Advertisement

ಖಾಸಗಿ ಬಸ್‌ನಿಲ್ದಾಣಕ್ಕೆ 30 ಕೋಟಿ ಅನುದಾನ

12:32 PM Jun 19, 2019 | Suhan S |

ಚನ್ನಪಟ್ಟಣ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಟ್ಟಣದ ಖಾಸಗಿ ಬಸ್‌ನಿಲ್ದಾಣ ಕಾಮಗಾರಿಗೆ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, 15 ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಪಟ್ಟಣದ ಶತಮಾನೋತ್ಸವ ಭವನದಲ್ಲಿ ನಡೆದ ಪಟ್ಟಣ ವ್ಯಾಪ್ತಿಯ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಬಸ್‌ನಿಲ್ದಾಣ ಕಾಮಗಾರಿಗೆ ಇರುವ ಅಡೆತಡೆಗಳನ್ನು ನಿವಾರಿಸಿಕೊಳ್ಳಲಾಗುತ್ತದೆ. ಆ ಮೂಲಕ ತಾಲೂಕಿನ ಜನತೆಯ ಬಹುದೊಡ್ಡ ಕನಸು ನನಸಾಗಿಸುವತ್ತ ಸರ್ಕಾರ ಮುಂದಾಗಲಿದೆ ಎಂದರು.

ಅಭಿವೃದ್ಧಿ ಕಾರ್ಯ: ಪಟ್ಟಣ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲೂ ಅಭಿವೃದ್ಧಿಗಾಗಿ 60 ಕೋಟಿ ರೂ., ಸುಮಾರು 100 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಅನುದಾನದಲ್ಲಿ ಯುಜಿಡಿ, 60 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್‌ ಎಜುಕೇಷನ್‌ ಮತ್ತು ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ನಿರ್ಮಾಣ, 24 ಗಂಟೆ ಕುಡಿಯುವ ನೀರಿನ ಪೂರೈಕೆಗಾಗಿ 80 ಕೋಟಿ ರೂ., 21 ಕೋಟಿ ರೂ. ವೆಚ್ಚದಲ್ಲಿ ಕೆಂಗಲ್ ಶ್ರೀ ಆಂಜನೇಯಸ್ವಾಮಿ ದೇವಾಲಯ ಅಭಿವೃದ್ಧಿ, ಕೊಳಚೆ ನಿರ್ಮೂಲನಾ ಮಂಡಳಿಯಿಂದ 1420 ಗುಂಪು ಮನೆಗಳ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅನುದಾನ ಬಿಡುಗಡೆಗೆ ತೀರ್ಮಾನ: ಬೀಡಿ ಕಾರ್ಮಿಕರಿಗೆ 588 ಮನೆಗಳ ನಿರ್ಮಾಣಕ್ಕಾಗಿ ಅರ್ಜಿ ಬಂದಿವೆ, ಉದ್ಯಾನ, ಗಾಂಧಿ ಭವನದ ಬಳಿ ಗ್ರಂಥಾಲಯ, ಎಲ್ಲ ಸರ್ಕಾರಿ ಕಚೇರಿಗಳೂ ಒಂದೆಡೆ ಇರುವಂತೆ ಅಭಿವೃದ್ಧಿ ಸೌಧ, ಹೊಸದಾದ ಪ್ರವಾಸಿ ಮಂದಿರ ನಿರ್ಮಿಸಲಾಗುವುದು. ಮಹದೇಶ್ವರ ದೇವಾಲಯಕ್ಕೆ 2 ಕೋಟಿ ರೂ. ಅನುದಾನ, ಚನ್ನಪಟ್ಟಣ ರಾಮನಗರ ನಡುವೆ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಜಾಗ ಪರಿಶೀಲನೆ ನಡೆಯುತ್ತಿದೆ. ರಾಜೀವ್‌ಗಾಂಧಿ ಆರೋಗ್ಯ ವಿವಿ ಕಟ್ಟಡಗಳ ನಿರ್ಮಾಣಕ್ಕೆ 700 ಕೋಟಿ ರೂ. ಬಿಡುಗಡೆ ಮಾಡಲು ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಲಾಗಿದೆ ಎಂದರು.

ಭರವಸೆ: ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ, ಅಂಬೇಡ್ಕರ್‌ ಭವನಕ್ಕೆ 2 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ, ದಲಿತ ಸಮಾಜದ ಕಾಲೋನಿಗಳಲ್ಲಿ ಅಂಬೇಡ್ಕರ್‌ ಭವನಗಳ ನಿರ್ಮಾಣ, ಮೂಲಭೂತ ಸೌಲಭ್ಯ ಕಲ್ಪಿಸಲು ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

Advertisement

ಅಪಾರ್ಥ ಬೇಡ: ತಾಲೂಕಿನಲ್ಲಿ ಕುಮಾರಸ್ವಾಮಿ ಶಾಸಕರಾದ ನಂತರ ಕೆರೆಗಳು ತುಂಬಿಸಿಲ್ಲ ಎನ್ನುವ ಸುಳ್ಳು ಹಬ್ಬಿಸಲಾಗುತ್ತಿದೆ. ಆದರೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ. 2015ರಲ್ಲಿ 35 ಕೆರೆಗಳು, 2016ರಲ್ಲಿ 44 ದಿನ ನೀರನ್ನು ಎತ್ತಿ 10 ಕೆರೆ, 2017ರಲ್ಲಿ ಕಣ್ವ ಕುಡಿಯುವ ನೀರಿನ ಯೋಜನೆಯಡಿ 85 ದಿನ ನೀರು ಎತ್ತಿ 25 ಕೆರೆಗಳನ್ನು ತುಂಬಿಸಿದ್ದಾರೆ. ನಾನು ಶಾಸಕನಾದ ನಂತರ 2018ರಲ್ಲಿ 158ದಿನ ನೀರು ಎತ್ತಿ 85 ಕೆರೆಗಳು ಭರ್ತಿ, 17 ಕೆರೆಗಳು ಭಾಗಶಃ ನೀರು ತುಂಬಿಸಿದ್ದೇನೆ, ಈ ಹಿಂದೆ ಇದ್ದವರು ಎಲ್ಲ ಕೆರೆಗಳನ್ನೂ ಎಲ್ಲಿ ತುಂಬಿಸಿದ್ದರು ಎಂದು ಸಿಎಂ ಪ್ರಶ್ನಿಸಿದರು.

ಆತಂಕ ಬೇಡ: ನಾನು ಕ್ಷೇತ್ರಕ್ಕೆ ಬರದಿದ್ದರೂ ಎಲ್ಲ ಕೆಲಸಗಳನ್ನೂ ಮಾಡಿಕೊಡುತ್ತೇನೆ, ಸುಲಭವಾಗಿ ಸರ್ಕಾರ ಹೋಗಲು ಕೆಲವರು ಬಿಡುತ್ತಿಲ್ಲ ಆದರೂ ಸರ್ಕಾರ ಬೀಳಲು ಬಿಡಲ್ಲ, ಹೇಗೆ ಕಾಪಾಡಬೇಕೆಂದು ನನಗೆ ಗೊತ್ತಿದೆ, ಜನತೆಗೆ ಆತಂಕ ಬೇಡ ಎಂದರು.

ಸಮಯಾವಕಾಶ ಕೊಡಿ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಕಾರ್ಯಕ್ರಮಗಳ ಅನುಷ್ಠಾನ, ರಾಮನಗರ ಹಾಗೂ ಚನ್ನಪಟ್ಟಣ ಅವಳಿ ನಗರಗಳ ಅಭಿವೃದ್ಧಿಗೆ ಈಗಲೂ ಬದ್ದನಾಗಿದ್ದೇನೆ, ಸ್ಪನ್‌ಸಿಲ್ಕ್ ಮಿಲ್ ನವೀಕರಿಸಿ ಸುಮಾರು 1000ಮಂದಿಗೆ ಉದ್ಯೋಗ ನೀಡುವ ಗುರಿ ಇದೆ, ಹಲವಾರು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬೇಕಿದೆ. ನನಗೆ ಸಮಯಾವಕಾಶ ಕೊಡಿ ಎಲ್ಲವನ್ನೂ ಮಾಡುತ್ತೇನೆ ಎಂದು ಹೇಳಿದರು.

ದಿನವಿಡೀ ಕೆಲಸ: ಎಷ್ಟೇ ಕೆಲಸ ಮಾಡಿದರೂ ಜನತೆ ನನ್ನ ಭಾವನೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವ ಕೊರಗಿದೆ, ಕೆಲಸಕ್ಕೆ ಬೆಲೆ ಸಿಗುತ್ತಿಲ್ಲ ಎನ್ನುವ ನೋವಿದೆ ಆದರೂ ನಾನು ರೈತರ, ರಾಜ್ಯದ ಜನತೆಯ ಒಳಿತಿಗಾಗಿ ದಿನವಿಡೀ ಕೆಲಸ ಮಾಡುತ್ತಿದ್ದೇನೆ, ಎಲ್ಲ ರಾಜ್ಯದ ಸಮಗ್ರ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡಿದ್ದೇನೆ ಎಂದರು.

ಸುಮಾರು ಎರಡೂವರೆ ಗಂಟೆಗಳ ಕಾಲ ಸಾರ್ವಜನಿಕರಿಂದ ಸಿಎಂ ಅಹವಾಲು ಸ್ವೀಕಾರ ಮಾಡಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next