ಹೊಸದಿಲ್ಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ನಾಗರಿಕ ವಾಯುಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಅವರ ಕಾಲದಲ್ಲಿ ಸರಕಾರಿ ಒಡೆತನದ ವಾಯು ಯಾನ ಸಂಸ್ಥೆ ಏರಿಂಡಿಯಾಗೆ 70,000 ಕೋಟಿ ರೂ. ನಷ್ಟ ಉಂಟಾಗುವ ರೀತಿಯಲ್ಲಿ 111 ವಿಮಾನಗಳನ್ನು ಖರೀದಿಸಲಾದ ಅಥವಾ ಬಾಡಿಗೆಗೆ ಪಡೆಯಲಾದ ಉಪಕ್ರಮದಲ್ಲಿನ ಅಕ್ರಮಗಳ ಬಗೆಗಿನ ತನಿಖೆಯನ್ನು ಬೇಗನೆ ಮುಗಿಸುವಂತೆ ಸುಪ್ರೀಂ ಕೋರ್ಟ್ ಇಂದು ಸಿಬಿಐ ಅನ್ನು ಕೇಳಿಕೊಂಡಿದೆ.
ಈ ಹಿಂದೆ 2015ರಲ್ಲಿ ಈ ಪ್ರಕರಣದಲ್ಲಿ ತಾಜಾ ಸ್ಥಿತಿ ಕುರಿತಾದ ವರದಿಯನ್ನು ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಮತ್ತು ನ್ಯಾಯಾಧೀಶರಾದ ಆರ್ ಕೆ ಅಗ್ರವಾಲ್ ಮತ್ತು ಅರುಣ್ ಮಿಶ್ರಾ ಅವರನ್ನು ಒಳಗೊಂಡ ಪೀಠವು ಸೂಚಿಸಿತ್ತು.
ಪ್ರಧಾನಿ ಮನಮೋಹನ್ ಸಿಂಗ್ ಸಚಿವ ಸಂಪುಟದಲ್ಲಿ ನಾಗರಿಕ ವಾಯು ಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ಅವರು ಕೈಗೊಂಡಿದ್ದ ಹಲವಾರು ಕ್ರಮಗಳಿಂದ ಏರಿಂಡಿಯಾಗೆ ಭಾರೀ ನಷ್ಟವಾಗಿದ್ದು ಈ ಕುರಿತಾದ ಮಾಹಿತಿಗಳನ್ನು ಎನ್‌ಜಿಓ ವಕೀಲ ಪ್ರಶಾಂತ ಭೂಷಣ್ ಅವರು ಮಾಹಿತಿ ಹಕ್ಕು ಕಾಯಿದೆಯಡಿ ಕೋರಿದ್ದರು. ಆದರೆ ಈ ವಿಷಯದ ಬಗ್ಗೆ ಸಿಬಿಐ ಈಗಾಗಲೇ ತನಿಖೆ ನಡೆಸುತ್ತಿರುವುದರಿಂದ, ಅಂತಹ ಮಾಹಿತಿಗಳನ್ನು ನೀಡಲು ಸರಕಾರ ನಿರಾಕರಿಸಿತ್ತು.
ಪ್ರಫುಲ್ ಪಟೇಲ್ ಅವರು ಏರಿಂಡಿಯಾಗೆ 70,000 ಕೋಟಿ ರೂ. ವೆಚ್ಚದಲ್ಲಿ ಭಾರೀ ಸಂಖ್ಯೆಯ ವಿಮಾನಗಳನ್ನು ಖರೀದಿಸುವ ಇಲ್ಲವೇ ಬಾಡಿಗೆಗೆ ಪಡೆಯುವ, ಲಾಭಕಾರಿ ಮಾರ್ಗಗಳನ್ನು ಖಾಸಗಿ ವಿಮಾನ ಯಾನ ಸಂಸ್ಥೆಗಳಿಗೆ ಬಿಟ್ಟುಕೊಡುವಂತಹ ಹಲವಾರು ಪ್ರಶ್ನಾರ್ಹ ಕ್ರಮಗಳನ್ನು ತೆಗೆದುಕೊಂಡಿದ್ದರು ಇದರಿಂದ ಏರಿಂಡಿಯಾಗೆ ಭಾರೀ ನಷ್ಟ ಉಂಟಾಗಿ ಅದು ಪತನದ ಹಾದಿಯನ್ನು ಕಂಡಿತ್ತು.
ಏರಿಂಡಿಯಾದ ಮಾಜಿ ನಿರ್ದೇಶಕ ಜೀತೇಂದರ್ ಭಾರ್ಗವ ಅವರು ಈ ಎಲ್ಲ ಅಕ್ರಮಗಳನ್ನು ಉಲ್ಲೇಖೀಸಿ “ಡೌನ್‌ಫಾಲ್ ಆಫ್ ಏರಿಂಡಿಯಾ’ ಎಂಬ ಪುಸ್ತಕವನ್ನೂ ಬರೆದಿದ್ದರು.