Advertisement

37 ಲಕ್ಷ ರೂ. ವಾಪಸ್‌: ಕಾರಣ ಸಹಿತ ವರದಿ ನೀಡಿ

10:35 PM Jun 13, 2019 | mahesh |

ಸುಳ್ಯ: ಕಳೆದ ಆರ್ಥಿಕ ಸಾಲಿನಲ್ಲಿ ಜಿ.ಪಂ. ಎಂಜಿನಿಯರಿಂಗ್‌ ಇಲಾಖೆಗೆ ಸಂಬಂಧಿಸಿದ 37 ಲಕ್ಷ ರೂ. ಅನುದಾನ ಬಳಕೆಯಾಗದೆ ವಾಪಸ್‌ ಆಗಿರುವುದಕ್ಕೆ ಕಾರಣ ಸಹಿತ ವರದಿ ನೀಡುವಂತೆ ಶಾಸಕ ಎಸ್‌. ಅಂಗಾರ ಸೂಚನೆ ನೀಡಿದ್ದಾರೆ. ತಾ.ಪಂ. ತ್ತೈಮಾಸಿಕ ಕೆಡಿಪಿ ಸಭೆ ಬುಧವಾರ ಶಾಸಕ ಎಸ್‌. ಅಂಗಾರ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಭವನದಲ್ಲಿ ನಡೆಯಿತು. ಇಲಾಖಾ ಅಧಿಕಾರಿ ಲ್ಯಾಪ್ಸ್‌ ಆಗಿರುವ ಮಾಹಿತಿ ನೀಡುತ್ತಿದ್ದಂತೆ ಜಿ.ಪಂ. ಸದಸ್ಯರಾದ ಎಸ್‌.ಎನ್‌. ಮನ್ಮಥ, ಆಶಾ ತಿಮ್ಮಪ್ಪ, ಹರೀಶ್‌ ಕಂಜಿಪಿಲಿ, ರಾಧಾಕೃಷ್ಣ ಬೊಳ್ಳೂರು ಈ ಬಗ್ಗೆ ಪ್ರಶ್ನಿಸಿದರು. ನಿಗದಿತ ದಿನಾಂಕದೊಳಗೆ ಬಿಲ್‌ ಪಾವತಿಸಿಲ್ಲ. ಜತೆಗೆ ಕಾಮಗಾರಿಯೂ ಆಗಿಲ್ಲ ಎನ್ನುವ ಆರೋಪವು ಕೇಳಿ ಬಂತು.

Advertisement

ಇದಕ್ಕೆ ಉತ್ತರಿಸಿದ ಜಿ.ಪಂ. ಎಡಬ್ಲ್ಯು, ಕೆಲವೆಡೆ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿಲ್ಲ. ನೋಟಿಸ್‌ ನೀಡಿದ್ದರೂ ಬಿಲ್‌ ನೀಡಿಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಿದರು. 37 ಲಕ್ಷ ರೂ. ವೆಚ್ಚದ 46 ಕಾಮಗಾರಿಗಳ ಹಣ ಲ್ಯಾಪ್ಸ್‌ ಆಗಿ ಸರಕಾರಕ್ಕೆ ಮರು ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಅಂಗಾರ, ಇದು ಗಂಭೀರ ಸಂಗತಿ. ಅನುದಾನ ಬರುವುದೇ ವಿರಳ. ಅದನ್ನು ಬಳಸುವಲ್ಲಿ ಇಲಾಖೆ ಎಡವಿರುವುದು ಸರಿಯಲ್ಲ. 37 ಲಕ್ಷ ರೂ. ಲ್ಯಾಪ್ಸ್‌ ಕುರಿತಂತೆ ಕಾರಣ ಸಹಿತ ವರದಿ ನೀಡುವಂತೆ ಶಾಸಕ ಅಂಗಾರ ಹೇಳಿದರು.

ಕೊಳೆರೋಗ: ಶೇ. 20 ಪರಿಹಾರ ಬಾಕಿ
ಅಡಿಕೆ ಕೊಳೆರೋಗ ಪರಿಹಾರಕ್ಕೆ ಸಂಬಂಧಿಸಿ 12,311 ಅರ್ಜಿಗಳು ಸಲ್ಲಿಕೆ ಆಗಿದೆ. ಪರಿಹಾರ ಮೊತ್ತ ವಿತರಣೆಗೆ ಗ್ರಾಮ ಲೆಕ್ಕಿಗ ಕಚೇರಿ ಮೂಲಕ ನೇರ ಲಿಂಕ್‌ ಕಲ್ಪಿಸಲಾಗಿದೆ. ಹೀಗಾಗಿ ಒಟ್ಟು ಎಷ್ಟು ಜನರಿಗೆ ಹಣ ಬಂದಿದೆ ಎಂಬ ಅಂಕಿ ಅಂಶ ತೋಟಗಾರಿಕೆ ಇಲಾಖೆ ಬಳಿ ಇಲ್ಲ. ಲಭ್ಯ ಮಾಹಿತಿ ಪ್ರಕಾರ ಶೇ. 20ರಷ್ಟು ಪಾವತಿಗೆ ಬಾಕಿ ಇದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ತಾಲೂಕಿನಲ್ಲಿ ಯಾರ್ಯಾರಿಗೆ ಹಣ ಪಾವತಿ ಆಗಿದೆ ಎಂಬ ಬಗ್ಗೆ ಯಾವ ಇಲಾಖೆಯಲ್ಲಿಯೂ ಮಾಹಿತಿ ಇಲ್ಲ. ಶೇ. 60ಕ್ಕೂ ಅಧಿಕ ಮಂದಿಗೆ ಪರಿಹಾರ ಹಣ ಬಂದೇ ಇಲ್ಲ ಎಂದು ಜಿ.ಪಂ. ಸದಸ್ಯರು ಹೇಳಿದರು.

ಉತ್ತರಿಸಿದ ತಹಶೀಲ್ದಾರ್‌, ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಆಗದ ಕಾರಣ ಕೆಲವರಿಗೆ ಪರಿಹಾರ ಹಣ ಬಂದಿಲ್ಲ. ಇದನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಪಾವತಿ ವಿವರ ಪಟ್ಟಿಯನ್ನು ನೀಡುವುದಾಗಿ ಅವರು ನುಡಿದರು.

ಕಾಮಗಾರಿ ಮತ್ತೆ ಸ್ಥಗಿತ!
ಒಟ್ಟು 3.5 ಕೋಟಿ ರೂ. ವೆಚ್ಚದ ಅಂಬೇಡ್ಕರ್‌ ಭವನ ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಸಮಾಜ ಕಲ್ಯಾಣಧಿಕಾರಿ, ಕಾಮಗಾರಿ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರ ಒಂದುವರೆ ತಿಂಗಳ ಹಿಂದೆ ಕಾಮಗಾರಿ ಆರಂಭಿಸಿದೆ. ಮೆಟೀರಿಯಲ್‌ ಕೊರತೆ ಕಾರಣದಿಂದ ಈಗ ಸ್ಥಗಿತಗೊಂಡಿದೆ ಎಂದು ಹೇಳಿದರು.

Advertisement

ಕಾಮಗಾರಿ ಗುರುವಾರದಿಂದ ಮತ್ತೆ ಆರಂಭಗೊಳ್ಳಲಿದೆ ಎಂದು ನಿರ್ಮಿತಿ ಕೇಂದ್ರದ ಪರವಾಗಿ ಅಧಿಕಾರಿ ಪ್ರತ್ಯುತ್ತರಿಸಿದರು. ಬಳಿಕ ಚರ್ಚೆ ಅಲ್ಲಿಗೆ ಕೊನೆಯಾಯಿತು. ತಾಲೂಕಿನಲ್ಲಿ 10 ಅಂಬೇಡ್ಕರ್‌ ಭವನಗಳ ಪೈಕಿ 7 ಅಂಬೇಡ್ಕರ್‌ ಭವನ ಸ್ಥಳಕ್ಕೆ ಪಹಣಿಪತ್ರವಾಗಿದೆ. ಎರಡು ಕಡತ ಎ.ಸಿ., ಅರಣ್ಯ ಇಲಾಖೆಯಲ್ಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

116 ಶಿಕ್ಷಕರ ಅಗತ್ಯ
ತಾಲೂಕಿನಲ್ಲಿ 116 ಶಿಕ್ಷಕರ ಅಗತ್ಯವಿದ್ದು, ಅತಿಥಿ ಶಿಕ್ಷಕರ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ 50 ಶಿಕ್ಷಕರ ನೇಮಕವಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಾಹಿತಿ ನೀಡಿದರು.

ದೊಡ್ಡತೋಟ ಸಮೀಪ ಸರಕಾರದ ನಿಯಮ ಮೀರಿ ಕೊಳವೆಬಾವಿ ತೋಡಿಸಿರುವ ಕ್ರಮದ ಬಗ್ಗೆ ರಾಧಾಕೃಷ್ಣ ಬೊಳ್ಳೂರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಶಾಸಕ ಅಂಗಾರ ಧ್ವನಿಗೂಡಿಸಿ, ಇಲಾಖೆ ಕ್ರಮದ ಬಗ್ಗೆ ಅಸಮಾಧಾನ ಸೂಚಿಸಿದರು. ಮೇಲಧಿಕಾರಿಗಳ ಸೂಚನೆ ಪಾಲಿಸುವುದು ನಮ್ಮ ಕರ್ತವ್ಯ ಎಂದು ತಹಶೀಲ್ದಾರ್‌ ಉತ್ತರಿಸಿದರು. ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷ ಶುಭದಾ ಎಸ್‌.ರೈ, ತಾ.ಪಂ. ಇಒ ಮಧುಕುಮಾರ್‌ ಉಪಸ್ಥಿತರಿದ್ದರು.

ಕಾಡಾನೆ ಸ್ಥಳಾಂತರ: ತೀರ್ಮಾನ ಆಗಲಿ
ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡಾನೆಗಳು ಕೃಷಿಗೆ ದಾಳಿ ಇಡುವ ಹಿನ್ನೆಲೆಯಲ್ಲಿ ಕಾಡಾನೆ ಸ್ಥಳಾಂತರದ ಬೇಡಿಕೆ ಇದೆ. ಈ ಬಗ್ಗೆ ಸರಕಾರದ ಮಟ್ಟದಲ್ಲೇ ತೀರ್ಮಾನ ಕೈಗೊಳ್ಳಬೇಕಿದೆ ಎಂದು ವಲಯ ಅರಣ್ಯಧಿಕಾರಿ ಮಂಜುನಾಥ ಹೇಳಿದರು. ಸುಳ್ಯ ವಲಯದ ಅರಣ್ಯ ಪ್ರದೇಶದಲ್ಲಿ ತಡೆ ನೀರು ಇಂಗಿಸಲಾಗುತ್ತಿದೆ ಎಂದರು. ಕಾಡಿನಲ್ಲಿ ನೀರು ಹರಿಯುವ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸಾಧ್ಯತೆಗಳು ಇದ್ದರೆ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಅಂಗಾರ ಸೂಚಿಸಿದರು.

ವರದಿ ಪ್ರತಿಧ್ವನಿ
ಜಾಲೂರು ಗ್ರಾಮದ ಕುಂದ್ರು ಕೋಡಿ ಬಳಿ ಮನೆ ಸನಿಹದಲ್ಲಿ ಟಿ.ಸಿ. ಅಳವಡಿಸಿರುವ ಬಗ್ಗೆ ಉದಯವಾಣಿ ಸುದಿನ ವರದಿ ಉಲ್ಲೇಖೀಸಿದ ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ಸ್ಥಳಾಂತರಕ್ಕೆ ಮೆಸ್ಕಾಂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಏನೂ ಮಾಡಲಾಗದು
ಕೊಡಿಯಾಲ ರಸ್ತೆ ಅವ್ಯವಸ್ಥೆ ವಿರುದ್ಧ ಪಂಜಿಗಾರು ಬಳಿ ಪ್ರತಿಭಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಂಗಾರ, ಪ್ರತಿಭಟನೆಗೆ ನಾವೇನೂ ಮಾಡಲಾಗುವುದಿಲ್ಲ. ರಸ್ತೆ ಅಭಿವೃದ್ಧಿಗೆ ಅನುದಾನ ಬರಬೇಕು. ಕೊಡಿಯಾಲ ಗ್ರಾಮಕ್ಕೆ ಈ ತನಕ 6 ಕೋಟಿ ರೂ.ಗೂ ಮಿಕ್ಕಿ ಅನುದಾನ ನೀಡಲಾಗಿದೆ. ಹೀಗಾಗಿ ಪ್ರತಿಭಟನೆ ಮಾಡುವವರ ಉದ್ದೇಶ ಏನು ಅನ್ನುವುದು ಸ್ಪಷ್ಟವಾಗುತ್ತದೆ ಎಂದರು.

ಸಾಲಮನ್ನಾ: 37.92 ಕೋಟಿ ರೂ. ಬಿಡುಗಡೆ
ಸಾಲ ಮನ್ನಾ ಯೋಜನೆಯಡಿ ತಾಲೂಕಿನಲ್ಲಿ 14,114 ಫಲಾನುಭವಿಗಳಿದ್ದು, 118.12 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಲಾಗಿತ್ತು. 5,373 ರೈತರಿಗೆ 37.92 ಕೋಟಿ ರೂ. ಬಿಡುಗಡೆ ಆಗಿದೆ. 8771 ರೈತರಿಗೆ 80.20 ಕೋಟಿ ರೂ. ಬಿಡುಗಡೆಗೆ ಬಾಕಿ ಇದೆ ಎಂದು ಸಹಕಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಮನ್ನಾ ಹಣ ಬಿಡುಗಡೆ ವಿಧಾನದ ಬಗ್ಗೆ ಅಧಿಕಾರಿಗಳಲ್ಲಿ ಸಮರ್ಪಕ ಮಾಹಿತಿ ಇಲ್ಲ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಆಕ್ಷೇಪಿಸಿದರು. ಸಾಲ ಮನ್ನಾ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಣ ಬಂದಿರುವ ಫಲಾನುಭವಿಗಳ ಪಟ್ಟಿ ನೀಡುವುದಾಗಿ ತಹಶೀಲ್ದಾರ್‌ ಅಹ್ಮದ್‌ ಕುಂಞಿ ಹೇಳಿದರು.

ಬೆಂಗಮಲೆ ತ್ಯಾಜ್ಯ
ಬೆಂಗಮಲೆ ಕಾಡಿನ ಬದಿಗಳಲ್ಲಿ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಜಿ.ಪಂ. ಸದಸ್ಯ ಎಸ್‌.ಎನ್‌. ಮನ್ಮಥ ಪ್ರಸ್ತಾವಿಸಿದರು. ಸುಳ್ಯ ಭಾಗದಿಂದ ಕೋಳಿ, ಇತರ ತ್ಯಾಜ್ಯ ತಂದು ಎಸೆಯಲಾಗುತ್ತಿದೆ ಎಂದು ಆರೋಪಿಸಿದರು. ಮಾಂಸದಂಗಡಿಯಿಂದ ತ್ಯಾಜ್ಯ ಸಂಗ್ರಹಿಸಿ ಅದನ್ನು ಬೆಂಗಮಲೆ, ಆನೆಗುಂಡಿ ಪರಿಸರದಲ್ಲಿ ಎಸೆಯುತ್ತಾರೆ ಎಂಬ ಆರೋಪ ಕೇಳಿ ಬಂತು. ಮಾಂಸದಂಗಡಿ ಮಾಲಕರನ್ನು ಕರೆಯಿಸಿ ಸೂಚನೆ ನೀಡುವುದಾಗಿ ತಹಶೀಲ್ದಾರ್‌ ಹೇಳಿದರು. ಪೊಲೀಸ್‌ ಇಲಾಖೆ ನಿಗಾ ಇರಿಸುವಂತೆ ಶಾಸಕರು ಸೂಚಿಸಿದರು. ನಾಗಪಟ್ಟಣ ಬಳಿಯಲ್ಲಿ ತ್ಯಾಜ್ಯ ಪಯಸ್ವಿನಿ ನದಿ ಸೇರುವ ಬಗ್ಗೆ ಕೆಡಿಪಿ ಸದಸ್ಯ ರಾಧಾಕೃಷ್ಣ ಪರಿವಾರಕಾನ ಗಮನ ಸೆಳೆದರು.

ಪ್ರಮುಖ ಬೇಡಿಕೆಗಳು
·  ಸುಬ್ರಹ್ಮಣ್ಯ ಬಸ್‌ ನಿಲ್ದಾಣದಲ್ಲಿ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಎಡಮಂಗಲ-ಕಡಬ, ಕೊಲ್ಲಮೊಗ್ರು-
ಕಲ್ಮಕಾರು ರೂಟ್‌ನಲ್ಲಿ ಬಸ್‌ ಓಡಾಟ ಕ್ರಮ ಕೈಗೊಳ್ಳಿ: ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ
·  ವಿದ್ಯುತ್‌ ಕಂಬ, ಲೈನುಗಳಿಗೆ ತಾಗಿರುವ ಮರ, ಗೆಲ್ಲು ತೆರವುಗೊಳಿಸಬೇಕು. ಮೆಸ್ಕಾಂ ಆಯಾ ವಲಯದಲ್ಲಿ ದಿನ ನಿಗದಿಪಡಿಸಿ ಕಾಮಗಾರಿ ನಡೆಸಬೇಕು: ಎಸ್‌.ಅಂಗಾರ
·  ಬೆಳೆ ವಿಮೆ ಕಡ್ಡಾಯವೆಂದು ರೈತರಿಗೆ ಹಣ ವಸೂಲಿ ಮಾಡಿದ್ದರೂ ಬೆಳೆಗಾರರಿಗೆ ವಿಮೆ ಸೌಲಭ್ಯದ
ಪ್ರಯೋಜನ ಸಿಕ್ಕಿಲ್ಲ: ರಮೇಶ್‌ ಕೆ.
·  ಫುಟ್‌ಪಾತ್‌ ವ್ಯಾಪಾರಕ್ಕೆ ಕಡಿವಾಣ ಹಾಕಿ ಎಪಿಎಂಸಿ
ಯಾರ್ಡ್‌® ‌ಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ನ.ಪಂ. – ಎಪಿಎಂಸಿ ಜಂಟಿ ಸಭೆ ನಡೆಸಬೇಕು: ಎಸ್‌. ಅಂಗಾರ
·  ರಸ್ತೆ, ನದಿ ಪರಂಬೋಕಿನಲ್ಲಿ ಕಟ್ಟಡ ಕಟ್ಟಿದ್ದರೆ ಅದರ
ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರ ಮತ್ತು
ಗ್ರಾಮಾಂತರ ಪ್ರದೇಶದಲ್ಲಿ ಚರಂಡಿ ದುರಸ್ತಿಗೆ ಆದ್ಯತೆ ನೀಡಬೇಕು: ಎಸ್‌. ಅಂಗಾರ
·  ಕೊಡಿಯಾಲ ಗ್ರಾ.ಪಂ. ವ್ಯಾಪ್ತಿಯ ಘನತ್ಯಾಜ್ಯ ಘಟಕ ಸ್ಥಳ ಕಾದಿರುವಿಸುವಿಕೆ, ಟಿ.ಸಿ. ಕನೆಕ್ಷನ್‌ ಮೊದಲಾದ ಸಮಸ್ಯೆಗಳ ಬಗ್ಗೆ ಸ್ಪಂದನೆ ಬೇಕು: ಬಾಲಕೃಷ್ಣ ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next