Advertisement

ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ಗೆ 50 ಕೋಟಿ ರೂ. ಅನುದಾನ

12:24 PM Aug 22, 2018 | |

ಬೆಂಗಳೂರು: ಅಂತಾರಾಷ್ಟ್ರೀಯ ದರ್ಜೆಯ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಸಂಸ್ಥೆ ನಿರ್ಮಾಣಕ್ಕೆ ಪೂರಕ ಸೌಲಭ್ಯ ಕಲ್ಪಿಸಲು 50 ಕೋಟಿ ರೂ. ಅನುದಾನ ಕೋರಿ ಸಲ್ಲಿಸಿದ ಪ್ರಸ್ತಾವಕ್ಕೆ ಸ್ಪಂದಿಸಿರುವ ಸಮಾಜ ಕಲ್ಯಾಣ ಇಲಾಖೆ ಅಗತ್ಯ ಅನುದಾನ ನೀಡಲು ಒಪ್ಪಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

Advertisement

ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ನ ಆರನೇ ಆಡಳಿತ ಮಂಡಳಿ ಸಭೆಯಲ್ಲಿ ಮಂಗಳವಾರ ಪಾಲ್ಗೊಂಡ ಬಳಿಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಆಡಳಿತ ಮಂಡಳಿ ಅಧ್ಯಕ್ಷ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಸೇರಿದಂತೆ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಮಾಜಿ ಕುಲಪತಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು ಎಂದು ಹೇಳಿದರು.

ಮುಖ್ಯವಾಗಿ ಲಂಡನ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಮಾದರಿ, ಅಲ್ಲಿನ ಕಲಿಕಾ ವ್ಯವಸ್ಥೆ, ಕಾರ್ಯ ನಿರ್ವಹಣೆ ಇತರೆ ಅಂಶಗಳನ್ನು ಚರ್ಚಿಸಿ ಅದೇ ಮಾದರಿಯಲ್ಲಿ ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಸಂಸ್ಥೆಯನ್ನು ಹೇಗೆ ರೂಪಿಸಬಹುದು ಎಂಬ ಬಗ್ಗೆ ಮಾತುಕತೆ ನಡೆಯಿತು. ಉಪನ್ಯಾಸಕರ ನೇಮಕ, ಸ್ವಾಯತ್ತ ಅಧಿಕಾರ ವ್ಯವಸ್ಥೆ, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮಾಹಿತಿ ನೀಡಿದರು.

50 ಕೋಟಿ ರೂ. ನೀಡಲು ಒಪ್ಪಿಗೆ: ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಸಂಸ್ಥೆಗೆ ಪೂರಕವಾಗಿ ಸೌಲಭ್ಯ ಕಲ್ಪಿಸಲು 50 ಕೋಟಿ ರೂ. ಅನುದಾನ ಕೋರಿ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ಸಚಿವರು ಒಪ್ಪಿದ್ದು, ಅನುದಾನ ನೀಡುವ ಭರವಸೆ ನೀಡಿದ್ದಾರೆ. ಸದ್ಯ ಹಂಗಾಮಿ ನಿರ್ದೇಶಕರಿದ್ದು, ಶೀಘ್ರವೇ ಕಾಯಂ ನಿರ್ದೇಶಕರನ್ನು ನೇಮಿಸಲಾಗುವುದು ಎಂದು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಡಾ.ಎನ್‌.ಮಂಜುಳಾ, ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಸಂಸ್ಥೆಯಲ್ಲಿ ನಾಲ್ಕು ಮಂದಿ “ಅಡ್‌ಹಾಕ್‌’ ಉಪನ್ಯಾಸಕರು ಹಾಗೂ 13 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. 50 ವಿದ್ಯಾರ್ಥಿಗಳಿದ್ದು, ಇದರಲ್ಲಿ 30 ಮಂದಿ ರಾಜ್ಯದವರಾಗಿದ್ದರೆ, 20 ಮಂದಿ ಅನ್ಯರಾಜ್ಯದವರಾಗಿದ್ದಾರೆ. ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಈ ಹಿಂದೆ ಆರಂಭಿಸಿದ್ದ ಯಾವ ಯೋಜನೆ, ಕಾಮಗಾರಿಯನ್ನು ಸ್ಥಗಿತಗೊಳಿಸದೆ ಮುಂದುವರಿಸಲಾಗಿದೆ ಎಂದು ತಿಳಿಸಿದರು.

Advertisement

ನಿರ್ದೇಶಕರಿಗೆ ತರಾಟೆ: ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸೀಟು ಭರ್ತಿ ವಿವರ ತಮ್ಮ ಬಳಿಯಿಲ್ಲ, ವೆಬ್‌ಸೈಟ್‌ ನೋಡಿಕೊಳ್ಳಿ ಎಂದ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್‌.ಯು.ತಳವಾರ ಅವರನ್ನು ಪತ್ರಿಕಾಗೋಷ್ಠಿಯಲ್ಲೇ ಸಚಿವ ಜಿ.ಟಿ.ದೇವೇಗೌಡ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು.

33 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಂದು ಸೀಟು ಭರ್ತಿಯಾಗದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ತಳವಾರ ಅವರು ನೀಡಿದ ಪ್ರತಿಕ್ರಿಯೆಗೆ ಬೇಸರಗೊಂಡ ಸಚಿವ ಜಿ.ಟಿ.ದೇವೇಗೌಡ, ಆ ರೀತಿಯ ಹಾರಿಕೆ ಉತ್ತರ ನೀಡುವುದು ಸರಿಯಲ್ಲ. ಮಾಹಿತಿ ಸಂಗ್ರಹಿಸಿ ಸಮಗ್ರ ವಿವರ ನೀಡಬೇಕು ಎಂದು ತಾಕೀತು ಮಾಡಿದರು.

ಇದಕ್ಕೂ ಮೊದಲು ಮಾತನಾಡಿದ ತಳವಾರ, ಕರ್ನಾಟಕ ಮಾತ್ರವಲ್ಲದೆ, ಇಡೀ ದೇಶದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಅನ್ಯ ರಾಜ್ಯಗಳಲ್ಲಿ ಶೇ.30ರಷ್ಟು ಸೀಟು ಭರ್ತಿಯಾಗಿದ್ದರೆ ಕರ್ನಾಟಕದಲ್ಲಿ ಶೇ.60- ಶೇ.70ರಷ್ಟು ಸೀಟು ಭರ್ತಿಯಾಗಿದ್ದು, ಪರಿಸ್ಥಿತಿ ಉತ್ತಮವಾಗಿದೆ.

ಬೇಡಿಕೆಯಿಲ್ಲದ ಕೋರ್ಸ್‌ಗಳಿಗೆ ಸೇರಲು ವಿದ್ಯಾರ್ಥಿಗಳು ಇಚ್ಛಿಸುವುದಿಲ್ಲ. ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಸೀಟು ಭರ್ತಿ ವಿವರವನ್ನು ಎಐಸಿಟಿಇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದ್ದು, ಅಲ್ಲಿಯೇ ನೋಡಿಕೊಳ್ಳಿ ಎಂದು ಪತ್ರಕರ್ತರಿಗೆ ಹೇಳುವ ಮೂಲಕ ಸಚಿವರ ಕೆಂಗಣ್ಣಿಗೆ ಗುರಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next