ಮಂಗಳೂರು: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚನೆ ಎಸಗಿ, ಅವಾಚ್ಯವಾಗಿ ನಿಂದಿಸಿದ ಪಾಂಡಿಚೇರಿ ಮೂಲದ ಯುವಕನಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 5,000 ರೂ. ದಂಡ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ.
ಪಾಂಡಿಚೇರಿ ಮೂಲದ ಮಣಿಕಂಠ ಯಾನೆ ಕಾರ್ತಿಕ್ (39) ತಪ್ಪಿತಸ್ಥ. ಈತ ದೇರಳಕಟ್ಟೆಯ ದಂತ ವೈದ್ಯಕೀಯ ಕಾಲೇಜಿನ ಸಂಶೋಧನ ವಿದ್ಯಾರ್ಥಿಯಾಗಿದ್ದಾಗ ಅದೇ ಸಂಸ್ಥೆಯಲ್ಲಿ ಸಂಶೋಧನೆ ನಡೆಸುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. 2009 ಡಿ.8ರಂದು ಯುವತಿಯನ್ನು ಬೇಕಲಕೋಟೆಯ ರೆಸಾರ್ಟ್‌ಗೆ ಕರೆದೊಯ್ದು ಅಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಆಪಾದಿಸಲಾಗಿದೆ. ಆ ಬಳಿಕವೂ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ಸಂಶೋಧನೆ ಅವಧಿ ಮುಗಿದ ಬಳಿಕ 2013ರಲ್ಲಿ ಮಣಿಕಂಠ ಪಾಂಡಿಚೇರಿಗೆ ಮರಳಿದ್ದ. ಬಳಿಕ ಯುವತಿಯ ಸಂಪರ್ಕ ಕಡಿದು ಕೊಂಡಿದ್ದ. ಯುವತಿ ಕರೆ ಮಾಡಿ ಮದುವೆ ಆಗುವಂತೆ ಕೇಳಿಕೊಂಡಾಗ ತಿರಸ್ಕರಿಸಿದ್ದ ಮತ್ತು “ನೀನು ಕಾಲ್ ಗರ್ಲ್’ ಎಂದು ನಿಂದಿಸಿದ್ದ ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಯುವತಿ 2015 ಮೇ 19ರಂದು ಉಳ್ಳಾಲ ಪೊಲೀಸ್ ಠಾಣೆಗೆ ಅತ್ಯಾಚಾರ ಹಾಗೂ ಅವಾಚ್ಯವಾಗಿ ನಿಂದಿಸಿದ ಬಗ್ಗೆ ದೂರು ಸಲ್ಲಿಸಿದ್ದರು. ಮಹಿಳಾ ಆಯೋಗಕ್ಕೂ ದೂರು ಕೊಟ್ಟಿದ್ದರು. ಉಳ್ಳಾಲ ಠಾಣೆಯಲ್ಲಿ ಮಣಿಕಂಠನ ವಿರುದ್ಧ ಅತ್ಯಾಚಾರ (ಐಪಿಸಿ 376) ಹಾಗೂ ಅವಾಚ್ಯವಾಗಿ ನಿಂದಿಸಿದ (ಐಪಿಸಿ 504) ಬಗ್ಗೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಅಂದಿನ ಇನ್ಸ್‌ಪೆಕ್ಟರ್ ಸವಿತ್ರತೇಜ ಅವರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಟಿ.ಪುಟ್ಟರಂಗ ಸ್ವಾಮಿ ಅವರು ಆರೋಪಿ ಮೇಲಿನ ಅತ್ಯಾಚಾರ ಪ್ರಕರಣ ಸಾಬೀತಾಗದ ಕಾರಣ ಅದನ್ನು ಕೈ ಬಿಟ್ಟು, ನಿಂದನೆ ಮಾಡಿರುವುದಕ್ಕಾಗಿ ಮಾತ್ರ ಆರೋಪಿಗೆ 5,000 ರೂ. ದಂಡ ವಿಧಿಸಿದ್ದಾರೆ. ದಂಡ ನೀಡದಿದ್ದಲ್ಲಿ ಒಂದು ತಿಂಗಳ ಸಾದಾ ಸಜೆ ಅನುಭವಿ ಸುವಂತೆ ಆದೇಶಿಸಿದ್ದಾರೆ.
ದಂಡದ ಮೊತ್ತದಲ್ಲಿ 3,000 ರೂ.ಗಳನ್ನು ಸಂತ್ರಸ್ತ ಯುವತಿಗೆ ನೀಡುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಹೆಚ್ಚುವರಿ ಪರಿಹಾರಕ್ಕಾಗಿ ಯುವತಿ ಉಪ ವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬಹುದು ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು. ಪ್ರಕರಣದಲ್ಲಿ ಒಟ್ಟು 13 ಸಾಕ್ಷಿಗಳನ್ನು ಹಾಗೂ 12 ದಾಖಲೆಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.