Advertisement

ಕ್ಷೀರಭಾಗ್ಯಕ್ಕೆ 71.81 ಕೋಟಿ ರೂ. ಖರ್ಚು

02:59 PM Jun 21, 2017 | Team Udayavani |

ಕಲಬುರಗಿ: ಜಿಲ್ಲೆಯ 3034 ಅಂಗನವಾಡಿ ಕೇಂದ್ರಗಳಲ್ಲಿನ ಆರು ವರ್ಷದೊಳಗಿನ ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲು ಪೂರೈಸಲಾಗಿದ್ದು, ಇದಕ್ಕಾಗಿ 71.81 ಕೋಟಿ ರೂ. ಖರ್ಚು ಮಾಡಲಾಗಿದೆ. ಅಕ್ಷರ ದಾಸೋಹ ಯೋಜನೆಯಡಿ ಕಳೆದ ನಾಲ್ಕು ವರ್ಷದಲ್ಲಿ ಜಿಲ್ಲೆಯ 13,11,310 ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಸೌಲಭ್ಯ ಕಲ್ಪಿಸಿದ್ದು, ಇದಕ್ಕಾಗಿ 194.55 ಕೋಟಿ ರೂ. ಖರ್ಚು ಮಾಡಲಾಗಿದೆ. 

Advertisement

ರಾಜ್ಯ ಸರ್ಕಾರ 2013ರ ಆಗಸ್ಟ್‌ ಒಂದರಿಂದ ಜಾರಿಗೊಳಿಸಿದ “ಕ್ಷೀರ ಭಾಗ್ಯ’ ಯೋಜನೆಯಡಿ ಕಳೆದ ನಾಲ್ಕು ವರ್ಷದಲ್ಲಿ ಜಿಲ್ಲೆಯ 2380 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗೆ ಓದುತ್ತಿರುವ ಒಟ್ಟು 12,81,340 ಮಕ್ಕಳಿಗೆ ವಾರದಲ್ಲಿ ಮೂರು ದಿನ ಪ್ರತಿ ಮಗುವಿಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ 150ಮಿ. ಲೀ. ಬಿಸಿ ಹಾಲು ತಯಾರಿಸಿ ಕಾಯಿಸಿ ಮಕ್ಕಳಿಗೆ ಪೂರೈಸಲಾಗುತ್ತಿದೆ. 

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಓದಿ ಪರೀಕ್ಷೆಗೆ ಹಾಜರಾದ ಶ್ರೀನಿವಾಸ ಸರಡಗಿ ಗ್ರಾಮದ ಭೀಮಸಿಂಗ್‌ ಗುರುನಾಥ ರಾಠೊಡ, ಚಿತ್ತಾಪುರ ತಾಲೂಕಿನ ಮುಗುಳನಾಗಾಂವಿ ಗ್ರಾಮದ 9ನೇ ತರಗತಿ ಓದುತ್ತಿರುವ ಸತೀಶ, ಸಂತೋಷ “ಕ್ಷೀರಭಾಗ್ಯ ಹಾಲು ಸೇವಿಸಿದ್ದರಿಂದ ಮಾನಸಿಕ ಮತ್ತು ದೈಹಿಕ ಶಕ್ತಿ ಉತ್ತಮಗೊಂಡಿದೆ ಎಂದು ಹೇಳುತ್ತಾರೆ.

ಈಗ ಕ್ಷೀರಭಾಗ್ಯ ಯೋಜನೆಯಡಿ ಜು. 1ರಿಂದ ವಾರದಲ್ಲಿ ಐದು ದಿನ ನೀಡುವ ಬಗ್ಗೆ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇವರ ಪೋಷಕರೂ “ಮೂರು ವರ್ಷದಿಂದ ಹಾಲು ಸೇವಿಸಿ ಮಕ್ಕಳು ಓದು ಬರಹದಲ್ಲಿ ಮುಂದೆ ಬಂದಿದ್ದಾರಲ್ಲದೆ ಆರೋಗ್ಯವೂ ಸುಧಾರಿಸಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಮಕ್ಕಳ ಅಪೌಷ್ಟಿಕತೆ, ರಕ್ತಹೀನತೆ ದೂರವಾಗಿ ಅವರ ಶಾರೀರಿಕ ಬೆಳವಣಿಗೆಗೆ ಪೂರಕವಾಗಲು ಯೋಜನೆಗಳು ಸಹಕಾರಿಯಾಗಿವೆ. ಇದರಿಂದ ವರ್ಷದಲ್ಲಿ ಮಧ್ಯೆ ಮಧ್ಯೆ ಮಕ್ಕಳು ಶಾಲೆ ತೊರೆಯವುದು ತಪ್ಪಿದ್ದು, ಮಕ್ಕಳ ಹಾಜರಾತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. 

Advertisement

ಕ್ಷೀರಧಾರೆ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ನೀಡುತ್ತಿದ್ದ 2 ರೂ. ಪ್ರೋತ್ಸಾಹಧನವನ್ನು 2013ರಿಂದ 4ರೂ.ಗಳಿಗೆ ಹೆಚ್ಚಳ ಮಾಡಿ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 205.94ಲಕ್ಷ ಲೀಟರ್‌ ಹಾಲು ಶೇಖರಿಸಿದ್ದು, ಹಾಲು ಉತ್ಪಾದಕರ ಸಂಘಗಳ 167153 ಸದಸ್ಯರಿಗೆ 6.79 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ. 

ಈ ಪೈಕಿ 2013-14ನೇ ಸಾಲಿನಲ್ಲಿ 54.81 ಲಕ್ಷ ಲೀ. ಹಾಲು ಸಂಗ್ರಹಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ 45379 ಸದಸ್ಯರಿಗೆ 2.08 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ. ಅದೇರೀತಿ 2014-15ನೇ ಸಾಲಿನಲ್ಲಿ 53.01ಲಕ್ಷ ಲೀ. ಹಾಲು ಸಂಗ್ರಹಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ 41772 ಸದಸ್ಯರಿಗೆ 2.12ಕೋಟಿ ರೂ. ಪ್ರೋತ್ಸಾಹಧನ ಮತ್ತು 2015-16ನೇ ಸಾಲಿನಲ್ಲಿ 46.94 ಲಕ್ಷ ಲೀ. ಹಾಲು ಸಂಗ್ರಹಿಸಿದ್ದು,

ಹಾಲು ಉತ್ಪಾದಕರ ಸಹಕಾರ ಸಂಘಗಳ 42073 ಸದಸ್ಯರಿಗೆ 1.87 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ. ರಾಜ್ಯ ಸರ್ಕಾರ 2016-17ನೇ ಸಾಲಿನಿಂದ ಪ್ರತಿ ಲೀಟರ್‌ ಹಾಲಿಗೆ 5ರೂ. ಪ್ರೋತ್ಸಾಹಧನ ಘೋಷಿಸಿದೆ. ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ 51.18 ಲಕ್ಷ ಲೀಟರ್‌ ಹಾಲು ಸಂಗ್ರಹಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ 37929 ಸದಸ್ಯರಿಗೆ 72.65 ಲಕ್ಷ ರೂ. ಪ್ರೋತ್ಸಾಹಧನ ವಿತರಿಸಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next