Advertisement

Election; ಲೋಕಸಭೆ ಮುಗಿಯಿತು, ಪರಿಷತ್‌ ಹಣಾಹಣಿ ಆರಂಭ

12:32 AM May 08, 2024 | Team Udayavani |

ಬೆಂಗಳೂರು: ಲೋಕಸಭಾ ಸಮರದ ಬೆನ್ನಲ್ಲೇ ವಿಧಾನಪರಿಷತ್ತಿನ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿವೆ. ಬೆಳಗಾವಿ ವಿಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಕಂದಾಯ ವಿಭಾಗ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ನೀತಿಸಂಹಿತೆ ಸಡಿಲಿಕೆಯ ನಿರೀಕ್ಷೆ ಕ್ಷೀಣಗೊಂಡಿದೆ.

Advertisement

ಈಶಾನ್ಯ, ನೈಋತ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು, ಆಗ್ನೇಯ ಕ್ಷೇತ್ರ, ನೈಋತ್ಯ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಜೂ. 3ರಂದು ಚುನಾವಣೆ ನಡೆಸುವಂತೆ ಈಗಾಗಲೇ ಪ್ರಕಟಿಸಲಾಗಿದೆ. ಗುರುವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ವಾಪಸ್‌ ತೆಗೆದುಕೊಳ್ಳುವುದಕ್ಕೆ ಮೇ 20 ಕೊನೆಯ ದಿನವಾಗಿದ್ದು, ಸುಮಾರು ಹತ್ತು ದಿನ ಮಾತ್ರ ಮತಬೇಟೆಗೆ ಅವಕಾಶ ಸಿಗಲಿದೆ.

ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾದರೂ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿ ಇನ್ನೂ ತಲೆಕೆಡಿಸಿ ಕೊಂಡಿಲ್ಲ. 2 ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ವಿಚಾರ ವರಿಷ್ಠರ ಮಟ್ಟದಲ್ಲೇ ಇತ್ಯರ್ಥ ಆಗಬೇಕಿರು ವುದರಿಂದ ರಾಜ್ಯ ನಾಯಕರು ದಿಲ್ಲಿಯತ್ತ ಮುಖ ಮಾಡಿದ್ದಾರೆ.

ಸಿದ್ಧತೆಯಲ್ಲಿ ಕಾಂಗ್ರೆಸ್‌ ಮುಂದು
ಮೇಲ್ಮನೆ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅಭ್ಯರ್ಥಿಗಳ ಹೆಸರನ್ನೂ ಘೋಷಿಸಿದೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಬ್ಬಿರುವ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಘೋಷಣೆ ಮಾತ್ರ ಬಾಕಿ ಇದೆ. ಜೆಡಿಎಸ್‌ನಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮರಿತಿಬ್ಬೇಗೌಡ ಈಗಾಗಲೇ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಬಹುತೇಕ ಅವರ ಹೆಸರನ್ನೇ ಕಾಂಗ್ರೆಸ್‌ ಅಂತಿಮ ಗೊಳಿಸುವ ಸಾಧ್ಯತೆ ಇದೆ.

ಬಿಜೆಪಿ ಕತೆ ಏನು?
ಬಿಜೆಪಿ ಮೇಲ್ಮನೆ ಚುನಾವಣೆ ವಿಚಾರದಲ್ಲಿ ಇನ್ನೂ ಬಲವಾದ ಹೆಜ್ಜೆಯಿಟ್ಟಿಲ್ಲ. ಆರೇಳು ತಿಂಗಳು ಹಿಂದೆ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿ ಸಿದ ಬಿಜೆಪಿ ಈಗ ಅಷ್ಟೇ ವೇಗದಲ್ಲಿ ಸ್ತಬ್ಧವಾಗಿದ್ದು, 2 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಅನಿವಾರ್ಯದಲ್ಲಿದೆ.

Advertisement

ಸಂಘಟನಾತ್ಮಕ ಕ್ಷೇತ್ರ ತ್ಯಾಗವೇ?
ನೈಋತ್ಯ ಪದವೀಧರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರ ಸಂಘಟನಾತ್ಮಕ ವಾಗಿ ಬಿಜೆಪಿಯ ಪ್ರಬಲ ನೆಲೆಯಾಗಿದೆ.

ಕಳೆದ ಬಾರಿ ಚುನಾವಣೆಯಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ಮೈತ್ರಿ ಧರ್ಮಪಾಲನೆಗಾಗಿ ಕ್ಷೇತ್ರ ತ್ಯಾಗ ಮಾಡಬೇಕಾಗುವಂಥ ಅನಿವಾರ್ಯದಲ್ಲಿ ಸಿಲುಕಿದೆ.

ನೈಋತ್ಯ ಪದವೀಧರ ಕ್ಷೇತ್ರಕ್ಕೆ ಸಾಮಾನ್ಯವಾಗಿ ಶಿವಮೊಗ್ಗ ಭಾಗದವರನ್ನು ಕಣಕ್ಕೆ ಇಳಿಸುತ್ತಿದ್ದ ಬಿಜೆಪಿ ಶಿಕ್ಷಕರ ಕ್ಷೇತ್ರವನ್ನು ಕರಾವಳಿ ಭಾಗಕ್ಕೆ ಬಿಟ್ಟುಕೊಡುತ್ತಿತ್ತು. ಆದರೆ ಈ ಬಾರಿ ಮಾಜಿ ಶಾಸಕ ರಘುಪತಿ ಭಟ್‌ ಪದವೀಧರ ಕ್ಷೇತ್ರದ ಆಕಾಂಕ್ಷಿಯಾಗಿದ್ದು, ಈಗಾಗಲೇ ಸದಸ್ಯತ್ವ ಅಭಿಯಾನವನ್ನೂ ಪ್ರಾರಂಭಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಶಾಸಕರು ರಘುಪತಿ ಭಟ್‌ ಪರ ವರಿಷ್ಠರ ಮಟ್ಟದಲ್ಲಿ ಲಾಬಿ ಪ್ರಾರಂಭಿಸಿದ್ದು, ಯಡಿಯೂರಪ್ಪನವರ ಮೇಲೂ ಒತ್ತಡ ಹೇರುತ್ತಿದ್ದಾರೆ.

ಯಡಿಯೂರಪ್ಪನವರು ಡಾ|ಧನಂಜಯ್‌ ಸರ್ಜಿ, ಸಂಘಟನೆಯ ಮುಖಂಡರು ಶಿವಮೊಗ್ಗದ ಎಸ್‌. ದತ್ತಾತ್ರಿ, ಗಿರೀಶ್‌ ಪಟೇಲ್‌ ಪರ ಒಲವು ಹೊಂದಿದ್ದಾರೆ. ಹೀಗಾಗಿ ಇಲ್ಲಿ ಸಣ್ಣ ಮಟ್ಟಿಗಿನ ಬಿಕ್ಕಟ್ಟು ಸೃಷ್ಟಿಯಾಗಿದೆ.

ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಪರಿಷತ್‌ ಮಾಜಿ ಸದಸ್ಯ ಅಮರನಾಥ್‌ ಪಾಟೀಲ್‌, ಯಾದಗಿರಿಯ ಸುರೇಶ್‌ ಸಜ್ಜನ್‌, ಗುರುನಾಥ್‌ ಜಾಂತಿಕರ್‌ ಆಕಾಂಕ್ಷಿಗಳು. ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಅ. ದೇವೇಗೌಡ ಹೆಸರನ್ನೇ ಅಂತಿಮಗೊಳಿಸುವ ಸಾಧ್ಯತೆ ಹೆಚ್ಚಿದ್ದು, ಎ.ಎಚ್‌. ಆನಂದ್‌, ವಿನೋದ್‌ ಕೃಷ್ಣಮೂರ್ತಿ ಕೂಡ ಆಕಾಂಕ್ಷಿಗಳಾಗಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಾ| ವೈ.ಎ.ನಾರಾಯಣ ಸ್ವಾಮಿ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.

ದಕ್ಷಿಣ ಶಿಕ್ಷಕರ ಕ್ಷೇತ್ರವೂ ಜೆಡಿಎಸ್‌ ಪಾಲಾಗುವ ಸಾಧ್ಯತೆ ಇದ್ದು, ಶ್ರೀಕಂಠೇಗೌಡ ಅಥವಾ ವಿವೇಕಾನಂದ ಹೆಸರು ಮುಂಚೂಣಿಯಲ್ಲಿದೆ. ಬಿಜೆಪಿಯೇ ಸ್ಪರ್ಧಿಸಿದರೆ ನ್ಯಾಯವಾದಿ ವಿಶಾಲ್‌ ರಘು, ಎಬಿವಿಪಿ ಹಿನ್ನೆಲೆಯ ಇ.ಸಿ. ಲಿಂಗರಾಜ್‌, ಜಿ.ಸಿ. ರಾಜಣ್ಣ ಹೆಸರು ಮುಂಚೂಣಿಯಲ್ಲಿದೆ.

ಪರಿಷತ್‌: ಯಾವಾಗ? ಏನು?
-ಈಶಾನ್ಯ, ನೈಋತ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು; ಆಗ್ನೇಯ, ನೈಋತ್ಯ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಜೂ. 3ರಂದು ಚುನಾವಣೆ.
-ಗುರುವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ; ಸಲ್ಲಿಕೆಗೆ ಮೇ 16 ಕೊನೆಯ ದಿನ; ವಾಪಸ್‌ ಪಡೆಯಲು ಮೇ 20 ಕೊನೆಯ ದಿನ.

ಕಾಂಗ್ರೆಸ್‌ ಘೋಷಿತ ಅಭ್ಯರ್ಥಿಗಳು
ಈಶಾನ್ಯ ಪದವೀಧರ: ಡಾ| ಚಂದ್ರಶೇಖರ್‌ ಪಾಟೀಲ್‌
ನೈಋತ್ಯ ಪದವೀಧರ: ಆಯನೂರು ಮಂಜುನಾಥ
ಬೆಂಗಳೂರು ಪದವೀಧರ: ರಾಮೋಜಿಗೌಡ
ಆಗ್ನೇಯ ಶಿಕ್ಷಕ: ಕೆ.ಬಿ. ಶ್ರೀನಿವಾಸ್‌
ನೈರುತ್ಯ ಶಿಕ್ಷಕ: ಮಂಜುನಾಥ್‌
ದಕ್ಷಿಣ ಶಿಕ್ಷಕರ ಕ್ಷೇತ್ರ: ಮರಿತಿಬ್ಬೇಗೌಡ?

ಬಿಜೆಪಿ-ಜೆಡಿಎಸ್‌ ಸಂಭಾವ್ಯರು
ನೈಋತ್ಯ ಪದವೀಧರ: ಕೆ. ರಘುಪತಿ ಭಟ್‌ (ಬಿಜೆಪಿ)
ನೈಋತ್ಯ ಶಿಕ್ಷಕ: ಭೋಜೇಗೌಡ (ಜೆಡಿಎಸ್‌)
ಈಶಾನ್ಯ ಪದವೀಧರ: ಅಮರನಾಥ್‌ ಪಾಟೀಲ್‌ (ಬಿಜೆಪಿ)
ಬೆಂಗಳೂರು ಪದವೀಧರ: ಅ. ದೇವೇಗೌಡ (ಬಿಜೆಪಿ)
ಆಗ್ನೇಯ ಶಿಕ್ಷಕ: ಡಾ| ವೈ.ಎ. ನಾರಾಯಣ ಸ್ವಾಮಿ (ಬಿಜೆಪಿ)
ದಕ್ಷಿಣ ಶಿಕ್ಷಕ: ಶ್ರೀಕಂಠೇಗೌಡ (ಜೆಡಿಎಸ್‌)

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next