ಕೋಲಾರ: ಮಳೆಯಿಂದ ಸಂಪರ್ಕ ಕಡಿತಗೊಂಡಿರುವ ರಸ್ತೆಗಳು, ಸೇತುವೆಗಳ ದುರಸ್ತಿಗೆ 500 ಕೋಟಿ ರೂ. ಅನ್ನು ಲೋಕೋ ಪಯೋಗಿ ಇಲಾಖೆಗೆ ರವಿವಾರ ಬಿಡುಗಡೆ ಮಾಡಲಾಗಿದೆ. ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ನರಸಾಪುರ ಸುತ್ತಮುತ್ತ, ಮುದುವಾಡಿ ಸಮೀಪ ಬೆಳೆಹಾನಿ, ಕೆರೆ ವೀಕ್ಷಿಸಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪರ್ಕ ಕಡಿತಗೊಳ್ಳುವ ರಸ್ತೆಗಳಿಗೆ ಮೊದಲು ಹೆಚ್ಚಿನ ಆದ್ಯತೆ ನೀಡಲಾಗುವುದು. ಕೋಲಾರದಿಂದ ಕಡಪ ಮುಖ್ಯರಸ್ತೆಗೆ ತೆರಳುವ 30 ಕಿ.ಮೀ. ರಸ್ತೆಯನ್ನು ಅಗಲೀಕರಣ ಮಾಡಲು ವಿಶೇಷ ಅನುದಾನ ನೀಡಲಾಗುವುದು ಎಂದು ಬೊಮ್ಮಾಯಿ ಘೋಷಿಸಿದರು.
ಮಳೆಯಿಂದ ಆದ ಹಾನಿಗೆ ಪರಿ ಹಾರ ನೀಡಲು ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿ ನಿಧಿಯಲ್ಲಿ 685 ಕೋಟಿ ರೂ. ಇದೆ. ಬೆಳೆ ನಾಶದ ಸಮೀಕ್ಷೆ ಮಾಡುವುದು, ಅಪ್‌ಲೋಡ್ ಮಾಡುವುದು ತಡವಾಗುತ್ತದೆ. ಈ ಬಾರಿ ಹಾಗೆ ಆಗಬಾರದು. ಕೂಡಲೇ ಸರ್ವೇ ಪ್ರಾರಂಭಿಸಿ, ಆಯಾ ದಿನದ ಸರ್ವೇ ಮಾಹಿತಿ ಅಂದೇ ಪರಿಹಾರ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದರೆ 24 ಗಂಟೆಯಲ್ಲೇ ಪರಿಹಾರ ತಲುಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿ ದ್ದೇನೆ ಎಂದು ಸಿಎಂ ವಿವರಿಸಿದರು.
ಇದನ್ನೂ ಓದಿ:ಮರೆಗುಳಿ ಕಾಯಿಲೆ ಮೂಲ ಪತ್ತೆ; ಐಐಟಿ ಮಂಡಿ ಸಂಶೋಧಕರಿಂದ ಮಹತ್ವದ ಸಂಶೋಧನೆ
ಜಿಲ್ಲೆಯಲ್ಲಿ ಮಳೆಯಿಂದ ಮನೆ ಕಳೆದುಕೊಂಡಿರುವವರಿಗೆ ವಿವಿಧ ಹಂತಗಳಲ್ಲಿ 5 ಲಕ್ಷ ರೂ. ಪರಿಹಾರ, ರಸ್ತೆ ಮತ್ತಿತರ ಮೂಲ ಸೌಲಭ್ಯಗಳಿಗಾಗಿ ಈಗಾಗಲೇ 500 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟು 709 ಮನೆಗಳು ನೆಲಕ್ಕುರುಳಿವೆ. ಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ., ಭಾಗಶಃ ಮನೆ ಹಾನಿ ಆಗಿದ್ದರೆ 3 ಲಕ್ಷ ರೂ. ಪರಿಹಾರ ನೀಡಲು ಸೂಚಿಸಿದ್ದು, ಮಂಗಳವಾರ ಸಂಜೆಯೊಳಗೆ ಮೊದಲ ಕಂತಾಗಿ ತಲಾ 1 ಲಕ್ಷ ರೂ. ಪರಿಹಾರ ವಿತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದು ಹೇಳಿದರು.