ಬೆಂಗಳೂರು: ಡಿಕೆಶಿ ಆಪ್ತ ಜೋತಿಷಿ ದ್ವಾರಕಾನಾಥ್ ನಿವಾಸದ ಮೇಲೆ ಗುರುವಾರವೂ ದಾಳಿ ಮುಂದು ವರಿಸಿದ 10 ಮಂದಿ ಐಟಿ ಅಧಿಕಾರಿಗಳು, 800 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆ ಗಳನ್ನು ಪತ್ತೆ ಮಾಡಿದ್ದಾರೆ.
ಗುರು ವೆಲ್ಲೂರು ಶಂಕರನಾರಾಯಣ ದ್ವಾರಕಾನಾಥ್ ಇತ್ತೀಚೆಗೆ 800 ಕೋಟಿ ರೂ. ಮೌಲ್ಯದ ಆಸ್ಪತ್ರೆ ಖರೀದಿಸಿದ್ದರು. ಇದಕ್ಕೆ ಶಿವಕುಮಾರ್ ಬಂಡವಾಳ ಹೂಡಿಕೆ ಮಾಡಿದ್ದರು. ಈ ಸಂಬಂಧ ಇಬ್ಬರ ನಡುವೆ ಈಗಾಗಲೇ ಒಪ್ಪಂದವಾಗಿರುವ ಪತ್ರ ಸಹ ಸಿಕ್ಕಿದೆ ಎಂದು ಹೇಳಲಾಗಿದೆ.
ದ್ವಾರಕಾನಾಥ್ ಅವರ ಇಬ್ಬರು ಮಕ್ಕಳು ವೈದ್ಯರಾಗಿದ್ದು, ಅವರಿಗಾಗಿ ಆಸ್ಪತ್ರೆ ತೆರೆ ಯಲು ಮುಂದಾಗಿದ್ದರು. ಆದರೆ, ಅಷ್ಟೊಂದು ಪ್ರಮಾಣದ ಹಣ ಇಲ್ಲದ ಕಾರಣ ಶಿವಕುಮಾರ್‌ಗೆ ಈ ವಿಚಾರವನ್ನು ತಿಳಿಸಿದ್ದರು. ಹೀಗಾಗಿ ಈ ಆಸ್ಪತ್ರೆ ಖರೀದಿಗೆ ಶಿವಕುಮಾರ್ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಏನೆಲ್ಲ ವಶಕ್ಕೆ?: ದ್ವಾರಕಾನಾಥ್ ಮನೆ ಯಲ್ಲಿದ್ದ ಆಸ್ಪತ್ರೆ ಖರೀದಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಕೆಲವು ಖಾಸಗಿ ಸಂಸ್ಥೆಗಳಿಗೆ ಶಿವಕುಮಾರ್ ಸಹಭಾಗಿತ್ವದಲ್ಲಿ ಹೂಡಿಕೆ ಮಾಡಿರುವ ಕರಾರು ಪತ್ರಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮನೆಯ ಸಿಸಿಟಿವಿ ದೃಶ್ಯಾವಳಿಗಳ ಹಾರ್ಡ್‌ಡಿಸ್ಕ್ ಅನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.
ದ್ವಾರಕಾನಾಥ್ ಅವರ ನಿವಾಸದಲ್ಲಿ ಗುರುವಾರವೂ ಒಂದು ಬ್ಯಾಗ್‌ನಷ್ಟು ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.