Advertisement

ಕೆಎಸ್ಸಾರ್ಟಿಸಿಗೆ 3.27 ಕೋಟಿ ರೂ.ಆದಾಯ

09:45 AM Oct 31, 2018 | Team Udayavani |

ಮಹಾನಗರ: ಕರಾವಳಿ, ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಶಿರಾಡಿ, ಸಂಪಾಜೆ ಘಾಟಿ ಕುಸಿತದಿಂದ ಸಂಚಾರ ಸ್ಥಗಿತವಾಗಿ ನಷ್ಟ ಅನುಭವಿಸಿದ್ದ ಕೆಎಸ್ಸಾರ್ಟಿಸಿ ಇದೀಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ದಸರಾ ಹಬ್ಬದ ಅ. 21 ಮತ್ತು 22ರಂದು ಕೆಎಸ್ಸಾರ್ಟಿಸಿಯ ಮಂಗಳೂರು, ಪುತ್ತೂರು ವಿಭಾಗಗಳು ಸುಮಾರು 3.27 ಕೋಟಿ ರೂ. ಆದಾಯ ಗಳಿಸಿವೆ.

Advertisement

ಕರಾವಳಿಗರು ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದು, ಪರ ಊರಿನಲ್ಲಿರುವ ಮಂದಿಗೆ ಹಬ್ಬವನ್ನು ಮನೆ ಮಂದಿಯ ಜತೆಗೆ ಆಚರಿಸಬೇಕೆಂಬ ಭಾವನಾತ್ಮಕ ನಿಲುವು ಇರುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನವರು ಕರಾವಳಿಯ ಊರಿನತ್ತ ಪ್ರಯಾಣಿಸಿದ್ದರು.

ಹೆಚ್ಚು ದಟ್ಟಣೆ
ಬೆಂಗಳೂರು, ಮೈಸೂರು ಸೇರಿದಂತೆ ಮಂಗಳೂರಿನ ಸಂಪರ್ಕಕ್ಕೆ ಇದ್ದ ಚಾರ್ಮಾಡಿ, ಶಿರಾಡಿ ಮತ್ತು ಸಂಪಾಜೆ ಘಾಟಿಗಳಲ್ಲಿ ವಾಹನ ಸಂಚಾರ ಪ್ರಾರಂಭವಾದರೂ ಹೆಚ್ಚಿನ ಮಂದಿ ತಮ್ಮ ಸ್ವಂತ ವಾಹನಗಳಲ್ಲಿ ಊರಿಗೆ ಬರಲು ಹಿಂಜರಿದಿದ್ದರು. ಇದೇ ಕಾರಣಕ್ಕೆ ಹಬ್ಬದ ಸಮಯದಲ್ಲಿ ಬಸ್‌ಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚು ದಟ್ಟಣೆ ಇತ್ತು.

ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ (ಮಂಗಳೂರಿನಲ್ಲಿ-3, ಕುಂದಾಪುರ, ಉಡುಪಿ) ಪ್ರತೀ ದಿನ 350ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಅದರಂತೆಯೇ ಪುತ್ತೂರು ವಿಭಾಗದಿಂದ (ಪುತ್ತೂರು, ಬಿ.ಸಿ. ರೋಡ್‌, ಧರ್ಮಸ್ಥಳ, ಮಡಿಕೇರಿ, ಸುಳ್ಯ) ಸುಮಾರು 560 ಬಸ್‌ಗಳು ಸಂಚರಿಸುತ್ತವೆ, ಈ ಎರಡೂ ವಿಭಾಗಗಳಿಂದ ಸಾಮಾನ್ಯ ದಿನಗಳಲ್ಲಿ ಪ್ರತೀ ದಿನ ಸುಮಾರು ಒಂದು ಕೋಟಿ ರೂಪಾಯಿ ಆದಾಯ ಬರುತ್ತದೆ. ಆದರೆ ದಸರಾ ಸಂದರ್ಭ ಪುತ್ತೂರು ವಿಭಾಗದಿಂದ ಸುಮಾರು 1.42 ಕೋಟಿ ರೂ. ಮತ್ತು ಮಂಗಳೂರು ವಿಭಾಗದಲ್ಲಿ ಸುಮಾರು 1.85 ಕೋಟಿ ರೂ. ಆದಾಯ ಬಂದಿದೆ.

ಹೆಚ್ಚುವರಿ ಬಸ್‌ ಕಾರ್ಯಾಚರಣೆ
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಬೆಂಗಳೂರಿಗೆ ಪ್ರತಿದಿನ 70 ಬಸ್‌ಗಳು ಹಾಗೂ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ 55 ಬಸ್‌ಗಳು ಸಂಚರಿಸುತ್ತಿವೆ. ದಸರಾ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಿತ್ತು. ಅದರಲ್ಲಿ ಮಂಗಳೂರು ವಿಭಾಗದಿಂದ ನ. 21, 22ರಂದು ಬೆಂಗಳೂರು, ಮೈಸೂರು, ಹುಬ್ಬಳ್ಳಿಗೆ 60 ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್‌ಗಳು ಕಾರ್ಯಾಚರಿಸಿದ್ದವು.

Advertisement

ರಾಜ್ಯ ಕೆಎಸ್ಸಾರ್ಟಿಸಿಗೆ 18.26 ಕೋಟಿ ರೂ. ಆದಾಯ
ನವರಾತ್ರಿ ಹಬ್ಬದ ನ. 22ರ ಒಂದೇ ದಿನ ಕೆಎಸ್ಸಾರ್ಟಿಸಿ ಒಟ್ಟಾರೆ 18.26 ಕೋಟಿ ರೂ. ಆದಾಯ ಗಳಿಸಿದೆ. ಈ ಆದಾಯವು ಪ್ರಸಕ್ತ ವರ್ಷ ದಿನವೊಂದರ ನಿಗಮ ಗಳಿಸಿದ ಅತಿ ಹೆಚ್ಚು ಆದಾಯವಾಗಿದೆ. ಹಬ್ಬದ ಕಾರಣದಿಂದಾಗಿ ಕೆಎಸ್ಸಾರ್ಟಿಸಿ ವಿವಿಧ ಪ್ರದೇಶಗಳಿಂದ ಹೆಚ್ಚುವರಿಯಾಗಿ 2,500 ಬಸ್‌ ಗಳನ್ನು ನಿಯೋಜನೆ ಮಾಡಿತ್ತು.

ಹೆಚ್ಚಿನ ಆದಾಯ
ಹಬ್ಬದ ಕಾರಣದಿಂದಾಗಿ ಕೆಎಸ್ಸಾರ್ಟಿಸಿ ಘಟಕಗಳಲ್ಲಿ ಬೆಂಗಳೂರು, ಹುಬ್ಬಳ್ಳಿ, ಮೈಸೂರಿಗೆ ಹೆಚ್ಚುವರಿ ಬಸ್‌ ಕಾರ್ಯಾಚರಿಸಿತ್ತು. ಮಂಗಳೂರು, ಉಡುಪಿ ಕೆಎಸ್ಸಾರ್ಟಿಸಿ ಘಟಕವು ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಆದಾಯ ಗಳಿಸಿದೆ.
-ದೀಪಕ್‌ ಕುಮಾರ್‌,
ಕೆಎಸ್ಸಾರ್ಟಿಸಿ ವಿಭಾಗಾಧಿಕಾರಿ,ಮಂಗಳೂರು

‡ ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next