ಮುದಗಲ್ಲ: ತಲೇಖಾನ್ ಗ್ರಾಪಂ ವ್ಯಾಪ್ತಿಯ ರಾಮಪ್ಪನ ತಾಂಡಾ, ದಾದುಡಿ ತಾಂಡಾ, ತಲೇಖಾನ್ ಸೇರಿದಂತೆ ವಿವಿಧೆಡೆ ಅನುಷ್ಠಾನಗೊಳಿಸಲಾದ ಕುಡಿಯುವ ನೀರಿನ ಕಾಮಗಾರಿಗಳಿಗೆ ಕೋಟಿ ಕೋಟಿ ಹಣ ಖರ್ಚಾದರೂ ಹನಿ ನೀರು ಸಿಕ್ಕಿಲ್ಲ!.
ಗ್ರಾಮೀಣ ಭಾಗದಲ್ಲಿ ಬದುಕು ಸಾಗಿಸುತ್ತಿರುವ ಜನರಿಗೆ ಬಿಸಿಲಿನ ತಾಪ ನೆತ್ತಿ ಸುಡಲಾರಂಭಿಸಿದೆ. ಕುಡಿಯುವ ನೀರಿಗೆ ಆಸೆರೆಯಾಗಿದ್ದ ಕೋಳವೆ ಬಾವಿ ಸೇರಿದಂತೆ ಇತರ ಜಲ ಮೂಲಗಳು ಬತ್ತಿ ಅಂತರ್ಜಲ ಪಾತಾಳದತ್ತ ಮುಖ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಗೆ ಇದುವರೆಗೆ ಜಾರಿಗೊಳಿಸಿದ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರೆ ಹಲವು ತಲೆಮಾರುಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ತಾತ್ಕಾಲಿಕ ಪರಿಹಾರ ಹುಡುಕುವ, ಜನರ ಬಗ್ಗೆ ಮೊಸಳೆ ಕಣ್ಣಿರು ಸುರಿಸುವ ಪರಿಣಾಮ ಕುಡಿಯುವ ನೀರಿನ ಯೋಜನೆಗಳು ಹಳ್ಳ ಹಿಡಿದು ಜನ-ಜಾನುವಾರು ವರ್ಷವಿಡಿ ಕುಡಿಯುವ ನೀರಿಗಾಗಿ ಪರಿತಪಿಸುವ ಪರಸ್ಥಿತಿ ನಿರ್ಮಾಣವಾಗಿದೆ.
2014-15ರಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಸುಮಾರು 65ಲಕ್ಷ ರೂ. ಮಂಜೂರು ಮಾಡಿ ಲಿಂಬೆಪ್ಪನ ತಾಂಡಾ ಹಾಗೂ ರಾಮಪ್ಪನ ತಾಂಡಾದ ಮಧ್ಯೆ ನೀರು ಸಂಗ್ರಹ ತೊಟ್ಟಿ ನಿರ್ಮಿಸಿ, ಲಿಂಬೆಪ್ಪನ ತಾಂಡಾದ ಹಳ್ಳದಲ್ಲಿ ಕೊಳವೆ ಬಾವಿ ಕೊರೆಸಿ ಪಂಪ್‌ಸೆಟ್ ಮತ್ತು ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಎರಡು ವರ್ಷದಿಂದ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನೀರಿನ ಟ್ಯಾಂಕಿಗೆ ಹಳ್ಳದ ಬೋರ್‌ವೆಲ್ ನಿಂದ ನೀರು ಸರಬರಾಜಿಗೆ ಪೈಪ್‌ಲೈನ್ ಸಹ ಹಾಕಿಲ್ಲ ಎಂದು ಲಿಂಬೆಪ್ಪನ ತಾಂಡಾದ ರೆಡ್ಡೆಪ್ಪ, ತೇಜಪ್ಪ ಆರೋಪಿಸಿದ್ದಾರೆ.
ಆದೇ ವರ್ಷ ಎನ್.ಆರ್.ಡಬ್ಲೂ.ಪಿ ಯೋಜನೆಯಡಿ 20 ಲಕ್ಷ ರೂ.ಖರ್ಚು ಮಾಡಿ, ದಾದುಡಿ ತಾಂಡಾದಲ್ಲಿ ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಿ ಪ್ರತ್ಯೇಕ ವಿದ್ಯುತ್ ಪರಿವರ್ತಕ ಹಾಗೂ ಕೊಳವೆಬಾವಿಗೆ ವಿದ್ಯುತ್ ಮೋಟಾರ್ ಅಳವಡಿಸಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಪೈಪ್ ಲೈನ್ ಅಳವಡಿಕೆ ಕೆಲಸ ಅರೆಬರೆಯಾಗಿದ್ದರಿಂದ ಜನರಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ.
ತಲೇಖಾನ್ ಗ್ರಾಮದಲ್ಲಿ 1 ಲಕ್ಷ ಲೀಟರ್ ನೀರು ಸಂಗ್ರಹ ಸಾಮಾರ್ಥ್ಯದ ಟ್ಯಾಂಕ್ ನಿರ್ಮಿಸಿ ಪೈಪ್‌ಲೈನ್ ಮಾಡಲಾಗಿದೆ. ಬೋರಿನಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಯೋಜನೆ ಅಮೆವೇಗದಲ್ಲಿದೆ. ಯರದೊಡ್ಡಿ ತಾಂಡಾದಲ್ಲಿಯೂ ಸಹ ಬೃಹತ್ ಟ್ಯಾಂಕ್ ನಿರ್ಮಿಸಿದರೂ ಯೋಜನೆ ಉಪಯೋಗಕ್ಕೆ ಬಾರದಂತಾಗಿದೆ. ತಾಂಡಾಕ್ಕೆ ಖಾಸಗಿ ವ್ಯಕ್ತಿಗಳ ತೋಟದಿಂದ ನೀರು ಖರೀದಿಸಿ ನೀಡಲಾಗುತ್ತಿದೆ. ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಗ್ರಾಪಂ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗಳು ಹಳ್ಳಹಿಡಿದಿವೆ. ಹಡಗಲಿ ಗ್ರಾಮದಲ್ಲಿ ನಿರ್ಮಿಸಿದ ನೀರಿನ ಟ್ಯಾಂಕ್ ನಾಲ್ಕೇ ವರ್ಷದಲ್ಲಿ ಸೋರಲಾರಂಭಿಸಿದೆ ಎಂದು ಗ್ರಾಪಂ ಸದಸ್ಯ ವೆಂಕನಗೌಡ ದೂರಿದ್ದಾರೆ.
ನೀರಿನ ಯೋಜನೆ ಹಾಗೂ ವಿದ್ಯುತ್ ಪರಿವರ್ತಕದ ಬಗ್ಗೆ ತಾಪಂ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಬಾರಿ ಪ್ರಸ್ತಾಪಿಸಿದರೂ ಅಧಿಕಾರಿಗಳು ಗಮನಹರಿಸಿಲ್ಲ, ಮಹಿಳಾ ಸದಸ್ಯರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ಶಾರದಾ ರಾಠೊಡ, ಹಡಗಲಿ ತಾಪಂ ಸದಸ್ಯೆ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಕಿರಿಯ ಅಭಿಯಂತರರ ಮೂಲಕ ಸಮಸ್ಯೆ ಬಗೆ ಹರಿಸಲಾಗುವುದು.
ಅಬಿದಲಿ ಎಇಇ ಕುಡಿಯುನ ನೀರು ಸರಬರಾಜು ವಿಭಾಗ ಲಿಂಗಸುಗೂರ
ದೇವಪ್ಪ ರಾಠೊಡ