Advertisement
ಕೇರಳ ಕಾಸರಗೋಡಿನ ಅಹಮದ್ ನಬೀಲ್ ಗಫೂರ್ (21) ಬಂಧಿತ ಆರೋಪಿ. ಆತನ ವಿರುದ್ಧ ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ದುಬಾೖಯಿಂದ ಹೊರಟು ಮಂಗಳವಾರ ಸಂಜೆ 6 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದ ಅಹಮದ್ ನಬೀಲ್ ಗಫೂರ್‌ನನ್ನು ಡಿಆರ್‌ಐ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ವಿಮಾನದ ಬಾಗಿಲಿನ ಬಳಿಯೇ ತಡೆದು ನಿಲ್ಲಿಸಿ ಕಸ್ಟಮ್ಸ್ ತಪಾಸಣೆಯ ಕೌಂಟರಿಗೆ ಕರೆದೊಯ್ದು ಕೂಲಂಕಷ ತಪಾಸಣೆ ನಡೆಸಿದರು. ಆರಂಭದಲ್ಲಿ ಚಿನ್ನ ಪತ್ತೆಯಾಗಲಿಲ್ಲ. ಬಳಿಕ ಆತನನ್ನು ಸಮಗ್ರ ತಪಾಸಣೆಗೆ ಒಳಪಡಿಸಿದಾಗ ಧರಿಸಿದ್ದ ಟೌಸರ್‌ನಲ್ಲಿ ಮೊಬೈಲ್ ಫೋನ್ ಒಂದನ್ನು ಹೊಂದಿರುವುದಾಗಿ ತಿಳಿಸಿದ. ಫೋನ್ ಸೆಟ್ಟನ್ನು ಅಧಿಕಾರಿಗಳು ಪರಿಶೀಲಿದಾಗ ಅದು ಸಾಮಾನ್ಯ ತೂಕಕ್ಕಿಂತ ಅಧಿಕ ಭಾರ ಇರುವುದು ಹಾಗೂ ಅದನ್ನು ಎಲ್ಲ ಭಾಗಗಳಿಂದರೂ ಮುದ್ರೆಯೊತ್ತಿ ಮುಚ್ಚಿರುವುದು ಅಧಿಕಾರಿಗಳ ಗಮನಕ್ಕೆ ಬಂತು. ತೀವ್ರ ವಿಚಾರಣೆಗೊಳಪಡಿಸಿದಾಗ ಮೊಬೈಲ್ ಫೋನ್ ಸೆಟ್‌ನ ಒಳಗೆ ಚಿನ್ನವನ್ನು ಇಟ್ಟು ಸಾಗಿಸಿರುವುದಾಗಿ ಆತ ತಪ್ಪೊಪ್ಪಿಕೊಂಡ ಎಂದು ಮೂಲಗಳು ತಿಳಿಸಿವೆ.
ಮೊಬೈಲ್ ಫೋನ್ ಸೆಟ್‌ನ ಸೀಲ್ ಒಡೆದು ಪರಿಶೀಲಿಸಿದಾಗ ಅದರಲ್ಲಿ 15 ಚಿನ್ನದ ಗಟ್ಟಿಗಳು ಪತ್ತೆಯಾದವು. ಈ ಪೈಕಿ 7 ಚಿನ್ನದ ಗಟ್ಟಿಗಳು ದೊಡ್ಡ ಗಾತ್ರದಲ್ಲಿದ್ದು, 4 ಚಿನ್ನದ ಗಟ್ಟಿಗಳನ್ನು ತುಂಡರಿಸಿ 8 ತುಣುಕುಗಳನ್ನಾಗಿ ಮಾಡಲಾಗಿತ್ತು. ಇದು 24 ಕ್ಯಾರೆಟ್ ಚಿನ್ನ ಆಗಿದ್ದು, 1,282 ಗ್ರಾಂ ತೂಕವಿದೆ. ಪ್ರಸಕ್ತ ಮಾರುಕಟ್ಟೆಯಲ್ಲಿ ಈ ಚಿನ್ನದ ಮೌಲ್ಯ 39 ಲಕ್ಷ ರೂ. ಆಗಿರುತ್ತದೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ. ಚಿನ್ನವನ್ನು ಅಕ್ರಮವಾಗಿ ದೇಶದೊಳಗೆ ಸಾಗಾಟ ಮಾಡಲು ಕಳ್ಳರು ಬೇರೆ ಬೇರೆ ತಂತ್ರಗಳನ್ನು ಅನುಸರಿಸುತ್ತಿರುವುದು ಈ ಹಿಂದಿನ ಪ್ರಕರಣಗಳಲ್ಲಿ ಬೆಳಕಿಗೆ ಬಂದಿತ್ತು. ಆದರೆ ಮೊಬೈಲ್ ಫೋನ್‌ನ ಒಳಗೆ ಚಿನ್ನದ ಗಟ್ಟಿಗಳನ್ನು ಇರಿಸಿ ಸಾಗಾಟ ಮಾಡಿರುವುದು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ.