Advertisement

300 ಅಲ್ಲ,700 ಕೋಟಿ ರೂ.ಗಳ ವಂಚನೆ

06:00 AM Mar 13, 2018 | Team Udayavani |

ಬೆಂಗಳೂರು: ಹಣ ದ್ವಿಗುಣಗೊಳಿಸುವ ವಿಮೆಗಳು, ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಹೆಸರಿನಲ್ಲಿ ನೂರಾರು ಕೋಟಿ ರೂ. ವಂಚಿಸಿದ ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪೆನಿ ವಿರುದ್ಧ ದೂರುಗಳ ಮಹಾಪೂರವೇ ಹರಿದು ಬರುತ್ತಿದೆ. ಈಗಾಗಲೇ ಪೊಲೀಸರ ವಶದಲ್ಲಿರುವ ಆರೋಪಿಗಳಾದ ಶ್ರೀನಾಥ್‌ ಮತ್ತು ಸೂತ್ರಂ ಸುರೇಶ್‌ ಸೇರಿ ಐವರು ಆರೋಪಿಗಳು ವಂಚನೆ ಬಗ್ಗೆ ಇನ್ನಷ್ಟು ಮಾಹಿತಿ ಬಾಯಿಬಿಟ್ಟಿದ್ದು, ಇದು 700 ಕೋಟಿಗೂ ಮೀರಿದ ವಂಚನೆ ಎಂಬುದು ಗೊತ್ತಾಗಿದೆ. ಹೀಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಈಗಾಗಲೇ ಕ್ರಿಕೆಟಿಗರು, ಕ್ರೀಡಾಪಟುಗಳು ಹಾಗೂ ಗಣ್ಯ ವ್ಯಕ್ತಿಗಳನ್ನು ಟಾರ್ಗೆಟ್‌ ಮಾಡಿಕೊಂಡು ವಂಚಿಸಿರುವ ಆರೋಪಿಗಳು ಸರ್ಕಾರಿ ವೈದ್ಯರು, ಎಂಜಿನಿಯರ್‌ಗಳು, ನೌಕರರು ಸೇರಿ ಸಾಮಾನ್ಯ ವ್ಯಕ್ತಿಗಳಿಗೆ ಲಕ್ಷಾಂತರ ರೂ. ವಂಚಿಸಿದ್ದಾರೆ. ಈ ಸಂಬಂಧ ಸೋಮವಾರ ಸುಮಾರು 70ಕ್ಕೂ ಅಧಿಕ ಮಂದಿ ವಂಚನೆಗೊಳಗಾದ ಜನರು ಬಸವನಗುಡಿ ಠಾಣೆಗೆ ದೂರು ನೀಡಿದ್ದಾರೆ. ಈ ಪಟ್ಟಿಯಲ್ಲಿ 2 ಲಕ್ಷದಿಂದ 2 ಕೋಟಿ ವರೆಗೆ ವಂಚನೆಗೊಳಗಾದವರು ಇದ್ದಾರೆ.

ಮೂಲಗಳ ಪ್ರಕಾರ ಕ್ರೀಡಾಪಟುಗಳು, ಗಣ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ವಂಚನೆಗೊಳಗಾಗಿದ್ದಾರೆ. ಆದರೆ, ಇದುವರೆಗೂ ಅಂತಹ ವ್ಯಕ್ತಿಗಳು ಯಾರೂ ದೂರು ನೀಡಿಲ್ಲ. ಒಂದು ವೇಳೆ ಪ್ರಕರಣ ದಾಖಲಿಸಿದರೆ ತನಿಖೆಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.

ಎಲ್‌ಐಸಿ ಏಜೆಂಟ್‌ಗಳ ಮೂಲಕವೇ ವಂಚನೆ
ಶ್ರೀನಾಥ್‌ ಮತ್ತು ಸೂತ್ರಂ ಸುರೇಶ್‌ ಹೊರತು ಪಡಿಸಿದರೆ ಇನ್ನುಳಿದಂತೆ 40ಕ್ಕೂ ಅಧಿಕ ಮಂದಿ ಎಲ್‌ಐಸಿ ಏಜೆಂಟ್‌ಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿಯಿದೆ. ಈ ಸಂಬಂಧ ಅಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು. ಸಾಮಾನ್ಯವಾಗಿ ಎಲ್‌ಐಸಿ ಏಜೆಂಟ್‌ಗಳಿಗೆ ಎರಡೆರಡು ಕಂಪನಿಯ ವಿಮಾ ಪಾಲಿಸಿ ಮಾಡಿಸಲು ಅವಕಾಶವಿಲ್ಲ. ಆದರೆ, ಎಲ್‌ಐಸಿ ಏಜೆನ್ಸಿ ಜತೆಗೆ ಬೇರೆ ವ್ಯವಹಾರದಲ್ಲಿ ತೊಡಗುವ ಅವಕಾಶವಿರುತ್ತದೆ. ಇದನ್ನೆ ದುರುಪಯೋಗ ಪಡಿಸಿಕೊಂಡ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವರ್ಷದಿಂದ ಹಣ ನೀಡಿಲ್ಲ
ಆರೇಳು ವರ್ಷಗಳಿಂದ ಕಂಪೆನಿ ನಡೆಸುತ್ತಿರುವ ಆರೋಪಿಗಳು ಆರಂಭದಲ್ಲಿ ನ್ಯಾಯಯುತವಾಗಿ ಪ್ರತಿ ತಿಂಗಳು ಹಣ ಹಿಂದಿರುಗಿಸುತ್ತಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಹಣ ಹಿಂದಿರುಗಿಸದೆ ಆಗಾಗ ನೀಡುತ್ತಿದ್ದರು. ಕಳೆದ 8 ತಿಂಗಳಿಂದ ಯಾವುದೇ ಹಣ ನೀಡದೆ ವಂಚಿಸಿದ್ದಾರೆ ಎಂದು ಕೆಲವರು ದೂರಿನಲ್ಲಿ ಆರೋಪಿಸಿದ್ದಾರೆ.

Advertisement

ಪತ್ನಿಗಾಗಿ ಹುಡುಕಾಟ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಶ್ರೀನಾಥ್‌ ಪತ್ನಿ ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.
ಇದರೊಂದಿಗೆ ಶ್ರೀನಾಥ್‌ಗೆ ಸೇರಿದ 12 ಬ್ಯಾಂಕ್‌ ಖಾತೆಗಳು, ಎರಡು ಕಾರು ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next