Advertisement

ಕೊಡಗು ಪುನರ್‌ ನಿರ್ಮಾಣಕ್ಕೆ 535 ಕೋಟಿ ರೂ.ಅಗತ್ಯ

01:54 AM Jul 31, 2019 | mahesh |

ಬೆಂಗಳೂರು: ಕಳೆದ ವರ್ಷ ಕೊಡಗಿನಲ್ಲಿ ಭಾರೀ ಮಳೆಯಿಂದ ಅನಾಹುತ ಉಂಟಾದ ಹಿನ್ನೆಲೆಯಲ್ಲಿ ರಸ್ತೆ ಸಂಪರ್ಕ ಸೇರಿದಂತೆ ಮೂಲ ಸೌಕರ್ಯ ಪುನರ್‌ ನಿರ್ಮಾಣಕ್ಕೆ 535 ಕೋಟಿ ರೂ.ಅಗತ್ಯವಿದ್ದು, ಕೂಡಲೇ ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಂಗಳವಾರ ಕೊಡಗು ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಕೊಡಗು ಜಿಲ್ಲಾಧಿಕಾರಿಗಳಿಗೆ ಈ ಸೂಚನೆ ನೀಡಿದರು.ಇದಕ್ಕೂ ಮೊದಲು ಕೊಡಗು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಮಾತನಾಡಿ, ಅತಿವೃಷ್ಟಿಯಿಂದಾಗಿ ಉಂಟಾದ ಭೂ ಕುಸಿತದಿಂದ ರಸ್ತೆ, ಕಟ್ಟಡ ಸೇರಿದಂತೆ ಸುಮಾರು 1,400 ಕೋಟಿ ರೂ.ನಷ್ಟು ಮೂಲಸೌಕರ್ಯ ನಾಶವಾಗಿವೆ. ಈವರೆಗೆ ಕೇಂದ್ರ ಸರ್ಕಾರದಿಂದ 58 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದಿಂದ 85 ಕೋಟಿ ರೂ.ವಿಶೇಷ ಅನುದಾನ ಬಿಡುಗಡೆಯಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆಯ ರಸ್ತೆಗಳು, ಗ್ರಾಮೀಣ ರಸ್ತೆಗಳು, ನಗರ ಪ್ರದೇಶದಲ್ಲಿ ಚರಂಡಿ ಹಾಗೂ ಇತರ ವ್ಯವಸ್ಥೆಗಳ ಶಾಶ್ವತ ದುರಸ್ತಿಗೆ 535 ಕೋಟಿ ರೂ.ಅಗತ್ಯವಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ಕೂಡಲೇ ಮೂಲ ಸೌಕರ್ಯ ಪುನರ್‌ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್‌, ಸುನಿಲ್ ಸುಬ್ರಮಣಿ, ಮುಖ್ಯ ಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀನಾರಾಯಣ್‌, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್‌.ಎಸ್‌. ಪ್ರಸಾದ್‌ ಇತರರು ಉಪಸ್ಥಿತರಿದ್ದರು.

ಆ. 7, 8ರಂದು ಕೊಡಗಿಗೆ ಸಿಎಂ
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಸೃಷ್ಟಿಸಿದ ಅನಾಹತದ ಬಳಿಕ ಪುನರ್ವಸತಿ ಕಲ್ಪಿಸಲು 500 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಕಳೆದ ಬಾರಿ ಸಾರ್ವ ಜನಿಕರು, ಸರ್ಕಾರಿ ನೌಕರರ ಒಂದು ದಿನದ ವೇತನ ದೇಣಿಗೆ ಸುಮಾರು 100 ಕೋಟಿ ರೂ. ಬಳಕೆಯಾಗದೆ ಹಾಗೇ ಉಳಿದಿದೆ. ಆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸೂಚಿಸಿ ದ್ದಾರೆ. ಆ.7, 8ರಂದು ಕೊಡಗು ಜಿಲ್ಲೆಗೆ ಮುಖ್ಯಮಂತ್ರಿಗಳು ಭೇಟಿ ನೀಡಲಿದ್ದು, ಪುನರ್ವಸತಿ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next