Advertisement

ಕಾರವಾರ ಬಂದರು ಅಭಿವೃದ್ಧಿಗೆ ಕೇಂದ್ರದಿಂದ 50 ಕೋಟಿ ಬಿಡುಗಡೆ

09:43 AM Oct 28, 2017 | |

ನವದೆಹಲಿ: ಜಲಮಾರ್ಗಕ್ಕೆ ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ “ಸಂಗ್ರಾಮ ಕೋಸ್ಟಲ್‌ ಬರ್ತ್‌’ ಯೋಜನೆ ಅಡಿಯಲ್ಲಿ ಜವಾಹರಲಾಲ್‌ ನೆಹರು ಟ್ರಸ್ಟ್‌ (ಜೆಎನ್‌ಪಿಟಿ) ಹಾಗೂ ಕಾರವಾರ ಬಂದರು ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ಬಂದರು ಸಚಿವಾಲಯ, ಜೆಎನ್‌ಪಿಟಿಗೆ 25 ಕೋಟಿ ರೂ.ಹಾಗೂ ಕರ್ನಾಟಕದ ಪ್ರಮುಖ ಬಂದರುಗಳಲ್ಲಿ ಒಂದಾದ ಕಾರವಾರ ಬಂದರಿಗೆ 50 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಮುಖ ಕರಾವಳಿ ಅಭಿವೃದ್ಧಿ ಯೋಜನೆಯಾದ “ಸಂಗ್ರಾಮ’ದ ಅಡಿಯಲ್ಲಿ ಈ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

ರಾಷ್ಟ್ರೀಯ ಜಲಮಾರ್ಗಗಳ ಮೂಲಕ ಸರಕು ಪೂರೈಕೆಗೆ ಅನುಕೂಲವಾಗುವಂತೆ ಬಂದರುಗಳನ್ನು ಅಭಿವೃದ್ಧಿಪಡಿಸುವ ಹಾಗೂ ಬಂದರು ಅಭಿವೃದ್ಧಿಗೆ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಯೋಜನೆಯ ಶೇ.50ರಷ್ಟನ್ನು ಕೇಂದ್ರ ನೀಡುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಕಡಲ್ಕೊರೆತ ತಡೆಗೆ ಎಡಿಬಿ ಒಪ್ಪಂದ
ಕರ್ನಾಟಕದ ಪಶ್ಚಿಮ ಕರಾವಳಿ ಭಾಗದ ಕಡಲ್ಕೊರೆತ ಪರಿಶೀಲನೆಗೆ ಹಾಗೂ ತಡೆಗಟ್ಟುವ ಯೋಜನೆಗೆ ಸಂಬಂಧಿಸಿದಂತೆ “ದ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ)’ ಭಾರತದ ಜತೆ 65.5 ಮಿಲಿಯನ್‌ ಡಾಲರ್‌ ಒಪ್ಪಂದಕ್ಕೆ ಸಹಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡುವುದಕ್ಕೂ ಕೆಲವೇ ದಿನ ಮೊದಲು ಈ ಒಪ್ಪಂದ ಏರ್ಪಟ್ಟಿದೆ. ಕಡಲ್ಕೊರೆತದಿಂದ ಆಗುತ್ತಿರುವ ಹಾನಿಗೆ ಕಡಿವಾಣ ಹಾಕಲು ಮಹತ್ವದ ಬೆಳವಣಿಗೆ ಇದಾಗಿದ್ದು, 250 ಮಿಲಿಯನ್‌ ಡಾಲರ್‌ ಯೋಜನೆಯ 2ನೇ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಎಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ. 

ಇದಕ್ಕೆಂದು ಮೀಸಲಿರಿಸ ಲಾಗಿರುವ ಹಣವನ್ನು ಕೂಡಲೇ ವಿನಿಯೋಗಕ್ಕೆ ನೀಡಲಾಗುತ್ತದೆ. ಯಾವ ಭಾಗದಲ್ಲಿ ಹೆಚ್ಚೆಚ್ಚು ಹಾನಿಯಾಗಿದೆ ಎನ್ನುವುದರ ಅಧ್ಯಯನ ವರದಿ ಪಡೆದು, ಬಳಿಕ ತುರ್ತು ಎನಿಸಿದ ಭಾಗದ ಕಾಮಗಾರಿ ವಿನಿಯೋಗಕ್ಕೆ ಮಂಜೂರು ಮಾಡಲಾಗುವುದು. ಅಲ್ಲದೆ, ಕರ್ನಾಟಕದ ಲೋಕೋಪಯೋಗಿ ಕಾಮಗಾರಿ ಸೇರಿ, ಬಂದರು ಹಾಗೂ ಒಳನಾಡಿನ ನೀರು ಸರಬರಾಜಿಗೆ ಇದರಿಂದ ಬಲ ನೀಡುವುದು ನಮ್ಮ ಉದ್ದೇಶವೂ ಆಗಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next