Advertisement
ಜಿಲ್ಲೆಯ ಮಹತ್ವಕಾಂಕ್ಷಿ ಯೋಜನೆಯಾಗಿರುವ ಅಮರ್ಜಾ ಜಲಾಶಯದ ಬಲದಂಡೆ ಕಾಲುವೆ 52 ಕಿಮೀ ವ್ಯಾಪ್ತಿಯ ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಬಳಿಯೇ ಹಳೆಯ ಮೇಲ್ಸೇತುವೆ ನೆಲಸಮ ಮಾಡಿ ಈಗ ಹೊಸದಾಗಿ ನಿರ್ಮಿಸಲಾಗುತ್ತಿದೆ. ಈಗ ನಿರ್ಮಿಸಲಾದ ಕಾಲುವೆಗಿಂತ ಐದು ಅಡಿ ಎತ್ತರದಲ್ಲಿ ಮೇಲ್ಸೇತುವೆ ನಿರ್ಮಿಸಿದ್ದರಿಂದ ನೀರು ಹರಿಯಲು ಅಸಾಧ್ಯ ಎನ್ನುವುದನ್ನು ಮನಗಂಡು ಹಳೆ ಸೇತುವೆ ನೆಲಸಮಗೊಳಿ ಕರ್ನಾಟಕ ನೀರಾವರಿ ನಿಗಮದಿಂದ 54 ಲಕ್ಷ ರೂ. ಮೊತ್ತಕ್ಕೆ ಹೊಸ ಕಾಲುವೆಗೆ ಟೆಂಡರ್ ಕರೆದು ಕಾಮಗಾರಿ ಶುರು ಮಾಡಲಾಗಿದೆ.
Related Articles
Advertisement
ಅವೈಜ್ಞಾನಿಕ ಮೇಲ್ಸೇತುವೆ ನಿರ್ಮಾಣ: ಇದು ಯಾರಾದಾರೂ ಖಾಸಗಿಯವರು ಕಟ್ಟಿದ ಮೇಲ್ಸೇತುವೆ ಅಲ್ಲ. ಸರ್ಕಾರಿ ಅಧಿಕಾರಿಗಳೇ ಸ್ಥಳ ಪರಿಶೀಲಿಸಿ ನೀಡಿದ ಟೆಂಡರ್ ಕಾಮಗಾರಿಯಾಗಿದೆ. ಒಂದು ವೇಳೆ ಅಧಿಕಾರಿಗಳು ತಮ್ಮ ಮನೆ ನಿರ್ಮಾಣ ಮಾಡುವಂತಿದ್ದರೆ ಹೀಗೆ ನಿರ್ಲಕ್ಷ್ಯತನ ಹಾಗೂ ಅವೈಜ್ಞಾನಿಕತೆ ತೋರುತ್ತಿದ್ದರೆ ಎಂದು ರೈತರು ಹಾಗೂ ಸಾರ್ವಜನಿರಕು ಖಾರವಾಗಿ ಪ್ರಶ್ನಿಸಿದ್ದಾರೆ. ಹೊಸದಾಗಿ ನಿರ್ಮಾಣಕ್ಕೆ ತಗಲುವ ಮೇಲ್ಸೇತುವೆ ವೆಚ್ಚವನ್ನು ಅಂದಿನ ಅಧಿಕಾರಿಗಳಿಂದಲೇ ವಸೂಲಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಭೇಟಿ: ಅವೈಜ್ಞಾನಿಕ ಮೇಲ್ಸೇತುವೆ ಮಾಡುವ ಹಾಗೂ ಹೊಸದಾಗಿ ಕಾಲುವೆ ನಿರ್ಮಾಣ ನಿರ್ಮಾಣ ಸಂಬಂಧ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಜಗನ್ನಾಥ ಹಲಿಂಗೆ ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿಂದೆ ತಪ್ಪು ಆಗಿದೆ. ಆದರೆ ಈಗ ಸರಿಪಡಿಸಲಾಗತ್ತಿದೆ. ಮುಂದಿನ ದಿನಗಳಲ್ಲಿ ಕಾಲುವೆಯಿಂದ ಸರಳವಾಗಿ ಮುಂದೆ ಹೋಗುವಂತೆ ನಿರ್ಮಿಸಲು ಯೋಜನೆ ರೂಪಿಸಿ ಟೆಂಡರ್ ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಜಲಾಶಯದಲ್ಲೇ ನೀರಿಲ್ಲ, ಇನ್ನು ಕಾಲುವೆಗೆ ಯಾವಾಗ?: ಮುಖ್ಯವಾಗಿ ಆಳಂದ ತಾಲೂಕಿನ ಕೊರಳ್ಳಿ ಬಳಿ ಇರುವ ಅಮರ್ಜಾ ಜಲಾಶಯದಲ್ಲಿಯೇ ನೀರು ಇರೋದಿಲ್ಲ. ಹೀಗಾದರೆ ಕಾಲುವೆಗೆ ನೀರು ಹರಿಯುವುದು ಅಸಾಧ್ಯ. ಕಾಲುವೆ ನಿರ್ಮಾಣ ಹೆಸರಿನಲ್ಲಿ ಅನಗತ್ಯವಾಗಿ ಖರ್ಚು ಮಾಡಲಾಗುತ್ತಿದೆ. ಒಂದು ವೇಳೆ ಕಾಲುವೆ ಮೂಲಕ ನೀರು ಹರಿದು ಬಂದರೂ ಕಾಲುವೆ ಕೊನೆ ಭಾಗವಾದ ಭೈರಾಮಡಗಿ ಹಾಗೂ ದಿಕ್ಸಂಗಾ ಗ್ರಾಮದ ಹೊಲಗಳಿಗಂತೂ ನೀರು ಹರಿದು ಬರುವುದು ಅಷ್ಟು ಸರಳವಾಗಿಲ್ಲ. ಒಂದು ವೇಳೆ ನೀರು ಹರಿದು ಬಂದರೆ ಒಂದು ಪವಾಡವೇ ಸರಿ ಎನ್ನಲಾಗುತ್ತಿದೆ. ಒಟ್ಟಾರೆ 20 ವರ್ಷಗಳ ಹಿಂದೆಯೇ ಯಾವುದೇ ಮುಂದಾಲೋಚನೆ ಇಲ್ಲದೇ ಕಾಲುವೆ ಮೇಲ್ಸೇತುವೆ ನಿರ್ಮಿಸಿರುವುದು ಯಾವ ನ್ಯಾಯ? ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಆದರೆ ಸೇತುವೆ ನಿರ್ಮಾಣದ ಬಿಲ್ ಮಾತ್ರ ಸಂಬಂಧಪಟ್ಟವರ ಜೇಬಿಗೆ ಸೇರಿರುವುದು ಮಾತ್ರ ಸತ್ಯ.
ಕಲಬುರಗಿ ಜಿಲ್ಲೆಯಲ್ಲಿರುವ ನೀರಾವರಿ ಯೋಜನೆಗಳಿಗಾಗಿ ಇಲ್ಲಿಯವರೆಗೆ ಸುಮಾರು 3 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಯಾವುದೇ ಯೋಜನೆ ಅಡಿ 100 ಎಕರೆ ನೀರಾವರಿಯಾಗಿಲ್ಲ. ಕಾಲುವೆ ನಿರ್ಮಾಣ ಹೆಸರಿನಲ್ಲಿ ಹಣ ಎತ್ತಿ ಹಾಕಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತದೆ. ಮೊದಲು ಶಹಾಬಾದ್ ಕಲ್ಲಿನಿಂದ ಕಾಲುವೆ ನಿರ್ಮಾಣವಾಗಿರುವುದ್ದನ್ನು ಅಗೆದು ಈಗ ಸಿಮೆಂಟ್ನಿಂದ ಕಾಲುವೆ ನಿರ್ಮಿಸಲಾಗುತ್ತಿದೆ. ಇದರರ್ಥ ಕೆಲಸ ಆಗಿರಬೇಕು, ಆದರೆ ಯಾರಿಗೂ ಉಪಯೋಗಕ್ಕೆ ಬರದಂತಿರಬೇಕು ಎಂಬ ನುಡಿಯನ್ನು ನೀರಾವರಿ ಇಲಾಖೆ ಅನುಸರಿಸುತ್ತಿದೆ.
ಅವೈಜ್ಞಾನಿಕ ಮೇಲ್ಸೇತುವೆ ಕಾಲುವೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಮುಖಾಂತರ ನಿಗಮಕ್ಕೆ ಹಾನಿ ಮಾಡಲಾಗಿದೆ ಎನ್ನುವ ಕುರಿತಾಗಿ ಹಣ ವಸೂಲಾತಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ತಪ್ಪಿತಸ್ಥರಿಂದ ಹಣ ವಸೂಲಾತಿಯಾದರೆ ಮುಂದೆ ಇಂತಹ ಕಾಮಗಾರಿಗಳನ್ನು ಸಂಪೂರ್ಣ ತಡೆಹಿಡಿಯಬಹುದಾಗಿದೆ.•ಜಗನ್ನಾಥ ಹಲಿಂಗೆ, ಮುಖ್ಯ ಇಂಜಿನಿಯರ್, ನೀರಾವರಿ ಯೋಜನೆಗಳ ವಲಯ, ಕಲಬುರಗಿ