ಬೆಂಗಳೂರು: ನಗರದ ಹೊರವಲಯದ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಮಾ.15ರಿಂದ 17ರವರೆಗೆ ನಡೆಯಲಿರುವ ಆರ್‌ಎಸ್‌ಎಸ್ “ಅಖಿಲ ಭಾರತೀಯ ಪ್ರತಿನಿಧಿ ಸಭಾ’ದಲ್ಲಿ 15 ಲಕ್ಷ ಸ್ವಯಂಸೇವಕರನ್ನು ಸಮಾಜ ಪರಿವರ್ತನೆಯ ಚಟುವಟಿಕೆಗಳಲ್ಲಿ ತೊಡಗಿಸುವ ಸಂಬಂಧ ಸುದೀರ್ಘ ಚರ್ಚೆ ನಡೆಯಲಿದೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ್ ಕುಮಾರ್ ತಿಳಿಸಿದ್ದಾರೆ.
ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಆರ್‌ಎಸ್‌ಎಸ್ ನಡೆಸಿದ ಸರ್ವೇಕ್ಷಣೆಯಲ್ಲಿ 15 ಲಕ್ಷ ಸ್ವಯಂಸೇವಕರ ಮಾಹಿತಿ ಲಭ್ಯವಾಗಿದ್ದು, ಅವರು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಸರ್ವೇಯಲ್ಲಿ ತಿಳಿಯಲಾಗಿದೆ. ಮುಂಬರುವ ದಿನಗಳಲ್ಲಿ ಅವರನ್ನು ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಲು ರಾಷ್ಟ್ರೀಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಕರ್ನಾಟಕದಲ್ಲಿ 7 ಬಾರಿ ಸಭೆ ನಡೆದಿದ್ದು, ಅದರಲ್ಲಿ 5 ಬಾರಿ ಬೆಂಗಳೂರಿನಲ್ಲಿ ಸಭೆ ನಡೆದಿರುವುದು ವಿಶೇಷ. ಸಭಾದಲ್ಲಿ ಕಳೆದ ವರ್ಷ ಆರ್‌ಎಸ್‌ಎಸ್‌ನಲ್ಲಿ ನಡೆದ ವಿದ್ಯಮಾನಗಳು, ಕಾರ್ಯಗಳ ಅವಲೋಕನ, ವಾರ್ಷಿಕ ವರದಿ, ಸಂಘಟನೆಯ ವಿಸ್ತಾರ, ಹೊಸ ಆಯಾಮಗಳು, ಬರುವ ವರ್ಷದ ಯೋಜನೆ ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳ ಪ್ರವಾಸ ಯೋಜನೆ ಬಗ್ಗೆ ಚರ್ಚಿಸಲಾಗುವುದು. ಇದು ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಪ್ರತಿನಿಧಿಗಳ ಸಭೆಯಾಗಿದ್ದು, 370 ವಿಧಿ ರದ್ದು, ಸಿಎಎ, ಎನ್‌ಆರ್‌ಸಿ ಸೇರಿದಂತೆ ಸಮಕಾಲೀನ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಮಾ.14ರಂದು ಕಾರ್ಯಕಾರಿಣಿ: ಮಾ.14ರಂದು ಅಖಿಲ ಭಾರತೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಂಘದ ಪ್ರಮುಖರು ಕಾರ್ಯಸೂಚಿಯನ್ನು ಸಿದ್ಧಪಡಿಸಲಿದ್ದಾರೆ. ಮಾ. 15ರಂದು ಬೆಳಗ್ಗೆ 8.30ಕ್ಕೆ ಉದ್ಘಾಟನೆಯಾಗಲಿದೆ. ಸಭೆಯಲ್ಲಿ ಆರ್‌ಎಸ್‌ಎಸ್‌ನ ಸರಸಂಘ ಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ (ಭಯ್ನಾಜೀ) ಜೋಷಿ, ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ವಿಷ್ಣು ಸದಾಶಿವ ಕೊಕೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ಸುಬ್ಬಯ್ಯ ಶಣ್ಮುಗಂ, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ವನವಾಸಿ ಕಲ್ಯಾಣ, ವಿದ್ಯಾ ಭಾರತಿ, ಸಕ್ಷಮ ಸಂಘಟನೆ, ಭಾರತೀಯ ಮಜ್ದೂರ್ ಸಂಘ, ರಾಷ್ಟ್ರ ಸೇವಿಕಾ ಸಮಿತಿ, ಕಿಸಾನ್ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿ ಸಂಘ ಪರಿವಾರದ 35 ಸಂಸ್ಥೆಗಳ ಪ್ರತಿನಿಧಿಗಳು, 44 ಪ್ರಾಂತಗಳನ್ನೊಳಗೊಂಡ 11 ಕ್ಷೇತ್ರದಿಂದ ಸಂಘದ ಪ್ರತಿನಿಧಿಗಳು ಸೇರಿ ದೇಶದ ಎಲ್ಲಾ ರಾಜ್ಯಗಳ 1,500ಕ್ಕೂ ಅಧಿಕ ಆರ್‌ಎಸ್‌ಎಸ್‌ನ ಕಾರ್ಯಕರ್ತರು ಹಾಗೂ ವಿಶೇಷ ಆಹ್ವಾನಿತರು ಪಾಲ್ಗೊಳ್ಳಲಿದ್ದಾರೆ. ಮಾ. 17ರಂದು ಸಂಘದ ಸರಕಾರ್ಯವಾಹ ಭಯ್ನಾಜೀ ಜೋಶಿ ಅವರು ಸಭೆ ತೆಗೆದುಕೊಂಡ ನಿರ್ಣಯಗಳನ್ನು ತಿಳಿಸಲಿದ್ದಾರೆ ಎಂದರು. ಗೋಷ್ಠಿ ಯಲ್ಲಿ ಆರ್‌ಎಸ್‌ಎಸ್‌ನ ಸಹ ಪ್ರಚಾರಕ ನರೇಂದ್ರ ಠಾಕೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರತಿನಿಧಿಗಳಿಗೂ ತಪಾಸಣೆ ಕಡ್ಡಾಯ: ಕೊರೊನಾ ಹಿನ್ನೆಲೆ “ಅಖಿಲ ಭಾರತೀಯ ಪ್ರತಿನಿಧಿ ಸಭೆ’ಗೆ ಆಗಮಿಸುವ ಎಲ್ಲ ಪ್ರತಿನಿಧಿಗಳಿಗೂ ತಪಾಸಣೆ ಕಡ್ಡಾಯವಾಗಿದೆ. ಈ ಸಂಬಂಧ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿಯೊಬ್ಬರಿಗೂ ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಒಳಪಡುವ ವ್ಯಕ್ತಿಯ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಭೆಗೆ ಪ್ರವೇಶ ನೀಡಲು ಸಂಘ ಪರಿವಾರ ತೀರ್ಮಾನಿಸಿದೆ.