ಹೊಸದಿಲ್ಲಿ : ಹಾಲಿ ಬಜೆಟ್ ಅಧಿವೇಶನದ ಕಲಾಪ ಗದ್ದಲ, ಗಲಾಟೆ, ಗೊಂದಲ, ಅಡಚಣೆಗಳಿಂದ ಹಾಳಾಗಿ ಹೋಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಸಭೆಯ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ಮೇಲ್ಮನೆಯ ಕಲಾಪಗಳ ಅಡಚಣೆಯನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವ ನಿಟ್ಟಿನಲ್ಲಿ ರಾಜ್ಯಸಭೆ ಕಲಾಪ ನೀತಿ ನಿಯಮಗಳ ಪರಾಮರ್ಶೆಗೆ ನಿರ್ಧರಿಸಿದ್ದಾರೆ.
“ರಾಜ್ಯಸಭೆಯ ಕಲಾಪ ನೀತಿ ನಿಯಮಗಳನ್ನು ಪರಾಮರ್ಶಿಸಲು ನಾನು ಈಗಾಗಲೇ ನಿರ್ಧರಿಸಿದ್ದೇನೆ. ಈ ಬಗೆಗಿನ ಕರಡು ಸಿದ್ಧಗೊಂಡ ಕೂಡಲೇ ಅದನ್ನು ನಿಯಮ ಸಮಿತಿಯಲ್ಲಿ ಚರ್ಚಿಸಲಾಗುವುದು. ರೆಹಮಾನ್ ಖಾನ್ ಈಗಷ್ಟೇ ಹೇಳಿರುವ ಪ್ರಕಾರ ನಾವು ಆ ದಿಶೆಯಲ್ಲಿ ಸಾಗುವೆವು’ ಎಂದು ನಾಯ್ಡು ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕ ಕೆ ರೆಹಮಾನ್ ಖಾನ್ ಅವರು ತಮ್ಮ ರಾಜ್ಯಸಭಾ ಅವಧಿಯನ್ನು ಮುಗಿಸಿ ನಿವೃತ್ತರಾಗುವ ಸಂದರ್ಭದಲ್ಲಿ ಮಾಡಿದ ವಿದಾಯ ಭಾಷಣದಲ್ಲಿ, “ರಾಜ್ಯಸಭೆಯ ನೀತಿ ನಿಯಮಗಳಿಗೆ ಹೆಚ್ಚಿನ ಗಮನ ಕೊಡಬೇಕು’ ಎದು ಹೇಳಿದ್ದರು.
“ರಾಜ್ಯಸಭೆಯಲ್ಲಿ ಕಲಾಪವೇ ಸಾಗದ ರೀತಿಯ ಗಲಭೆ, ಗದ್ದಲ, ಗೊಂದಲ ಯಾಕಾಗಿ ? ನಾವೇಕೆ ಚರ್ಚೆಯಿಂದ ವಿಮುಖರಾಗುತ್ತಿದ್ದೇವೆ ? ಸರಕಾರ ಕೂಡ ಯಾಕೆ ಚರ್ಚೆಯಿಂದ ದೂರ ಇರಲು ಇಷ್ಟಪಡುತ್ತದೆ ?ವಿರೋಧ ಪಕ್ಷಗಳಲ್ಲಿರುವ ಕೆಲವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಸಿಗುತ್ತಿಲ್ಲ ಎಂಬ ಅಭಿಪ್ರಾಯವಿದೆ. ಆದುದರಿಂದಲೇ ನಾವು ಗದ್ದಲ, ಗಲಾಟೆಗಳ ಅಡಚಣೆಯ ಬೆಂಬಲವನ್ನು ಪಡೆಯುತ್ತೇವೆ’ ಎಂದು ರೆಹಮಾನ್ ಹೇಳಿದ್ದರು.
ನಿವೃತ್ತರಾಗುತ್ತಿರುವ ಹಿರಿಯ ರಾಜ್ಯಸಭಾ ಸದಸ್ಯರಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲಾಗದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಖೇದ ವ್ಯಕ್ತಪಡಿಸಿದ್ದರು. ರಾಜ್ಯಸಭಾ ಕಲಾಪ ಹಾಳಾಗಿರುವುದಕ್ಕೆ ವಿರೋಧ ಪಕ್ಷಗಳನ್ನೇ ದೂರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಗುಲಾಮ್ ನಬೀ ಆಜಾದ್ ಹೇಳಿದರು.