ಬೆಂಗಳೂರು: ಶಿವಮೊಗ್ಗದ ಉದ್ಯಮಿ ಟಿ.ಡಿ ಪರಮೇಶ್ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ದಾಖಲೆಗಳಿಲ್ಲದೆ ಲಾಕರ್‌ನಲ್ಲಿಟ್ಟುಕೊಂಡಿದ್ದ 6 ಕೋಟಿ ರೂ. ಜಪ್ತಿ ಮಾಡಿಕೊಂಡಿದ್ದಾರೆ.ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬಕ್ಕೆ ಆಪ್ತ ಎನ್ನಲಾಗಿದೆ.
ಮಾರ್ಚ್ 28ರಂದು ಹಲವು ಕಡೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆದಿದ್ದ ಇಂಜಿನಿಯರ್ಸ್, ಗುತ್ತಿಗೆದಾರರು, ಮಧ್ಯವರ್ತಿಗಳ ನಿವಾಸಗಳು ಕಚೇರಿಗಳಲ್ಲಿ 10 ಕೋಟಿ ರೂ. ಜಪ್ತಿ ಮಾಡಿಕೊಳ್ಳಲಾಗಿದೆ. ಈ ಪೈಕಿ ಟಿ.ಡಿ ಪರಮೇಶ್ ಹೊಂದಿದ್ದ ಎರಡು ಪ್ರತ್ಯೇಕ ಲಾಕರ್‌ಗಳಲ್ಲಿ 6 ಕೋಟಿ ರೂ. ಪತ್ತೆಯಾಗಿದ್ದು ವಶಕ್ಕೆ ಪಡೆದಿದ್ದೇವೆ.
ಚುನಾವಣೆ ವೇಳೆ ಮತದಾರರಿಗೆ ಹಂಚಲು ರಾಜಕಾರಣಿಗಳಿಗೆ ಹಣ ಸರಬರಾಜು ಮಾಡಲು ಗುತ್ತಿಗೆದಾರರಿಂದ ರಹಸ್ಯವಾಗಿ ಟಿ.ಡಿ ಪರಮೇಶ್ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಗುಪ್ತಚರ ದಳದ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಐಟಿ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಮೋಟಾರ್ಸ್ ಒಂದರ ಮಾಲೀಕ ಟಿ.ಡಿ ಪರಮೇಶ್ ಅವರ ನಿವಾಸ ಹಾಗೂ ಕಚೇರಿಗಳಲ್ಲಿ ಕಾರ್ಯಾಚರಣೆ ವೇಳೆ ಕರ್ನಾಟಕ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್‌ಗಳಲ್ಲಿ ಎರಡು ಪ್ರತ್ಯೇಕ ಲಾಕರ್‌ಗಳನ್ನು ಹೊಂದಿರುವುದು ಗೊತ್ತಾಗಿತ್ತು. ಆದರೆ,ಲಾಕರ್ ತೆರೆಯಲು ನಿರಾಕರಿಸಿದ್ದ ಪರಮೇಶ್, ಲಾಕರ್ ಕೀ ಗಳು ಕಳೆದು ಹೋಗಿವೆ ಎಂದು ಸಬೂಬು ಹೇಳಿದ್ದರು.ಅಂತಿಮವಾಗಿ ಏ.4ರಂದು ಲಾಕರ್‌ಗಳನ್ನು ಒಡೆಯಲು ನಿರ್ಧರಿಸಿದಾಗ ಅವರೇ ಲಾಕರ್ ತೆರೆದು ಕೊಟ್ಟಿದ್ದಾರೆ. ಈ ಪೈಕಿ ಒಂದು ಲಾಕರ್‌ನಲ್ಲಿ 6 ಕೋಟಿ ರೂ.ನಗದು ಕಂಡು ಬಂದಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.