನೋಡುತ್ತೇವೆ ಎಂಬ ಮಾತುಗಳ ಮೂಲಕ ಮುಸ್ಲಿಮರನ್ನು ಸೆಳೆಯುವ ಪ್ರಯತ್ನವಿದೆ. ಅಲ್ಲದೆ, ಸದ್ಯ ಕಾಂಗ್ರೆಸ್‌ನಲ್ಲಿ ಇಂಥದ್ದೊಂದು ತೊಯ್ದಾಟವಿದೆ. ತೀರಾ ಮತಕ್ಕಾಗಿ ಹಿಂದುಗಳ ಹಿಂದೆ ಹೋದರೆ ಎಲ್ಲಿ ತಮ್ಮ ಸಾಂಪ್ರದಾಯಿಕ ಮತಗಳಾದ ದಲಿತ ಮತ್ತು ಮುಸ್ಲಿಂ ಸಮುದಾಯ ಬಿಟ್ಟು ಹೋಗುತ್ತದೆಯೋ ಎಂಬ ಗೊಂದಲದಲ್ಲೇ ಎಚ್ಚರಿಕೆಯ ನಡೆ ಇಡುತ್ತಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡುವ ತಂತ್ರಗಾರಿಕೆಯೂ ಇದರಲ್ಲಿದೆ ಎಂಬ ವಿಶ್ಲೇಷಣೆಗಳು ನಡೆದಿವೆ. 

ಇದರ ಜತೆಯಲ್ಲೇ ಮುಸ್ಲಿಮರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಬುಧವಾರವಷ್ಟೇ ದಿಢೀರ್‌ ತ್ರಿವಳಿ ತಲಾಖ್‌ ಜಾರಿಗಾಗಿ ಸುಗ್ರೀವಾಜ್ಞೆ ತಂದಿದೆ. ಇದರ ಹಿಂದಿನ ಉದ್ದೇಶ ಆ ಸಮು ದಾಯದಲ್ಲಿನ ಮಹಿಳೆಯರ ಮನ ಗೆಲ್ಲುವುದಾಗಿದೆ. ಈಗಾಗಲೇ ತ್ರಿವಳಿ ತಲಾಖ್‌ ವಿಚಾರ, ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಮತ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂಬ ಮಾತುಗಳಿವೆ. ಅಲ್ಲದೆ ಮೊನ್ನೆಯಷ್ಟೇ ಪ್ರಧಾನಿಗಳು ಮಧ್ಯಪ್ರದೇಶದಲ್ಲಿ ಮುಸ್ಲಿಮರ ಬೋಹ್ರಾ ಸಮುದಾಯದವರ ಸೈಫಿ ಮಸೀದಿಗೆ ಹೋಗಿ ಭಾಷಣ ಮಾಡಿ, ಇಡೀ ಸಮುದಾಯವನ್ನೇ ಶ್ಲಾ ಸಿ ಬಂದಿದ್ದಾರೆ. 

ಇಕ್ಕಟ್ಟಿನಲ್ಲಿ ಕಾಂಗ್ರೆಸ್‌
ಆರ್‌ಎಸ್‌ಎಸ್‌ನ ಈ ಮಾತುಗಳು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿವೆ. ಎಲ್ಲರನ್ನು ಒಪ್ಪಿಕೊಳ್ಳುವ ಮತ್ತು ಹೊಂದಾಣಿಕೆಯಿಂದ ಕರೆದುಕೊಂಡು ಹೋಗುವ ಸಮಾಜದ ಅಗತ್ಯದ ಬಗ್ಗೆ ಒತ್ತಿ ಹೇಳಿರುವ ಆರ್‌ಎಸ್‌ಎಸ್‌, ಈ ನಿಟ್ಟಿನಲ್ಲೇ 2019ರ ಲೋಕಸಭೆ ಚುನಾವಣೆಗಾಗಿ ತಂತ್ರಗಾರಿಕೆ ರೂಪಿಸುವುದು ಪಕ್ಕಾ. ಆರ್‌ಎಸ್‌ಎಸ್‌ ಏನೇ ತಂತ್ರಗಾರಿಕೆ ಮಾಡಿದರೂ ಅದರ ಲಾಭ ಬಿಜೆಪಿಗೇ. ಆದರೆ, ಕಾಂಗ್ರೆಸ್‌ಗೆ ಈಗ ತೀರಾ ತನ್ನ ಸಂಪ್ರದಾಯವಾದಿ ಮತಗಳ ಹಿಂದೆ ಹೋಗುವುದೋ ಅಥವಾ ಇದೀಗ ಬದಲಾವಣೆ ಮಾಡಿಕೊಂಡ ಹಾಗೆ ಮೃದು ಹಿಂದುತ್ವದ ಬೆನ್ನತ್ತಿ ಹೋಗುವುದೋ ಎಂಬ ಗೊಂದಲಗಳಿವೆ. ಎಲ್ಲರನ್ನೂ ಒಳಗೊಂಡ ಸಿದ್ಧಾಂತಕ್ಕೇ ಆರ್‌ಎಸ್‌ಎಸ್‌ ಹೋಗಿರುವಾಗ, ಹಿಂದೂ ಮತಗಳ ಮೇಲೆ ಆಸಕ್ತಿ ಏಕೆ ಎಂದು ಮುಸ್ಲಿಂ ಸಮುದಾಯ ಕೇಳಿದರೆ ಯಾವ ಉತ್ತರ ಕೊಡುವುದು ಎಂಬ ಜಿಜ್ಞಾಸೆಯೂ ಈ ಪಕ್ಷದ ನಾಯಕರಲ್ಲಿದೆ. ಆದರೆ, ಅನಿವಾರ್ಯವಾಗಿ ಹೋಗುತ್ತಿದ್ದೇವೆ, ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಿದರೂ ಮುಸ್ಲಿಂ ಸಮುದಾಯದ ನಂಬದೇ ಹೋದರೆ ಏನು ಮಾಡುವುದು ಎಂಬ ಆತಂಕವಿದೆ. ಒಟ್ಟಾರೆಯಾಗಿ ಈ ರಾಜಕೀಯ ತಂತ್ರಗಾರಿಕೆಗಳು 2019ರಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದಂತೂ ಖಂಡಿತ.

* ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next