Advertisement

ಕೇಂದ್ರದಿಂದ ರಾಜ್ಯಕ್ಕೆ 3 ಸಾವಿರ ಕೋಟಿ ಪರಿಹಾರ

06:35 AM Dec 18, 2017 | Team Udayavani |

ಬೆಂಗಳೂರು: ಜಿಎಸ್‌ಟಿ ಜಾರಿ ಬಳಿಕ ಕೇಂದ್ರ ಸರ್ಕಾರಕ್ಕೆ ಮಾತ್ರವಲ್ಲದೆ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ವಾಣಿಜ್ಯ ತೆರಿಗೆ ಆದಾಯ ಇಳಿಕೆಯಾಗಿದ್ದು, ಹಿಂದಿನ ವ್ಯಾಟ್‌ ಪದ್ಧತಿಗಿಂತ ಜಿಎಸ್‌ಟಿಯಡಿ ಸಂಗ್ರಹವಾಗುತ್ತಿರುವ ಸರಾಸರಿ ವಾಣಿಜ್ಯ ತೆರಿಗೆ ಆದಾಯದಲ್ಲಿ ಶೇ.8ರಷ್ಟು ಖೋತಾ ಆಗಿದೆ!

Advertisement

ಜುಲೈನಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಸಂಗ್ರಹವಾಗುವ ವಾಣಿಜ್ಯ ತೆರಿಗೆ ಆದಾಯದಲ್ಲಿ ಸರಾಸರಿ ಶೇ.7ರಿಂದ ಶೇ.8ರಷ್ಟು ಆದಾಯ ಇಳಿಕೆಯಾಗಿದ್ದು, ಈವರೆಗೆ ನಾಲ್ಕು ತಿಂಗಳ ತೆರಿಗೆ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರ ಸುಮಾರು 2990 ಕೋಟಿ ರೂ. ಬಿಡುಗಡೆ ಮಾಡಿದೆ. ವಾಣಿಜ್ಯ ತೆರಿಗೆ ಸೋರಿಕೆ ತಡೆಗೆ ರಾಜ್ಯ ಸರ್ಕಾರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಮುಂದಾಗಿದೆ.

ರಾಜ್ಯದಲ್ಲಿ ಈ ಹಿಂದೆಯಿದ್ದ ವ್ಯಾಟ್‌ ವ್ಯವಸ್ಥೆಯಡಿ 5.5 ಲಕ್ಷಕ್ಕೂ ಹೆಚ್ಚು ವ್ಯಾಪಾರ, ವ್ಯವಹಾರಸ್ಥರು ನೋಂದಣಿ ಮಾಡಿಕೊಂಡಿದ್ದರು. ಜುಲೈ 1ರಿಂದ ಜಿಎಸ್‌ಜಿ ಜಾರಿ ಬಳಿಕ ಬಹುತೇಕರು ಜಿಎಸ್‌ಟಿಗೆ ವ್ಯವಹಾರವನ್ನು ವರ್ಗಾಯಿಸಿಕೊಂಡಿದ್ದಾರೆ. ಸದ್ಯ 5.70 ಲಕ್ಷಕ್ಕೂ ಹೆಚ್ಚು ಮಂದಿ ಜಿಎಸ್‌ಟಿಯಡಿ ನೋಂದಣಿ ಮಾಡಿಕೊಂಡಿದ್ದಾರೆ. ತೆರಿಗೆದಾರರ ಸಂಖ್ಯೆ ಹೆಚ್ಚಾದರೂ ತೆರಿಗೆ ಆದಾಯ ಏರಿಕೆಯಾಗದಿರುವುದು ಸದ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ತಲೆನೊವಾಗಿ ಪರಿಣಮಿಸಿದೆ.

ಸೆಪ್ಟಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ ತಿಂಗಳ ಜಿಎಸ್‌ಟಿ ತೆರಿಗೆ ಆದಾಯದಲ್ಲಿ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಾದ್ಯಂತ 11,000 ಕೋಟಿ ರೂ. ಆದಾಯ ಇಳಿಕೆಯಾಗಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರಕ್ಕೂ ಜುಲೈ, ಆಗಸ್ಟ್‌ ತಿಂಗಳಲ್ಲಿ ಸಂಗ್ರಹವಾದ ತೆರಿಗೆ ಮೊತ್ತಕ್ಕೆ ಹೋಲಿಸಿದರೆ ಅಕ್ಟೋಬರ್‌ ತಿಂಗಳ ತೆರಿಗೆ ಮೊತ್ತದಲ್ಲಿ ಇಳಿಕೆ ಕಂಡಿದೆ.

ತೆರಿಗೆ ಪಾವತಿದಾರರ ಸಂಖ್ಯೆ ನಿರಂತರ ಕ್ಷೀಣ
ರಾಜ್ಯದಲ್ಲಿ ಜುಲೈ ವಹಿವಾಟಿಗೆ ಸಂಬಂಧಪಟ್ಟಂತೆ ಒಟ್ಟು 4.47 ಲಕ್ಷ ಮಂದಿ ವಹಿವಾಟಿನ ವಿವರ (ರಿಟರ್ನ್ಸ್) ಹಾಗೂ ತೆರಿಗೆ ಪಾವತಿಸಿದ್ದಾರೆ. ಆಗಸ್ಟ್‌ನಲ್ಲಿ 4.41 ಲಕ್ಷ ಮಂದಿ, ಸೆಪ್ಟೆಂಬರ್‌ ತಿಂಗಳ ವಹಿವಾಟಿಗೆ ಸಂಬಂಧಪಟ್ಟಂತೆ ಈವರೆಗೆ 4.35 ಲಕ್ಷ ಹಾಗೂ ಅಕ್ಟೋಬರ್‌ನ ತಿಂಗಳ ವಹಿವಾಟಿಗೆ ಸಂಬಂಧಿಸಿದಂತೆ ನವೆಂಬರ್‌ 16ರವರೆಗೆ 3,99, 235 ಮಂದಿ ರಿಟರ್ನ್ಸ್-ತೆರಿಗೆ ಪಾವತಿಸಿದ್ದಾರೆ. ಜಿಎಸ್‌ಟಿ ಜಾರಿ ಬಳಿಕ ತೆರಿಗೆ ಪಾವತಿದಾರರ ಸಂಖ್ಯೆ ನಿರಂತರವಾಗಿ ಕ್ಷೀಣಿಸುತ್ತಿದೆ. ಹಾಗೆಯೇ ಆದಾಯದಲ್ಲಿಯೂ ಏರಿಳಿಕೆಯಾಗುತ್ತಿದೆ ಎಂದು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಉನ್ನತಾಧಿಕಾರಿ “ಉದಯವಾಣಿ’ ಗೆ ತಿಳಿಸಿದ್ದಾರೆ.

Advertisement

ಶೇ.8ರಷ್ಟು ತೆರಿಗೆ ಆದಾಯ ಇಳಿಕೆ
ಜಿಎಸ್‌ಟಿ ಜಾರಿ ಬಳಿಕ ರಾಜ್ಯ ಸರ್ಕಾರಕ್ಕೆ ವಾಣಿಜ್ಯ ತೆರಿಗೆ ಮೂಲದಿಂದ ಮಾಸಿಕ ಸರಾಸರಿ 4000 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಜಿಎಸ್‌ಟಿಗಿಂತ ಮೊದಲು ಜಾರಿಯಲ್ಲಿದ್ದ ವ್ಯಾಟ್‌ ಪದ್ಧತಿಯಡಿ ರಾಜ್ಯದಲ್ಲಿ ಸಂಗ್ರಹವಾಗುತ್ತಿದ್ದ ಮಾಸಿಕ ತೆರಿಗೆ ಆದಾಯಕ್ಕೆ ಹೋಲಿಸಿದರೆ ಕಳೆದ ನಾಲ್ಕು ತಿಂಗಳಲ್ಲಿ ಸರಾಸರಿ ಶೇ.8ರಷ್ಟು ತೆರಿಗೆ ಆದಾಯ ತಗ್ಗಿದೆ. ತೆರಿಗೆ ಇಳಿಕೆ ಪ್ರಮಾಣ ತಗ್ಗಿಸಲು ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿವೆ.

ಕೇಂದ್ರದಿಂದ 2990 ಕೋಟಿ ರೂ. ಪರಿಹಾರ
ಜಿಎಸ್‌ಟಿ ಅನುಷ್ಠಾನದ ನಂತರ ರಾಜ್ಯ ಸರ್ಕಾರಗಳಿಗೆ ಮಾಸಿಕ ಸಂಗ್ರಹವಾಗುವ ವಾಣಿಜ್ಯ ತೆರಿಗೆ ಆದಾಯದಲ್ಲಿ ಇಳಿಕೆಯಾದರೆ ಆ ವ್ಯತ್ಯಾಸ ಮೊತ್ತವನ್ನು ಭರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಪ್ರತಿ ಎರಡು ತಿಂಗಳಿಗೊಮ್ಮೆ ಕೇಂದ್ರ ಸರ್ಕಾರವು ತೆರಿಗೆ ನಷ್ಟ ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ ನೀಡುತ್ತಿದೆ. ಅದರಂತೆ ಜುಲೈ, ಆಗಸ್ಟ್‌ ತಿಂಗಳ ನಷ್ಟ ಮೊತ್ತವಾಗಿ 1189 ಕೋಟಿ ರೂ. ಹಾಗೂ ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳ ನಷ್ಟ ಮೊತ್ತವಾಗಿ 1811 ಕೋಟಿ ರೂ. ಭರಿಸಿದೆ. ರಾಜ್ಯ ಸರ್ಕಾರದ ಕೋರಿಕೆಗೆ ಅನುಗುಣವಾಗಿ ಕೇಂದ್ರ ವಾಣಿಜ್ಯ ತೆರಿಗೆ ಇಲಾಖೆಯು ಪರಿಶೀಲಿಸಿ ನಷ್ಟ ಮೊತ್ತ ಬಿಡುಗಡೆಗೊಳಿಸಿದೆ.

ಬಿಗಿ ಕ್ರಮಕ್ಕೆ ಸಜ್ಜು
ಮಾಸಿಕವಾರು ವಾಣಿಜ್ಯ ತೆರಿಗೆ ಆದಾಯ ಕಡಿಮೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ನಾನಾ ಬಿಗಿ ಕ್ರಮಕ್ಕೆ ಮುಂದಾಗಿದೆ. ಜಿಎಸ್‌ಟಿಯಡಿ ಸಲ್ಲಿಸುತ್ತಿರುವ ವಹಿವಾಟಿನ ವಿವರ, ತೆರಿಗೆ ಪ್ರಮಾಣವನ್ನು ಈ ಹಿಂದೆ ವ್ಯಾಟ್‌ ಪದ್ಧತಿಯಡಿ ಸಲ್ಲಿಸಿದ್ದ ವಹಿವಾಟು ವಿವರ, ತೆರಿಗೆ ಮೊತ್ತದೊಂದಿಗೆ ತಾಳೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ.
ವ್ಯಾಪಾರ, ವಹಿವಾಟುದಾರರು ನಿಯಮಾನುಸಾರ ಗ್ರಾಹಕರಿಗೆ ರಸೀದಿ ನೀಡುತ್ತಿದ್ದಾರೆಯೇ, ನಿಗದಿತ ಪ್ರಮಾಣದ ತೆರಿಗೆಯನ್ನಷ್ಟೇ ಸಂಗ್ರಹಿಸಲಾಗುತ್ತಿದೆಯೇ ಎಂಬ ಬಗ್ಗೆಯೂ “ಪರೀಕ್ಷಾರ್ಥ ಖರೀದಿ’ (ಟೆಸ್ಟಿಂಗ್‌ ಪರ್ಚೇಸ್‌) ತಪಾಸಣೆ ನಡೆಸಲು ಸಿದ್ಧತೆ ನಡೆಸಿದೆ. ರಾಜ್ಯದ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ವಾಹನ ತಪಾಸಣೆ ರದ್ದಾಗಿದ್ದರೂ ಇಲಾಖೆಯ ಜಾಗೃತ ದಳಗಳು ಆಗಾಗ್ಗೆ ತಪಾಸಣೆ ಕೈಗೊಳ್ಳುತ್ತಿವೆ. ಇನ್ನು ಮುಂದೆ ಈ ತಪಾಸಣೆ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ದೂರು, ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಮಾಹಿತಿ ಆಧರಿಸಿಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಸಂಗ್ರಹವಾದ ಅಂದಾಜು ತೆರಿಗೆ
ತಿಂಗಳು    ಸಂಗ್ರಹವಾದ ತೆರಿಗೆ (ಕೋಟಿ ರೂ.)    ರಿಟರ್ನ್ಸ್ – ತೆರಿಗೆ ಪಾವತಿಸಿದವರು (ಲಕ್ಷ)
ಜುಲೈ    4,100    4.47
ಆಗಸ್ಟ್‌    4,200    4.41
ಸೆಪ್ಟೆಂಬರ್‌    4,203    4.35
ಅಕ್ಟೋಬರ್‌    4,050    3.99

– ಎಂ ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next