Advertisement

50 ಸಾವಿರ ಕೋಟಿ ಕಾಮಗಾರಿಗೆ ನಿರ್ಧಾರ

11:42 AM Feb 21, 2018 | |

ಬೀದರ: ರಾಜ್ಯದಲ್ಲಿ ಬರುವ ಎರಡೂಮೂರು ತಿಂಗಳೊಳಗೆ ಸುಮಾರು 50 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ವಿವಿಧ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಭೂ ಸಾರಿಗೆ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಸಚಿವ ನಿತಿನ್‌ ಗಡ್ಕರಿ ಹೇಳಿದರು.

Advertisement

ಭಾಲ್ಕಿಯ ಚನ್ನಬಸವಾಶ್ರಮ ಆವರಣದಲ್ಲಿ ಮಂಗಳವಾರ 3000 ಕೋಟಿ ರೂ. ವೆಚ್ಚದ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ
ಅಧಿ ಕಾರಕ್ಕೆ ಬರುವ ಮುನ್ನ ಕರ್ನಾಟಕದಲ್ಲಿ 6,760 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇತ್ತು. ನಮ್ಮ ಸರ್ಕಾರ ಅಧಿ ಕಾರಕ್ಕೆ ಬಂದ ಮೂರೂವರೆ ವರ್ಷದಲ್ಲಿ ರಾಜ್ಯದಲ್ಲಿ 6,805 ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಇದೀಗ 40 ಸಾವಿರ ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇನ್ನೂ 50 ಸಾವಿರ ಕೋಟಿ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಿದರು.

ದೇಶದಲ್ಲಿ ಹೆದ್ದಾರಿಗಳ ನಿರ್ಮಾಣವು ಹಿಂದೆಂದಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ನಡೆದಿದ್ದು, ಅವುಗಳ ಗುಣಮಟ್ಟ
ಚೆನ್ನಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ.  ಪ್ರಸ್ತುತ ನಿರ್ಮಾಣವಾಗುವ ರಾಷ್ಟ್ರೀಯ ಹೆದ್ದಾರಿಗಳು ಧೀರ್ಘಾವಧಿವರೆಗೆ ಸುಸ್ಥಿತಿಯಲ್ಲಿರುತ್ತವೆ. ಗುಣಮಟ್ಟದ ಕೆಲಸ ಹಾಗೂ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇವೆ. ಸುಮಾರು 200 ವರ್ಷ ಬಾಳಿಕೆ ಬರುವಷ್ಟು ಅತ್ಯುತ್ತಮ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ದೇಶದ ಜನತೆಗೆ ಸಂಪರ್ಕ ವ್ಯವಸ್ಥೆ ಸುಲಭ, ಸರಳಗೊಳಿಸುವುದೇ ನಮ್ಮ ಸರ್ಕಾರದ ಧ್ಯೇಯ ಎಂದು ಹೇಳಿದರು.

ಕೇಂದ್ರ ಸಚಿವ ಅನಂತಕುಮಾರ, ಸಂಸದ ಪ್ರಹ್ಲಾದ ಜೋಶಿ, ಸಂಸದ ಭಗವಂತ ಖೂಬಾ, ಮಾಜಿ ಶಾಸಕ ಪ್ರಕಾಶ
ಖಂಡ್ರೆ ಮಾತನಾಡಿದರು. ಶಾಸಕ ಪ್ರಭು ಚವ್ಹಾಣ, ವಿಧಾನಪರಿಷತ್‌ ಸದಸ್ಯ ಎಂಎಲ್ಸಿ ರಘುನಾಥರಾವ್‌ ಮಲ್ಕಾಪೂರೆ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಮಾರುತಿರಾವ್‌ ಮುಳೆ, ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಮುಖಂಡರಾದ ಡಿ.ಕೆ. ಸಿದ್ರಾಮ, ಬಾಬು ವಾಲಿ, ಎನ್‌.ಆರ್‌. ವರ್ಮಾ, ಶಕುಂತಲಾ ಬೆಲ್ದಾಳೆ, ಸೋಮನಾಥ ಪಾಟೀಲ, ಸುನೀಲ ಪಾಟೀಲ, ಸಂಜಯ್‌ ಪಟವಾರಿ, ಬಾಬುರಾವ್‌
ಕಾರಬಾರಿ, ಈಶ್ವರಸಿಂಗ್‌ ಠಾಕೂರ್‌, ಸುಧಿಧೀರ ಕಾಡಾದಿ, ಪದ್ಮಾಕರ ಪಾಟೀಲ, ಜಯಕುಮಾರ ಕಾಂಗೆ, ಶಿವಾನಂದ ಮಂಠಾಳಕರ ಮತ್ತಿತರರು ಪಾಲ್ಗೊಂಡಿದ್ದರು.

ಜಿಲ್ಲೆ ಅಭಿವೃದ್ಧಿಗೆ ಪೂರಕ ಘೋಷಣೆ 
ಬೀದರ: ಭಾಲ್ಕಿಯಲ್ಲಿ ನಡೆದ ಸಂಪರ್ಕ ಕ್ರಾಂತಿಯ ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿಯವರು, ಬೀದರ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 7000 ಕೋಟಿ ರೂಪಾಯಿಗಳನ್ನು ನೀಡಿ, ಕ್ಷೇತ್ರದ ರಸ್ತೆಗಳನ್ನು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂತೆ ಮಾಡುವುದಾಗಿ ಘೋಷಿಸಿರುವುದಕ್ಕೆ ಧನ್ಯವಾದ ಸಲ್ಲಿಸುವುದಾಗಿ ಸಂಸದ ಭಗವಂತ ಖೂಬಾ ಹೇಳಿದ್ದಾರೆ. ರಸಗೊಬ್ಬರ ಸಚಿವ ಅನಂತಕುಮಾರ ಅವರು ಜಿಲ್ಲೆಯ ಯುವಕರ ಕೌಶಲ್ಯ ವರ್ಧಿಸಿ ಉದ್ಯೋಗ ನೀಡುವಂತಹ ಸಿಪೇಟ್‌ ತರಬೇತಿ ಕೇಂದ್ರವನ್ನ ಸ್ಥಾಪಿಸುವುದಕ್ಕಾಗಿ 100 ಕೋಟಿ ನೀಡುವುದಾಗಿ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ. 

Advertisement

ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ -ತಂತ್ರಜ್ಞಾನ ತರಬೇತಿ ಸಂಸ್ಥೆ ಆರಂಭಿಸುವ ಘೋಷಣೆ 
 ಭಾಲ್ಕಿ/ಬೀದರ: ಬೀದರ ಜಿಲ್ಲೆಯಲ್ಲಿ ಐಐಟಿ ಮಾದರಿಯಲ್ಲಿ ಕೇಂದ್ರೀಯ ಪ್ಲಾಸ್ಟಿಕ್‌ ಇಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ತರಬೇತಿ  ಸಂಸ್ಥೆಯನ್ನು ಆರಂಭಿಸಲಾಗುವುದು.

ಇದಕ್ಕಾಗಿ 100 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ
ಘೋಷಣೆ ಮಾಡಿದರು. ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಡಿಪ್ಲೊಮಾ, ಪದವಿ ಮಾಡಿದವರಿಗೆ ದೇಶ-ವಿದೇಶಗಳಲ್ಲಿ ಬೇಡಿಕೆ ಇದೆ. ಇಂತಹ ಅಪರೂಪದ ಸಂಸ್ಥೆಯನ್ನು ಸಂಸದ ಭಗವಂತ ಖೂಬಾ ಒತ್ತಾಯದ ಮೇರೆಗೆ ಇಲ್ಲಿ ಸ್ಥಾಪಿಸುವ ಘೋಷಣೆ ಮಾಡುತ್ತಿರುವೆ.

ತರಬೇತಿ ಸಂಸ್ಥೆಗೆ 100 ಎಕರೆ ಭೂಮಿ ಅಗತ್ಯವಿದ್ದು, ಸದ್ಯ ಸಂಸ್ಥೆ ಆರಂಭಕ್ಕೆ 10 ಎಕರೆ ಭೂಮಿ, ಕಟ್ಟಡ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಶೀಘ್ರ ಆರಂಭಕ್ಕೆ ಕ್ರಮ ಕೈಗೊಳ್ಳುವೆ ಎಂದರು. ಬೀದರ ಜಿಲ್ಲೆಗೆ ಹೊಂದಿಕೊಂಡಿರುವ ಸುಮಾರು 12 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಒಟ್ಟಿಗೆ ನಡೆಯುತ್ತಿರುವುದು ಈ ಭಾಗದ ಜನರ ಭಾಗ್ಯವಾಗಿದೆ. ಹಿಂದಿನ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಕಾರ್ಯವನ್ನು ಪ್ರತಿದಿನ ಒಂದು ಕಿ.ಮೀ. ನಷ್ಟು ಮಾತ್ರ
ನಿರ್ಮಾಣ ಮಾಡುತ್ತಿತ್ತು. ಹೀಗಾಗಿ ನಿರ್ಮಾಣ ಕಾರ್ಯದಲ್ಲಿ ತುಂಬಾ ನಿಧಾನಗತಿ ಅನುಸರಿಸಲಾಗುತ್ತಿತ್ತು. ಆದರೆ ಇಂದಿನ ಕೇಂದ್ರ ಸರ್ಕಾರ, ನಿತಿನ ಗಡ್ಕರಿಯವರ ನೇತೃತ್ವದಲ್ಲಿ ದಿನಕ್ಕೆ 27 ಕಿ.ಮೀ. ರಸ್ತೆ ನಿರ್ಮಿಸುವ ಮೂಲಕ ವೇಗದ ಸರ್ಕಾರ ಎಂದು ಹೆಸರು ಗಳಿಸಿದೆ ಎಂದರು. ಮೋದಿ, ಗಡ್ಕರಿಯವರದ್ದು ಟಾಪ್‌ ಗೇರ್‌, ಮೌನಿ ಬಾಬಾ ಅವರದ್ದು ನ್ಯೂಟ್ರಲ್‌ ಗೇರ್‌ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next