Advertisement

ಪ್ರವಾಹ ನಿರ್ವಹಣೆಗೆ 600 ಕೋ. ರೂ.ಬಿಡುಗಡೆ: ಸಿಎಂ ಬೊಮ್ಮಾಯಿ

10:52 PM Sep 05, 2022 | Team Udayavani |

ಬೆಂಗಳೂರು: ಐದು ದಿನಗಳಲ್ಲಿ ಸುರಿದ ಮಳೆಯಿಂದ ಉಂಟಾದ ಹಾನಿಗೆ ತತ್‌ಕ್ಷಣದ ಪರಿಹಾರ ಕಲ್ಪಿಸಲು 600 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಸೋಮವಾರ ಹೆಚ್ಚು ಮಳೆ ಬೀಳುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಳೆದ ಮೂರು ತಿಂಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ಇದರ ಪರಿಣಾಮ ರಾಜ್ಯದ ಕೆರೆಗಳು ತುಂಬಿವೆ. ಬರ ಪೀಡಿತ ಪ್ರದೇಶಗಳಲ್ಲೂ ಕೆರೆಗಳು ತುಂಬಿವೆ. ಆಗಸ್ಟ್‌ನಲ್ಲಿ ಶೇ.144 ಹೆಚ್ಚು ಮಳೆಯಾಗಿದೆ. ಸೆಪ್ಟಂಬರ್‌ನಲ್ಲಿ ಕಳೆದ 5 ದಿನಗಳಲ್ಲಿ ಶೇ.51ರಷ್ಟು ಹೆಚ್ಚು ಮಳೆಯಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.

ಜಿಲ್ಲಾಧಿಕಾರಿಗಳ ಸಭೆಯಲ್ಲಿ ರಾಜ್ಯದ 17 ಜಿಲ್ಲೆಗಳ ಮಳೆ ಬಗ್ಗೆ ಮಾಹಿತಿ ಪಡೆದಿದ್ದೇನೆ. 5,092 ಜನ ಆಶ್ರಯ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. 14,900 ಹೆಕ್ಟೇರ್‌ ಪ್ರದೇಶ ಬೆಳೆ ಹಾನಿಯಾಗಿದೆ. 1,374 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. 430 ಮನೆ ಪೂರ್ತಿ ಹಾನಿಗೊಳಗಾಗಿದ್ದು, 2188 ಕಡಿಮೆ ಪ್ರಮಾಣದಲ್ಲಿ ಹಾನಿಯಾಗಿವೆ. 255 ಕಿ.ಮೀ. ರಸ್ತೆಗಳು ಹಾಳಾಗಿವೆ. ಮಳೆ ಹಾನಿಯಾಗಿದ್ದರೆ ಕೂಡಲೇ ಸಮೀಕ್ಷೆ ಮಾಡಿ ಪರಿಹಾರ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.

ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‌ನಲ್ಲಿ 664 ಕೋಟಿ ಹಣ ಇದೆ. ಕೃಷಿ ಭೂಮಿ ಹಾನಿಯಾಗಿರುವ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ ವರದಿ ನೀಡಲು ಮಾಡಲು ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ ಆಗಿರುವ ಮಳೆ ಹಾನಿಯ ಸಮೀಕ್ಷೆ ನಡೆಸಲು ಮಂಗಳವಾರ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಲಿದೆ. ನಾನು ಅವರನ್ನು ಭೇಟಿ ಮಾಡಿ, ಈಗ ನಷ್ಟದ ಬಗ್ಗೆ ಮಾಹಿತಿ ನೀಡುತ್ತೇನೆ. ತಕ್ಷಣ ಬೆಂಗಳೂರು ಮತ್ತು ರಾಜ್ಯದ ಪ್ರವಾಹ ನಿರ್ವಹಣೆಗೆ, ಮೂಲಭೂತ ಸೌಕರ್ಯಗಳಿಗೆ 600 ಕೋಟಿ ಬಿಡುಗಡೆ ಮಾಡಲು ತೀರ್ಮಾನ ಮಾಡಿದ್ದೇನೆ. ಇದು ರಾಜ್ಯ ಸರ್ಕಾರದ ಭೊಕ್ಕಸದಿಂದಲೇ ಭರಿಸಲಿದೆ ಎಂದು ಹೇಳಿದರು.

ಅಂಗಡಿಗಳಿಗೂ ಪರಿಹಾರ:
ಮಳೆಯಿಂದ ಹಾನಿಗೊಳಗಾದ ಅಂಗಡಿಗಳು, ಕಮರ್ಷಿಯಲ್‌ ಕಟ್ಟಡಗಳಿಗೂ ಪರಿಹಾರ ಕೊಡಲು ತೀರ್ಮಾನಿಸಲಾಗಿದೆ. ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎನ್ನುವುದನ್ನು ಪರಿಶೀಲಿಸಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಪರಿಹಾರ ಕೆಲಸ ಮಾಡುತ್ತಿದ್ದಾರೆ. ಈ ಮಳೆಯ ಸಂದರ್ಭದಲ್ಲಿ ಬೆಂಗಳೂರಿನ ಜನತೆಯ ಸಹಕಾರ ನಮ್ಮ ಮೇಲೆ ಇರಲಿ. ಇದನ್ನು ನಾವು ಸಮರ್ಥ ವಾಗಿ ಎದುರಿಸುತ್ತೇವೆ. ಮಳೆ ನಿಂತ ಕೂಡಲೇ ಮೂಲಭೂತ ಸೌಕರ್ಯ ಗಳನ್ನು ಸರಿಪಡಿಸುತ್ತೇವೆ. ಆದ್ದರಿಂದ ಈ ದೊಡ್ಡ ಸವಾಲನ್ನು ನಾವೆಲ್ಲರೂ ಒಟ್ಟಾಗಿ ಎದುರಿಸೋಣ ಎಂದು ಮನವಿ ಮಾಡಿದರು.

Advertisement

ಕೇಂದ್ರಕ್ಕೆ ಮನವಿ:
ರಾಜ್ಯದಲ್ಲಿ ಈ ವರ್ಷ ಮಳೆಯಿಂದ ಆಗಿರುವ ಹಾನಿಗೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಸುರಿದ ಮಳೆಯಿಂದಾಗಿ 11 ಸಾವಿರ ಕೋಟಿಗೂ ಹೆಚ್ಚು ಹಾನಿಯಾಗಿದೆ. ಈ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಈಗ ಸೆಪ್ಟೆಂಬರ್‌ 1 ರಿಂದ 5ರ ವರೆಗೆ ಆಗಿರುವ ಮಳೆ ಹಾನಿ ವರದಿಗೆ ಸೂಚನೆ ನೀಡಿದ್ದೇವೆ. ಜಿಲ್ಲಾಧಿಕಾರಿಗಳಿಂದ ವರದಿ ಬಂದ ನಂತರ ಅಂತಿಮವಾಗಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next