ಹುಣಸೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಮಾರು 60 ಕೋಟಿ ರೂ. ವೆಚ್ಚದಡಿ 4 ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಇಂಧನ ಮತ್ತು ಸಮಯ ಉಳಿತಾಯವಾಗಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ತಾಲೂಕು ಕಟ್ಟೆಮಳಲವಾಡಿಯ ಬಳಿಯ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ 15 ಕೋಟಿ ರೂ. ವೆಚ್ಚದಡಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ವೀಕ್ಷಿಸಿದ ನಂತರ ಮಾತನಾಡಿ, ಶಾಸಕ ಮಂಜುನಾಥರ ವಿಶೇಷ ಆಸಕ್ತಿ, ಒತ್ತಾಯದಿಂದಾಗಿ ಸೇತುವೆಯನ್ನು ಮಂಜೂರು ಮಾಡಲಾಗಿದೆ.
ಮುಂಬರುವ ಡಿಸೆಂಬರ್‌ನೊಳಗೆ ಕಾಮಗಾರಿ ಮುಕ್ತಾಯಗೊಂಡು ಸಂಚಾರಕ್ಕೆ ಅವಕಾಶವಾಗಲಿದೆ. ಇದರೊಟ್ಟಿಗೆ ಕೆ.ಆರ್ ನಗರದ ಡೆಗ್ಗನಹಳ್ಳಿ ಬಳಿ 20 ಕೋಟಿ, ಟಿ.ನರಸೀಪುರ ತಾಲೂಕಿನ ಕಾವೇರಿಪುರ, ಗೊದ್ದನಪುರಗಳಲ್ಲಿಯೂ ತಲಾ 26 ಕೋಟಿ ರೂ. ವೆಚ್ಚದಲ್ಲಿ ಎರಡು ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಸೇತುವೆ ನಿರ್ಮಾಣದೊಂದಿಗೆ ನದಿಯಿಂದ ಕಿರಿಜಾಜಿವರೆಗಿನ 3.5 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಇದರಿಂದ ಹುಣಸೂರು- ಕೆ.ಆರ್.ನಗರ ನಡುವೆ ಈ ಭಾಗದಿಂದ ಸಂಚರಿಸುವ ವಾಹನಗಳಿಗೆ 3 ಕಿ.ಮೀ. ಕಡಿಮೆ ಜೊತೆಗೆ ವಾಹನ ದಟ್ಟಣೆ ತಗ್ಗಿ ರಸ್ತೆ ಅಪಘಾತ ಪ್ರಮಾಣ ಕಡಿಮೆಯಾಗಲಿದೆ.
ಅಲ್ಲದೆ ಕಟ್ಟೆಮಳಲವಾಡಿ, ಕೊಪ್ಪಲು ಹಾಗೂ ಸುತ್ತಮುತ್ತಲ ರೈತರು ತಮ್ಮ ಜಮೀನುಗಳಿಗೆ ಓಡಾಡಲು ಅನುಕೂಲವಾಗಿದೆ. ಸೇತುವೆ ಮಂಜೂರು ಮಾಡಿಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಮಹದೇವಪ್ಪರನ್ನು ಅಭಿನಂದಿಸಿದರು. ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು, ಬಸವರಾಜೇಗೌಡ, ನಿಯೋಜಿತ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಯುವ ಅಧ್ಯಕ್ಷ ರಾಘು, ಲೋಕೋಪಯೋಗಿ ಎಇಇ ವಾಸುದೇವ್ ಅನೇಕ ಮುಖಂಡರು ಹಾಜರಿದ್ದರು.