Advertisement

54 ಲಕ್ಷ ರೂ. ಅನುದಾನ ವಾಪಸ್‌

06:35 AM Jan 30, 2018 | |

ಬೆಂಗಳೂರು: ರಾಜ್ಯದ 6 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಮಹಿಳಾ ವಿದ್ಯಾರ್ಥಿನಿಲಯ ನಿರ್ಮಿಸಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 54.60 ಲಕ್ಷ ರೂ. ಅನುದಾನವನ್ನು ತಾಂತ್ರಿಕ ಶಿಕ್ಷಣ ಇಲಾಖೆ ವಾಪಸ್‌ ಪಡೆದಿದೆ. ಹಣವನ್ನು ನೇರವಾಗಿ ಪ್ರಾಂಶುಪಾಲರ ಖಾತೆಗೆ ವರ್ಗಾಯಿಸಿದ್ದಕ್ಕೆ ಖಜಾನೆ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

Advertisement

ಕೇಂದ್ರ ಸರ್ಕಾರ 2017-18ರ ಆಯವ್ಯಯದಲ್ಲಿ ರಾಷ್ಟ್ರೀಯ ಉತ್ಛತರ ಶಿಕ್ಷಾ ಅಭಿಯಾನ (ರುಸಾ)ಕಾರ್ಯಕ್ರಮದಡಿ ರಾಜ್ಯದ ಏಳು ಸರ್ಕಾರಿ ಪಾಲಿಟೆಕ್ನಿಕ್‌ ಗಳಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆಗೆ 63.91 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ. ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಆ ಏಳು ಪಾಲಿ ಟೆಕ್ನಿಕ್‌ನ ಪ್ರಾಂಶುಪಾಲರ ಖಾತೆಗೆ ಹಣವನ್ನು ವರ್ಗಾಯಿಸಿದೆ. ಇದಕ್ಕೆ ಖಚಾನೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಆರೂ ಸಂಸ್ಥೆಗಳ ಹಣವನ್ನು ವಾಪಸ್‌ ಪಡೆದು, ಒಂದು ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿದೆ.

ಬಿಡುಗಡೆಯಾದ ಹಣ: ಗಜೇಂದ್ರಗಡದ ಸರ್ಕಾರಿ ಪಾಲಿಟೆಕ್ನಿಕ್‌ಗೆ 9,31,234 ರೂ.ಗಳನ್ನು,ಚಿಂತಾಮಣಿಯ ಸರ್ಕಾರಿ ಪಾಲಿಟೆಕ್ನಿಕ್‌ಗೆ 7,81,877 ರೂ.ಗಳನ್ನು, ದಾವಣಗೆರೆಯ ಡಿಆರ್‌ಆರ್‌ ಸರ್ಕಾರಿ ಪಾಲಿಟೆಕ್ನಿಕ್‌ಗೆ 8,75,151 ರೂ.ಗಳನ್ನು, ಹಾನಗಲ್‌ ಸರ್ಕಾರಿ ಪಾಲಿಟೆಕ್ನಿಕ್‌ಗೆ 9,49,364 ರೂ.ಗಳನ್ನು,ಗದಗದ ಸರ್ಕಾರಿ ಪಾಲಿಟೆಕ್ನಿಕ್‌ಗೆ 9,68,697 ರೂ.ಗಳನ್ನು, ಮಿರ್ಲೆ ಸರ್ಕಾರಿ ಪಾಲಿಟೆಕ್ನಿಕ್‌ಗೆ 9,12,596 ರೂ.ಗಳನ್ನು ಹಾಗೂ ಉಡುಪಿಯ ಸರ್ಕಾರಿ ಪಾಲಿಟೆಕ್ನಿಕ್‌ ಗೆ 9,72,396 ರೂ. ಸೇರಿ ಏಳು ಸರ್ಕಾರಿ ಪಾಲಿಟೆಕ್ನಿಕ್‌ಗಳ ಮಹಿಳಾ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣಕ್ಕೆ 63,91,315 ರೂ.ಗಳನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ಅದರಂತೆ ತಾಂತ್ರಿಕ ಶಿಕ್ಷಣ ಇಲಾಖೆ ಏಳು ಪಾಲಿಟೆಕ್ನಿಕ್‌ಗಳ ಪ್ರಾಂಶುಪಾಲರ ಖಾತೆಗೆ ಹಣ ಜಮಾ ಮಾಡಿದೆ. ಇದಕ್ಕೆ ಖಜಾನೆ ಅಧಿಕಾರಿಗಳು “ಹಣ ಪಾವತಿಯ ದೃಢೀಕರಣ ಇಲ್ಲ’ ಎಂದು ಆರು ಸಂಸ್ಥೆಗಳಿಗೆ ಹಣ ವರ್ಗಾಯಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ, ಗಜೇಂದ್ರಗಡದ ಸರ್ಕಾರಿ ಪಾಲಿಟೆಕ್ನಿಕ್‌ಗೆ 9,31,234 ರೂ.ಗಳನ್ನು ನೀಡಿರುವ ಬಗ್ಗೆ ಯಾವುದೇ
ಆಕ್ಷೇಪ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಆರು ಸಂಸ್ಥೆಗಳಿಗೆ ನೀಡಿರುವ ಹಣವನ್ನು ಹಿಂಪಡೆಯ ಲಾಗಿದೆ ಎಂದು ಜ.17ರಂದು ಆದೇಶ ಹೊರಡಿಸಿದೆ. ಪ್ರಾಂಶುಪಾಲರ ಖಾತೆಗೆ ಹಣ ವರ್ಗಾವಣೆ ಮಾಡಿರುವುದಕ್ಕೆ ಖಜಾನೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಇದು ಸಂಸ್ಥೆಯ ಮಹಿಳಾ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೇಂದ್ರ ದಿಂದ ಮಂಜೂರಾದ ಹಣವನ್ನು ಉದ್ದೇಶಿಸಿರುವ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವೆಚ್ಚದ ಮಾಹಿತಿ ಕೊಡಿ: ಇಲಾಖೆಯಿಂದ ಸಿಬ್ಬಂದಿಗೆ ನೀಡಿರುವ ವೇತನ, ಸಹಾಯಧನ, ಹಬ್ಬದ ಮುಂಗಡ,ಕಚೇರಿ ವೆಚ್ಚ, ಕೇಂದ್ರ ಪುರಸ್ಕೃತ ಹಾಗೂ ಕೇಂದ್ರ ಯೋಜನೆ ಹೊರತುಪಡಿಸಿ ಬೇರೆ ಬೇರೆ ಬಿಲ್ಲುಗಳು,ವಿದ್ಯುಶ್ಚಕ್ತಿ, ದೂರವಾಣಿ, ವಾಹನ ಇತ್ಯಾದಿ ಎಲ್ಲಾ ಬಿಲ್ಲುಗಳ ಮಾಹಿತಿಯನ್ನು 2018ರ ಮಾ.31ರೊಳಗೆ ಖಜಾನೆ ಇಲಾಖೆಗೆ ನೀಡಲು ಆದೇಶ ಹೊರಡಿಸಿದೆ.

Advertisement

ಆಕ್ಷೇಪಕ್ಕೆ ಕಾರಣವೇನು?
ಅನುದಾನವನ್ನು ನೇರವಾಗಿ ಪ್ರಾಂಶುಪಾಲರ ಖಾತೆಗೆ ವರ್ಗಾವಣೆ ಮಾಡುವುದರಿಂದ ಅವ್ಯವಹಾರ ಆಗುವ ಸಾಧ್ಯತೆ ಇರುವುದರಿಂದ ಪ್ರಾಂಶುಪಾಲರ ಖಾತೆಗೆ ಹಣ ವರ್ಗಾವಣೆ ಮಾಡಿರುವುದಕ್ಕೆ ಖಜಾನೆ ಇಲಾಖೆಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಾಜ್ಯದ 81 ಸರ್ಕಾರಿ, 44 ಅನುದಾನಿತ ಹಾಗೂ 170 ಖಾಸಗಿ ಪಾಲಿಟೆಕ್ನಿಕ್‌ಗಳ ಪೈಕಿ ಬಹುತೇಕ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಮಹಿಳಾ ವಿದ್ಯಾರ್ಥಿನಿಲಯ ಇಲ್ಲ. ವಿದ್ಯಾರ್ಥಿ ನಿಯಲದ ಸ್ಥಾಪನೆಗಾಗಿ ರುಸಾದ ಅಡಿಯಲ್ಲಿ ಅನುದಾನವನ್ನು ಕೋರಲಾಗಿತ್ತು. ಅದರಂತೆ 7 ಸಂಸ್ಥೆಗಳಲ್ಲಿ ಮಹಿಳಾ ವಿದ್ಯಾರ್ಥಿನಿಲಯ ಸ್ಥಾಪನೆಗೆ ಅನುದಾನ ಮಂಜೂರು ಮಾಡಿದೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next