ಬೆಂಗಳೂರು: ಟಿ.ವಿ ಜಾಹೀರಾತಿಗಾಗಿ ಮಗುವಿನ ಫೋಟೋ ಶೂಟ್ ಮಾಡುವುದಾಗಿ ನಂಬಿಸಿದ ಎಲೈಟ್ ಮಾಡೆಲ್ಸ್ ಸಂಸ್ಥೆಯ ಪ್ರತಿನಿಧಿ, ಮಹಿಳೆಯೊಬ್ಬರಿಗೆ 5.74 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ವಂಚನೆಗೊಳಗಾದ ರಾಜಸ್ಥಾನ ಮೂಲದ ಸ್ವಾತಿ ಕುಮಾರಿ ಎಂಬುವವರು ಮಾ.17ರಂದು ನೀಡಿದ ದೂರಿನ ಅನ್ವಯ, ಎಲೈಟ್ ಮಾಡೆಲ್ಸ್ ಹಾಗೂ ಇತರರ ವಿರುದ್ಧ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ದೂರುದಾರರಾದ ಸ್ವಾತಿ ಕುಮಾರಿ, ಜ.6ರಂದು ತಮ್ಮ ಪುತ್ರ ರುದ್ರಪ್ರತಾಪ್ ಸಿಂಗ್ ಜತೆ ಮಹದೇವಪುರದಲ್ಲಿರುವ ಮಾಲ್ ಒಂದಕ್ಕೆ ಹೋಗಿದ್ದರು. ಈ ವೇಳೆ ಪರಿಚಯವಾದ ಮಹಿಳೆಯೊಬ್ಬರು, ತಾನು ಎಲೈಟ್ ಮಾಡೆಲ್ಸ್ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾಳೆ. ಟಿ.ವಿ ಜಾಹೀರಾತಿಗಾಗಿ 15 ವರ್ಷದೊಳಗಿನ ಮಕ್ಕಳನ್ನು ಹುಡುಕಾಡುತ್ತಿರುವುದಾಗಿ ನಂಬಿಸಿ, ಸ್ವಾತಿ ಅವರ ಮೊಬೈಲ್ ನಂಬರ್ ಪಡೆದುಕೊಂಡಿದ್ದಾಳೆ.
ಜ.7ರಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ ಮಹಿಳೆ, ಜಕ್ಕಸಂದ್ರದಲ್ಲಿರುವ ಸಂಸ್ಥೆಗೆ ಬರುವಂತೆ ತಿಳಿಸಿದ್ದಳು. ಸ್ವಾತಿ ಅವರು ಪುತ್ರನನ್ನು ಜಕ್ಕಸಂದ್ರದಲ್ಲಿನ ಸಂಸ್ಥೆ ಕಚೇರಿಗೆ ಕರೆದೊಯ್ದಾಗ ಪ್ರಕಾಶ್ ಎಂಬ ಛಾಯಾಗ್ರಾಹಕ ಮಗುವಿನ ಫೋಟೋ ಶೂಟ್ ಮಾಡಿದ್ದ.
ನಂತರ ರಾತ್ರಿ 9.30ರ ಸುಮಾರಿಗೆ ಸ್ವಾತಿಗೆ ಕರೆ ಮಾಡಿದ ಆರೋಪಿಯೊಬ್ಬ, “ನಿಮ್ಮ ಮಗುವಿನ ಪೋರ್ಟ್‌ಫೋಲಿಯೋ ಶೂಟ್‌ಗೆ ಆಯ್ಕೆಯಾಗಿದೆ’ ಅದರ ಚಾರ್ಜ್ ಎಂದು 23 ಸಾವಿರ ರೂ. ಪಾವತಿಸಬೇಕೆಂದು ಡಿ. ಅಪೂರ್ವ ಎಂಬುವರ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ನಂತರ ಜಾಹೀರಾತಿಗೆ ಆಯ್ಕೆಯಾಗಿದ್ದಾನೆ ಎಂದು ಹೇಳಿ ವಿವಿಧ ಹಂತಗಳಲ್ಲಿ ಆರೋಪಿಗಳು 5.74 ಲಕ್ಷ ರೂ. ಪಡೆದು ಪೋಟೋ ಶೂಟ್ ಮುಂದೂಡುತ್ತಿದ್ದರು. ಇದರಿಂದ ಅನುಮಾನಗೊಂಡ ಸ್ವಾತಿ ಪ್ರಶ್ನಿಸಿದಾಗ, ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ, ಸ್ವಾತಿ ಕುಮಾರಿ ದೂರು ನೀಡಿದ್ದಾರೆ ಎಂದು ಕೋರಮಂಗಲ ಪೊಲೀಸರು ಹೇಳಿದರು.