Advertisement

ಗಂಗಾಕಲ್ಯಾಣಕ್ಕೂ 8 ಸಾವಿರ ರೂ.!

02:26 PM Jun 29, 2018 | |

ಪುತ್ತೂರು: ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್‌ ಕೊರೆಸಿದರೆ ಸಂಪೂರ್ಣ ಉಚಿತ. ಆದರೆ ಫಲಾನುಭವಿಗಳಿಂದ 8 ಸಾವಿರ ರೂ. ಪಡೆದುಕೊಳ್ಳುತ್ತಾರೆ ಎಂಬ ಆರೋಪ ವ್ಯಕ್ತವಾಗಿದೆ. ಅಧ್ಯಕ್ಷೆ ಭವಾನಿ ಚಿದಾನಂದ್‌ ಅಧ್ಯಕ್ಷತೆಯಲ್ಲಿ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಸ್ತಾವಿಸಿದರು.

Advertisement

ಹಿಂದುಳಿದ ಅಭಿವೃದ್ಧಿ ನಿಗಮದ ಅಧಿಕಾರಿ ಶಿವರಾಮ್‌ ಇಲಾಖಾ ಮಾಹಿತಿ ನೀಡುತ್ತಾ, 2016-17 ಮತ್ತು 17-18ನೇ ಸಾಲಿನಲ್ಲಿ ಪರಿಶಿಷ್ಟ ವರ್ಗಕ್ಕೆ ಒಟ್ಟು 92 ಬೋರ್‌ವೆಲ್‌ ಕೊರೆಸಲಾಗಿದೆ ಎಂದರು. ಇಲ್ಲಿವರೆಗೆ ಎಷ್ಟು ಮಂದಿ ಫಲಾನುಭವಿಗಳಿಗೆ ಬೋರ್‌ವೆಲ್‌ ನೀಡಿದೆ ಹಾಗೂ ಎಷ್ಟು ಮಂದಿಗೆ ಬಾಕಿ ಇದೆ ಎಂಬ ಪಟ್ಟಿ ನೀಡುವಂತೆ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಕೇಳಿಕೊಂಡರು. ತಾ.ಪಂ. ಸದಸ್ಯೆ ತಾರಾ ತಿಮ್ಮಪ್ಪ ಪೂಜಾರಿ ಮಾತನಾಡಿ, ಬೋರ್‌ವೆಲ್ಸ್‌ನವರು 8 ಸಾವಿರ ರೂ. ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಧ್ವನಿಗೂಡಿಸಿದ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಸುವ ಬೋರ್‌ ವೆಲ್‌ ಉಚಿತವಾಗಿದ್ದರೂ ಹಣದ ಬೇಡಿಕೆ ಇಡುತ್ತಿದ್ದಾರೆ. ಕೊಡದಿದ್ದರೆ ನಿಮ್ಮ ಮನೆಗೆ ಹೋಗುವ ರಸ್ತೆ ಸರಿಯಿಲ್ಲ ಎಂಬ ನೆಪ ಹೇಳಿ ವಾಪಸ್‌ ಹೋಗುತ್ತಾರೆ. ಗಂಗಾ ಕಲ್ಯಾಣ ಯೋಜನೆ ದುಡ್ಡು ಮಾಡುವ ಸ್ಕಿಂ ಆಗಿದೆ ಎಂದರು.

ತಾ.ಪಂ. ಇಒ ಅವರು ಈ ಬಗ್ಗೆ ಪ್ರಶ್ನಿಸಿದಾಗ, ಯಾವುದೇ ಹಣದ ವ್ಯವಹಾರ ನಡೆದಿಲ್ಲ. ಬೋರ್‌ವೆಲ್‌ ಕೊರೆಸುವುದು
ಏಜೆನ್ಸಿಯವರು. ನಮಗೂ ಅವರಿಗೂ ಯಾವುದೇ ಸಂಪರ್ಕವಿಲ್ಲ. ಈ ಕುರಿತು ತನಿಖೆ ನಡೆಸಲಾಗುವುದು ಎಂದರು.

ಅಧ್ಯಕ್ಷರು ಬಲಿಪಶು
ತಾ.ಪಂ. ಸದಸ್ಯೆ ಉಷಾ ಅಂಚನ್‌ ಮಾತನಾಡಿ, ಪೈಪ್‌ ಕಾಂಪೋಸ್ಟ್‌ ಪೈಪ್‌ ಹಗರಣದಲ್ಲಿ ಗ್ರಾ.ಪಂ. ಅಧ್ಯಕ್ಷರು ಬಲಿಪಶು ಆಗುತ್ತಿದ್ದಾರೆ. ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ಕೇಳಿಕೊಂಡರು. ಪ್ರತಿಕ್ರಿಯಿಸಿದ ಇಒ ಜಗದೀಶ್‌, ಪ್ರಕರಣ ಎಸಿಬಿ ತನಿಖೆಯಲ್ಲಿದೆ. ಜಾಸ್ತಿ ಏನೂ ಹೇಳಲು ಸಾಧ್ಯವಿಲ್ಲ ಎಂದರು. ಇದಕ್ಕೆ ಸಮಾಧಾನ ಆಗದ ಉಷಾ ಅಂಚನ್‌, ಹೆಚ್ಚಿನ ವಿವರ ನೀಡಲು ತಿಳಿಸಿದರು. ಆಗಲೂ, ತನಿಖೆಯಲ್ಲಿರುವ ಪ್ರಕರಣದ ಬಗ್ಗೆ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದರು.

ಖಾಯಂ ವೈದ್ಯ
ಡಾ| ದೀಪಕ್‌ ರೈ ಅವರು ಪಾಲ್ತಾಡಿ ಆರೋಗ್ಯ ಕೇಂದ್ರದ ಜತೆಗೆ ಮೂರು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ ಆಗುತ್ತಿಲ್ಲ ಎಂದು ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ತಿಳಿಸಿದರು. ಉತ್ತರಿಸಿದ ತಾ| ಆರೋಗ್ಯಾಧಿಕಾರಿ ಡಾ| ಅಶೋಕ್‌, 3ಆಸ್ಪತ್ರೆಗಳ ಆರ್ಥಿಕ ವಿಷಯಕ್ಕೆ ಸಂಬಂಧಪಟ್ಟಂತೆ ಡಾ| ದೀಪಕ್‌ ರೈ ಅವರನ್ನು ನಿಯೋಜಿಸಲಾಗಿದೆ. ಅವರಿಗೆ ಸಹಿ ಹಾಕುವ ಕೆಲಸ ಮಾತ್ರ. ಪಾಲ್ತಾಡಿಗೆ ಮಾತ್ರ ಅವರು ಖಾಯಂ ವೈದ್ಯರು ಎಂದರು. ಸಮಗ್ರ ಕೃಷಿ ಅಭಿಯಾನ ಜು. 7ರಿಂದ 15ರ ವರೆಗೆ ಎಲ್ಲ ಗ್ರಾ.ಪಂ.ಗಳಲ್ಲೂ ನಡೆಯಲಿದೆ. ಈ ಬಗ್ಗೆ ಶಾಸಕರಿಂದ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಕೃಷಿ ನಿರ್ದೇಶಕ ನಹೀಂ ಹುಸೈನ್‌ ತಿಳಿಸಿದರು. ಸದಸ್ಯೆ ಉಷಾ ಅಂಚನ್‌ ಮಾತನಾಡಿ, ಉತ್ತಮ ಕಾರ್ಯಕ್ರಮ. ಆದರೆ ಇದು ಕಾಟಾಚಾರಕ್ಕೆ ಆಗಬಾರದು. ಕೃಷಿಕರನ್ನು ಗುರುತಿಸಿ, ಅವರಿಗೆ ಮಾಹಿತಿ ಸಿಗುವಂತೆ ಆಗಬೇಕು ಎಂದರು. ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ಜಿ.ಪಂ. ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತ ಹೇಮನಾಥ ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ತಹಶೀಲ್ದಾರ್‌ ಅನಂತ ಶಂಕರ್‌, ತಾ.ಪಂ.ನ ನವೀನ್‌ ಭಂಡಾರಿ ಉಪಸ್ಥಿತರಿದ್ದರು.

Advertisement

ತಹಶೀಲ್ದಾರ್‌ ಬೇಕು
ಕಡಬದಲ್ಲಿ ತಹಶೀಲ್ದಾರ್‌ ಇಲ್ಲ. ನಾಲ್ಕು ತಿಂಗಳಿನಿಂದ ಆರ್‌ಟಿಸಿ ವಿತರಣೆ ಆಗುತ್ತಿಲ್ಲ. ಹಕ್ಕುಪತ್ರ ನೀಡಿರುವ ಮನೆಗಳಿಗೆ ಆರ್‌ ಟಿಸಿಯನ್ನು ತಕ್ಷಣ ನೀಡುವ ಕೆಲಸ ಆಗಬೇಕಿದೆ. ಆದ್ದರಿಂದ ತಕ್ಷಣ ವಿಶೇಷ ತಹಶೀಲ್ದಾರ್‌ ನೇಮಕ ಆಗಬೇಕು ಎಂದು ಸದಸ್ಯೆ ಕುಸುಮಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next