ಲಕ್ನೋ:ತರಕಾರಿ, ದಿನಬಳಕೆ ವಸ್ತುಗಳ ದರಪಟ್ಟಿ, ಚಿನ್ನ, ಬೆಳ್ಳಿ ಇಂದಿನ ಬೆಲೆ ಎಷ್ಟು ಎಂಬುದನ್ನು ಬಹಿರಂಗವಾಗಿ ತೂಗುಹಾಕುವುದು ಸಾಮಾನ್ಯ. ಆದರೆ ಉತ್ತರಪ್ರದೇಶದ ಮುಜಾಫರ್ ನಗರದ ಗ್ಯಾಂಗ್ ಒಂದು ತಲೆ ತೆಗೆದರೆ ಎಷ್ಟು, ಹೊಡೆದರೆ ಹಾಗೂ ಕೊಲೆ ಮಾಡಲು ಎಷ್ಟು ಬೆಲೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ವರದಿ ಹೇಳಿದೆ.
ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ಯುವಕನೊಬ್ಬ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡಿರುವ ಫೋಟೋ ಮುದ್ರಿಸಿದ್ದು, ಗೂಂಡಾ ಕೆಲಸಕ್ಕೆ ಯಾವ ರೀತಿ ಬೆಲೆ ಕೊಡಬೇಕು ಎಂಬ ದರವನ್ನು ಕೂಡಾ ಪಟ್ಟಿ ಕೊಡಲಾಗಿದೆ!
ಹಣ ಪಡೆದು ಹೊಡೆದಾಟ ನಡೆಸುವುದು, ಜನರ ಮೇಲೆ ಹಲ್ಲೆ, ಅಪಹರಣ ಹಾಗೂ ಜಾಗದ ವಿಚಾರದಲ್ಲಿ ಬೆದರಿಕೆಯೊಡ್ಡುವುದು ಹಾಗೂ ಕೊಲೆ ಮಾಡುವ ಕೆಲಸ ಮಾಡಲಾಗುವುದು ಎಂದು ಭಿತ್ತಿಪತ್ರದಲ್ಲಿ ತಿಳಿಸಿದೆ. ಕೇವಲ ಬೆದರಿಕೆ ಹಾಕುವುದಕ್ಕೆ 1000 ರೂಪಾಯಿ, ಯಾರಿಗಾದರು ಹೊಡೆಯಬೇಕಾಗಿದ್ದರೆ 5000 ರೂಪಾಯಿ, ಗಾಯಗೊಳಿಸಲು ಹತ್ತು ಸಾವಿರ ರೂಪಾಯಿ ಹಾಗೂ ಕೊಲೆ ಮಾಡಲು 55 ಸಾವಿರ ರೂಪಾಯಿ ಎಂದು ದರ ಪಟ್ಟಿಯಲ್ಲಿ ನಮೂದಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಗಂಗೂಲಿ ಸಲಹೆಯನ್ನು ಕಡೆಗಣಿಸಿದ ರೋಹಿತ್! ಯಾವುದೇ ನೋವಿಲ್ಲ, ನಾನು ಫಿಟ್ ಎಂದ ಶರ್ಮ
ಗೂಂಡಾಗಿರಿ ದರ ಪಟ್ಟಿಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿ ವೈರಲ್ ಆದ ನಂತರ, ಈ ಪೋಸ್ಟ್ ಅನ್ನು ಅಪ್ ಲೋಡ್ ಮಾಡಿದ ಯುವಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೂಂಡಾಗಿರಿ ದರಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಯುವಕನನ್ನು ಚೌಕಾಡಾ ಗ್ರಾಮದ ಚಾರಾತ್ವಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಎಂದು ಗುರುತಿಸಲಾಗಿದೆ ಎಂಬುದಾಗಿ ವರದಿ ಹೇಳಿದೆ.