Advertisement

BJP ಅನಂತ್‌ಕುಮಾರ್‌ ಹೆಗಡೆಗೆ ಟಿಕೆಟ್‌ ಸಿಕ್ಕೀತೋ? ಇಲ್ಲವೋ?

11:49 PM Mar 15, 2024 | Team Udayavani |

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಉತ್ತರ ಕನ್ನಡದತ್ತ ಈಗ ಎಲ್ಲರ ದೃಷ್ಟಿ ನೆಟ್ಟಿದ್ದು, ಹಾಲಿ ಸಂಸದ ಅನಂತಕುಮಾರ್‌ ಹೆಗಡೆಯವರಿಗೆ ಈ ಬಾರಿ ಟಿಕೆಟ್‌ ಸಿಗುತ್ತದೋ, ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ.

Advertisement

ಒಟ್ಟು ಏಳು ಬಾರಿ ಲೋಕಸಭೆಗೆ ಸ್ಪರ್ಧಿಸಿದ ಹೆಗಡೆಯನ್ನು ಒಮ್ಮೆ ಮಾತ್ರ ಕಾಂಗ್ರೆಸ್‌ನ ಮಾರ್ಗರೆಟ್‌ ಆಳ್ವ ಸೋಲಿಸಿದ್ದರು. ಉಳಿದಂತೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಸಾಧ್ಯವಾಗಿಲ್ಲ. ಆದಾಗಿಯೂ ಕಳೆದ ಮೂರು ಚುನಾವಣೆಗಳಲ್ಲೂ ಅನಂತಕುಮಾರ್‌ಗೆ ಟಿಕೆಟ್‌ ಇಲ್ಲ ಎಂಬ ವದಂತಿಯ ಮಧ್ಯೆಯೇ ಅವರಿಗೇ ಟಿಕೆಟ್‌ ನೀಡಲಾಗಿತ್ತು. ಈಗಲೂ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿಲ್ಲ.

ಆದರೆ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾವ ಪ್ರಮುಖರೂ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಅನಂತ್‌ ಪರ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ. ಪ್ರಧಾನಿ ಮೋದಿ ಉತ್ತರ ಕನ್ನಡಕ್ಕೆ ಬಂದಾಗ ಹೆಗಡೆ ವೇದಿಕೆಗೆ ಬಾರದೇ ಶಿಷ್ಟಾಚಾರ ಉಲ್ಲಂ ಸಿದರು ಸಹಿತ ಹಲವು ದೂರುಗಳನ್ನು ಅವರ ವಿರುದ್ಧ ನೀಡಲಾಗಿತ್ತು ಎನ್ನಲಾಗಿದೆ.

ಮೊದಲ ಪಟ್ಟಿಯಲ್ಲಿ ಉತ್ತರ ಕನ್ನಡಕ್ಕೆ ಬದಲಿ ಅಭ್ಯರ್ಥಿಯನ್ನು ನೀಡದೇ ಇರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಎರಡು ತಿಂಗಳಿಂದ ಮತ್ತೆ ಅಖಾಡಕ್ಕೆ ಇಳಿದಿರುವ ಹೆಗಡೆ, ಈ ಕುರಿತು ತಮ್ಮ ಆಕ್ಷೇಪವನ್ನು ವರಿಷ್ಠರಿಗೆ ರವಾನಿಸಿದ್ದಾರೆ.

ಕರೆಯೇ ಬಂದಿಲ್ಲ
ಈ ಮಧ್ಯೆ ದಿಲ್ಲಿಗೆ ಬಂದು ವರಿಷ್ಠರನ್ನು ಭೇಟಿಯಾಗುವಂತೆ ಅನಂತ್‌ಕುಮಾರ್‌ ಹೆಗಡೆಗೆ ಸೂಚನೆ ನೀಡಲಾಗಿತ್ತು ಎಂಬ ವದಂತಿ ಕಳೆದ ಎರಡು ದಿನಗಳಿಂದ ಗಾಢವಾಗಿ ಹಬ್ಬಿತ್ತು. ಆದರೆ ಅವರು ಶಿರಸಿಯಲ್ಲೇ ಉಳಿದುಕೊಂಡಿದ್ದು, ಸಂಘಟನಾತ್ಮಕ ಚಟುವಟಿಕೆ ನಡೆಸಿದ್ದಾರೆ. ದಿಲ್ಲಿಗೆ ಬರುವಂತೆ ಯಾವ ಸೂಚನೆಯೂ ಬಂದಿರಲಿಲ್ಲ ಎಂದು ಅವರ ಆಪ್ತವರ್ಗ ತಿಳಿಸಿದೆ. ಈ ನಡುವೆ ರಾಜ್ಯ ಚುನಾವಣ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರ್ವಾಲ್‌ ಅವರು ಹೆಗಡೆಯವರನ್ನು ಸಂಪರ್ಕಿಸಿ ಅರ್ಧ ಗಂಟೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮಾತುಕತೆ ವಿವರ ಲಭ್ಯವಿಲ್ಲ.

Advertisement

ಬದಲಿ ಯಾರು ?
ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆ ಹೈಕಮಾಂಡ್‌ ಐದು ಸಮೀಕ್ಷೆ ನಡೆಸಿದ್ದು, ಎಲ್ಲದರಲ್ಲೂ ಗೆಲ್ಲುವ ಕುದುರೆ ಹೆಗಡೆ ಎಂಬ ವರದಿ ಲಭಿಸಿದೆ. ಅಭ್ಯರ್ಥಿಯನ್ನು ಬದಲಿಸಿದರೆ ಕ್ಷೇತ್ರ ಕೈ ತಪ್ಪುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ನೀವು ಸೂಚಿಸಿದ ಅಭ್ಯರ್ಥಿ ನಿಲ್ಲಿಸೋಣ ಎಂಬ ಪ್ರಸ್ತಾವವನ್ನು ಹೆಗಡೆ ಮುಂದಿಡಲಾಗಿದೆ ಎಂದೂ ಹೇಳಲಾಗುತ್ತಿದೆ. ಒಂದೊಮ್ಮೆ ಅನಂತ್‌ಗೆ ಟಿಕೆಟ್‌ ಸಿಗದಿದ್ದರೆ ಶಶಿಭೂಷಣ್‌ ಹೆಗಡೆ ಪರ ಅನಂತಕುಮಾರ್‌ ಹೆಗಡೆ ನಿಲ್ಲಬಹುದು ಎನ್ನಲಾಗುತ್ತಿದೆ.ಇವೆಲ್ಲದರ ಮಧ್ಯೆ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆಯವರ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಆದರೆ ರಾಜ್ಯಮಟ್ಟದ ಪ್ರಮುಖರೊಬ್ಬರು ಈ ಹೆಸರಿಗೆ ಅಡ್ಡಗಾಲು ಹಾಕಿದ್ದಾರೆಂಬ ಮಾತು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

– ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next