ಬೀಳಗಿ: ಪಟ್ಟಣದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದ ಮಕ್ಕಳ ಅಗತ್ಯಕ್ಕೆ ತಕ್ಕಂತೆ ಇನ್ನೂ ಹೆಚ್ಚುವರಿ ಕಟ್ಟಡ ನಿರ್ಮಿಸಲು ಸರಕಾರಕ್ಕೆ 3.50 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು. ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಹೆಚ್ಚುವರಿಯಾಗಿ ನಿರ್ಮಿಸಿದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಗೆ ಕಾಂಪೌಂಡ್ ನಿರ್ಮಾಣ; ಭರವಸೆ: ಸದ್ಯ ವಸತಿ ಶಾಲೆಗೆ ಸುಸಜ್ಜಿತ ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯಿಸಿ ಶಾಲಾ ಸಿಬ್ಬಂದಿ ಮನವಿ ಸಲ್ಲಿಸಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಕಾಂಪೌಂಡ್ ನಿರ್ಮಿಸಲು ತಾಪಂ ಇಒಗೆ ಸೂಚಿಸಲಾಗುವುದೆಂದು ಭರವಸೆ ನೀಡಿದ ಅವರು, ವಿದ್ಯಾರ್ಥಿಗಳು ಚೆನ್ನಾಗಿ ಓದುವ ಮೂಲಕ ಐಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗೇರಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.
ಕ್ರೀಡಾಪಟುಗಳಿಗೆ ಸನ್ಮಾನ: ಈ ವೇಳೆ ವಸತಿ ನಿಲಯದ ರಾಷ್ಟ್ರಮಟ್ಟದ ಕರಾಟೆ ಪಟು ಸಾಬವ್ವ ಮಾದರ, ಸಂಗೀತಾ ಬಡಿಗೇರ ಹಾಗೂ ರಾಜ್ಯಮಟ್ಟದ ಉದ್ದ ಜಿಗಿತದ ಕ್ರೀಡಾಪಟು ಪ್ರೀತಿ ಗಿರಗಾಂವ ಅವರನ್ನು ಶಾಸಕ ಮುರುಗೇಶ ನಿರಾಣಿ ಸನ್ಮಾನಿಸಿದರು. ಬಿಇಒ ಹನುಮಂತಗೌಡ ಮಿರ್ಜಿ ಮಾತನಾಡಿದರು.
ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಜಿಪಂ ಸದಸ್ಯ ಹನುಮಂತ ಕಾಖಂಡಕಿ, ಎಸ್‌ಡಿಎಂಸಿ ಅಧ್ಯಕ್ಷೆ ಲಲಿತಾ ಹಳ್ಳಿ, ಕ್ಷೇತ್ರ ಸಮನ್ವಯಾ ಧಿಕಾರಿ ಆರ್.ಸಿ. ವಡವಾಣಿ, ಪಿಡಿಒ ರಮೇಶ ಮೇಲ್ನಾಡ ಇತರರು ಇದ್ದರು. ಗುರುರಾಜ ಲೂತಿ ನಿರೂಪಿಸಿದರು.
ಸರ್ಕಾರದ ಅವಧಿಯಲ್ಲಿ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯ ಸ್ಥಾಪಿಸಲಾಯಿತು. ಮೊದಲು 50 ವಿದ್ಯಾರ್ಥಿನಿಯರಿಂದ ಆರಂಭವಾದ ವಸತಿ ಶಾಲೆ ಇದೀಗ 213 ವಿದ್ಯಾರ್ಥಿನಿಯರಿಗೆ ಜ್ಞಾನ ದೇಗುಲವಾಗಿದೆ. ವಿದ್ಯಾರ್ಥಿಗಳ ವಿದ್ಯಾರ್ಜನೆ-ವಸತಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರಕ್ಕೆ 3.50 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಮಂಜೂರಾಗುವುದರೊಳಗೆ ನೂತನ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸ್ಥಳ ಪರಿಶೀಲಿಸಲಾಗುವುದು.
. ಮುರುಗೇಶ ನಿರಾಣಿ, ಶಾಸಕ