ಬೆಂಗಳೂರು: “ಕೃಷಿ ಭಾಗ್ಯ’ ಯೋಜನೆ ಹೆಸರಿನಲ್ಲಿ ಸಚಿವ ಕೃಷ್ಣಬೈರೇಗೌಡ ಹಾಗೂ ಅಧಿಕಾರಿಗಳು 800 ಕೋಟಿ ರೂ. ಅಕ್ರಮ ನಡೆಸಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಗುರುವಾರ ಎಸಿಬಿ ಹಾಗೂ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣಬೈರೇಗೌಡ ಹಾಗೂ ಕೃಷಿ ಇಲಾಖೆ ಆಯುಕ್ತರಾದ ಪಾಂಡುರಂಗ ಬಿ ನಾಯಕ್ ಮತ್ತು ಜಿ.ಸತೀಶ್ ಅವರು ಕೃಷಿ ಹೊಂಡ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆಸಿದ್ದು, ಸಾರ್ವಜನಿಕ ತೆರಿಗೆ ಹಣ ಲೂಟಿ ಮಾಡಿದ್ದಾರೆ ಎಂದು ದೂರಿದರು.
ಮಳೆ ಆಧಾರಿತ ಕೃಷಿ ಪ್ರದೇಶಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಸರ್ಕಾರ 2014-15ರಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಿತ್ತು. ಅದರಂತೆ ಕೃಷಿ ಭೂಮಿಯಲ್ಲಿ ಕೃಷಿ ಹೊಂಡಗಳ ನಿರ್ಮಾಣ, ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್‌ಸೆಟ್‌ಗಳ ಅಳವಡಿಕೆ, ಲಘು ನೀರಾವರಿ ಕಾರ್ಯ ಮತ್ತು ನೆರಳು ಪರದೆಗೆ ಸರ್ಕಾರದಿಂದ 1600 ಕೋಟಿ rಖೀ. ಅನುದಾನ ನೀಡಿದ್ದು, ಈ ಪೈಕಿ 800 ಕೋಟಿಯಷ್ಟು ಹಣವನ್ನು ಲಪಟಾಯಿಸಲಾಗಿದೆ ಎಂದು ಆರೋಪಿಸಿದರು.
ಕರ್ತವ್ಯ ಲೋಪವೆಸಗಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಸಚಿವರು, ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ಜತೆಗೆ ಕೃಷ್ಣಬೈರೈಗೌಡ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದು, ರಾಜ್ಯಪಾಲರಿಗೂ ದೂರು ನೀಡುವುದಾಗಿ ತಿಳಿಸಿದರು.
ನಕಲಿ ದಾಖಲೆ ಸೃಷ್ಟಿ: 2014ರಲ್ಲಿ ಕೃಷಿ ಭಾಗ್ಯ ಯೋಜನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ, ನಾಲ್ಕು ವರ್ಷದೊಳಗಾಗಿ 30 ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದರು. ಆದರೆ, ರಾಜ್ಯದ 131 ತಾಲೂಕುಗಳಲ್ಲಿ ಒಟ್ಟು 2,15,130 ಹೊಂಡಗಳನ್ನು ನಿರ್ಮಿಸಲು 1608 ಕೋಟಿ ವ್ಯಯಿಸಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದು, ಕೃಷ್ಣಬೈರೈಗೌಡ ಹಾಗೂ ಇಬ್ಬರು ಅಧಿಕಾರಿಗಳು ಅಕ್ರಮವೆಸಗಿದ್ದಾರೆ ಎಂದು ಎನ್.ಆರ್.ರಮೇಶ್ ಹೇಳಿದರು.