Advertisement

ಮೆಟ್ರೋಗೆ 3 ಸಾವಿರ ಕೋಟಿ ಸಾಲದ ಭರವಸೆ

10:20 AM Jun 07, 2019 | Team Udayavani |

ಬೆಂಗಳೂರು: ‘ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಗೆ ಆರ್ಥಿಕ ನೆರವು ನೀಡಲು ಏಷಿಯನ್‌ ಇನ್‌ಫ್ರಾಸ್ಟ್ರಕ್ಚರ್‌ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ (ಎಐಐಬಿ) ಮುಂದೆಬಂದಿದ್ದು, ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಜತೆ ಒಪ್ಪಂದಕ್ಕೆ ಸಹಿ ಹಾಕಿತು.

Advertisement

ಎರಡನೇ ಹಂತದಲ್ಲಿ ಬರುವ ರೀಚ್-6 (ಗೊಟ್ಟಿಗೆರೆ-ನಾಗವಾರ) ಒಂದು ಭಾಗದ ಯೋಜನೆಗೆ ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ (ಇಐಬಿ) ಸಹಯೋಗದಲ್ಲಿ ಎಐಐಬಿ 335 ಮಿಲಿಯನ್‌ ಯೂರೊ ಅಂದರೆ ಅಂದಾಜು ಮೂರು ಸಾವಿರ ಕೋಟಿ ರೂ. ಸಾಲ ನೀಡಲು ಮುಂದೆಬಂದಿದೆ. ಇದರೊಂದಿಗೆ ಉದ್ದೇಶಿತ ಸುರಂಗ ಮಾರ್ಗಕ್ಕೆ ವಿದೇಶಿ ಬ್ಯಾಂಕುಗಳಿಂದ ಬಿಎಂಆರ್‌ಸಿಗೆ ಒಟ್ಟಾರೆ 7,300 ಕೋಟಿ ರೂ. ಸಾಲದ ಭರವಸೆ ದೊರಕಿದೆ.

ಸಾಲದ ಯೋಜನಾ ಒಪ್ಪಂದಕ್ಕೆ ಈಚೆಗೆ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇs್ ಹಾಗೂ ಎಐಐಬಿ ಮಹಾನಿರ್ದೇಶಕ ಸುಪಿ ತೆರವಣಿನ್‌ಥಾರ್ನ್ ಪರಸ್ಪರ ಸಹಿ ಹಾಕಿದರು.

ಗೊಟ್ಟಿಗೆರೆ-ನಾಗವಾರ ಮೆಟ್ರೋ ಸುರಂಗ ಮಾರ್ಗಕ್ಕೆ ಯೂರೋಪಿಯನ್‌ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ (ಇಐಬಿ) 500 ಮಿಲಿಯನ್‌ ಯೂರೊ ಸಾಲ ನೀಡಲು ಮುಂದೆಬಂದಿದ್ದು, 2017ರ ಅಕ್ಟೋಬರ್‌ ಹಾಗೂ 2018ರ ಸೆಪ್ಟೆಂಬರ್‌ನಲ್ಲೇ ಈ ಸಂಬಂಧ ಒಡಂಬಡಿಕೆ ಕೂಡ ಆಗಿದೆ. ಅದರಂತೆ ಮೊದಲ ಹಂತದಲ್ಲಿ 300 ಮಿಲಿಯನ್‌ ಹಾಗೂ ಎರಡನೇ ಹಂತದಲ್ಲಿ 200 ಮಿಲಿಯನ್‌ ಯೂರೊ ಈ ಬ್ಯಾಂಕ್‌ನಿಂದ ಬರಲಿದೆ.

ಎರಡನೇ ಹಂತದ ನಮ್ಮ ಮೆಟ್ರೋ ಯೋಜನೆ 26,405 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿ 12,141 ಕೋಟಿ ರೂ. ಸಾಲದ ರೂಪದಲ್ಲಿ ಬಿಎಂಆರ್‌ಸಿ ಕ್ರೋಡೀಕರಿಸಬೇಕಿದ್ದು, ಉಳಿದದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರಲಿದೆ. ಈಗ 7,300 ಕೋಟಿ ರೂ. ಸಾಲದ ಭರವಸೆ ಸಿಕ್ಕಿದೆ. ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ಹೊಂದಿಸಲಾಗುವುದು ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next